ಕೊಡಗು ಕರ್ನಾಟಕ ರಾಜ್ಯದಲ್ಲೇ ಪುಟ್ಟ ಜಿಲ್ಲೆ. ಕಾವೇರಿಯ ನಾಡು ಪುಟ್ಟ ಜಿಲ್ಲೆಯಾ ದರೂ ಕ್ರೀಡೆ, ಸಾಹಿತ್ಯ, ಕಲೆಯ ಬೀಡಾಗಿದೆ. ಈ ಎಲ್ಲಾ ರಂಗದಲ್ಲಿ ತನ್ನದೇಯಾದ ಕೊಡುಗೆಯನ್ನು, ಕೊಡಗು ಜಿಲ್ಲೆಯು ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಎಲೆ ಮರೆ ಕಾಯಿಯಂತಿರುವ ಹಲವಾರು ಪ್ರತಿಭೆಗಳನ್ನು ನಮಗೆ ಇಲ್ಲಿ ಕಾಣ ಸಿಗಬಹುದು. ಅವರುಗಳಿಗೆ ಸರಿಯಾದ ಪ್ರೋತ್ಸಾಹದ ಕೊರತೆಯಿಂದಾಗಿ ತಮ್ಮ ಪ್ರತಿಭೆಯನ್ನು ಪ್ರಚಾರ ಪಡಿಸಲು ಸಾಧ್ಯವಾಗುತ್ತಿಲ್ಲ. ಅಂತಹವರ ಪಟ್ಟಿಯಲ್ಲಿ ಸೇರಿದವಾರಗಿ ದ್ದಾರೆ ಸುಂಟಿಕೊಪ್ಪದ ಅಭೂತಪೂರ್ವ ಕಲೆಗಾರ “ವಹೀದ್ ಜಾನ್”.
ಚಿತ್ರ ಕಲಾವಿದರಾಗಿರುವ ವಹೀದ್ ಜಾನ್‍ರವರು ಕಳೆದ ಹಲವಾರು ವರ್ಷಗಳಿಂದ ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರ ಬಿಡಿಸುವುದರಲ್ಲಿ ತೊಡಗಿಕೊಳ್ಳುತ್ತಾರೆ. ವೃತ್ತಿಯಲ್ಲಿ ಜವಳಿ ವ್ಯಾಪಾರಿಯಾಗಿರುವ ಇವರು ಕ್ರಯಾನ್ ಡ್ರಾಯಿಂಗ್, ಬಾಲ್ ಪೆನ್ ಡ್ರಾಯಿಂಗ್‍ನಲ್ಲಿ ಬಿಳಿ ಕಾಗದದ ಮೇಲೆ ಬಣ್ಣ ಹಚ್ಚಿ ಹರಿತವಾದ ಅಥವಾ ಮೊನಚಾದ ಉಪಕರಣಗಳಿಂದ ಹಾಗೂ ಉಗುರುಗಳಿಂದ ಚಿತ್ರ ರಚಿಸುತ್ತಿದ್ದಾರೆ. ನಿಜಕ್ಕೂ ಇವರ ಈ ಪ್ರತಿಭೆಯನ್ನು ಮೆಚ್ಚಲೆಬೇಕಾಗಿದೆ. ಇವರ ಮನೆಯ ಗೋಡೆಯ ಮೇಲೆ ಇವರು ಪ್ರಕೃತಿಯ ಸೊಬಗಿನ ಬಗ್ಗೆ ರಚಿಸಿರುವ 350ಕ್ಕೂ ಹೆಚ್ಚು “ಕಲಾಕೃತಿಗಳನ್ನು’’ ನಮಗೆ ಕಾಣಬಹುದಾಗಿದೆ.
ತನ್ನ ಚಿತ್ರಕಲಾರಂಗದಲ್ಲಿನ ಸಾಧನೆಗೆ ಕುಟುಂಬ ವರ್ಗದವರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ವಹೀದ್ ಜಾನ್. ತಮ್ಮ ಬಿಡುವಿನ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಕಲೆಯ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ವಹೀದ್ ಜಾನ್‍ರವರು 1950 ಅಕ್ಟೋಬರ್ 06 ರಂದು ಬಾಪು ಜಾನ್ ಹಾಗೂ ಆಸ್ಸಿಯ ದಂಪತಿಗಳ ಪುತ್ರನಾಗಿ ಜನಿಸಿದರು. ಇವರು 1-5 ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಸುಂಟಿಕೊಪ್ಪ ದಲ್ಲಿ ಪೂರೈಸಿದರು. ನಂತರ ವಿದ್ಯಾಭ್ಯಾಸವು ಕೇರಳದ ಕ್ಯಾಲಿಕೆಟ್‍ನಲ್ಲಿ ಮಾಡಿದರು. ಬಾಲ್ಯದಲ್ಲಿ ಮಲಯಾಳಂ ಮಾಧ್ಯಮದಲ್ಲಿ ಕೇರಳದ ಕೋಯಿಕೋಡಿನಲ್ಲಿ ಓದಿ ಕನ್ನಡಾಭಿಮಾನವನ್ನು ಬೆಳೆಸಿಕೊಂಡಿದ್ದಾರೆ. ಸುಂಟಿಕೊಪ್ಪ ದಲ್ಲಿ ಕನ್ನಡ ವೃತ್ತವನ್ನು ಹುಟ್ಟು ಹಾಕಿದ ಕೀರ್ತಿ ವಹೀದ್ ಜಾನ್ ರವರಿಗೆ ಸಲ್ಲುತ್ತದೆ. ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು ಇಟ್ಟುಕೊಂಡಿರುವ ವಹೀದ್ ಜಾನ್ ರವರು ಚುಟುಕು ಸಾಹಿತಿಯಾಗಿದ್ದಾರೆ. 300 ಕ್ಕೂ ಹೆಚ್ಚು ಚುಟುಕುಗಳನ್ನು ಬರೆದಿದ್ದಾರೆ, ಹಾಗೂ ಹವ್ಯಾಸಿ ಪತ್ರಕರ್ತನಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ.
ಇವರ ಕಲೆಯನ್ನು ಗುರುತಿಸಿ “ನಮ್ಮ ಸುಂಟಿಕೊಪ್ಪ ಬಳಗ “ವತಿಯಿಂದ ನೀಡುವ “ಸ್ಟಾರ್ ಆಫ್ ಸುಂಟಿಕೊಪ್ಪ’’ ಪ್ರಶಸ್ತಿಗೆ ವಹೀದ್‍ಜಾನ್ ಭಾಜನರಾಗಿದ್ದಾರೆ.
ಜೆ.ಸಿ ಕ್ಲಬ್, ಕನ್ನಡಭಿಮಾನ ಸಂಘ, ಕನ್ನಡ ಸಾಹಿತ್ಯ ಪರಿಷತ್, ವತಿಯಿಂದಲೂ ಇವರನ್ನು ಸನ್ಮಾನಿಸಲಾಗಿದೆ. ಅಲ್ಲದೇ ಕನ್ನಡ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದರ ಮೂಲಕ ಸಾಮಾಜಿಕ ರಂಗದಲ್ಲಿ ಸೈ ಎನಿಸಿದ್ದಾರೆ. ಬಹುಭಾಷಾ ಪಾಂಡಿತ್ಯವನ್ನು ಹೊಂದಿರುವ ವಹೀದ್ ಜಾನ್ ರವರು ಹಲವಾರು ಬಹುಭಾಷ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ?ಕೆ. ಎಂ. ಇಸ್ಮಾಯಿಲ್,
ಕಂಡಕರೆ