ಸೋಮವಾರಪೇಟೆ, ಮಾ.9: ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಇಂದು ಕುಶಾಲನಗರದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಪ್ರಥಮ ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ಯುವ ಮನಸ್ಸುಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಶಾಲನಗರ ಹೋಬಳಿ ಘಟಕ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ಆಯೋಜಿಸಲ್ಪಟ್ಟಿದ್ದ ಯುವ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು.ಸಮ್ಮೇಳನದ ಅಂಗವಾಗಿ ಕಾಲೇಜು ಆವರಣದಲ್ಲಿ ಬೆಳಗ್ಗೆ ಡಿವೈಎಸ್‍ಪಿ ಮುರಳೀಧರ್ ಅವರು ರಾಷ್ಟ್ರಧ್ವಜ, ಜಿ.ಪಂ. ಸದಸ್ಯ ಅಬ್ದುಲ್ ಲತೀಫ್ ಅವರು ನಾಡ ಧ್ವಜ ಮತ್ತು ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಪರಿಷತ್ತಿನ ಧ್ವಜವನ್ನು ಆರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.ನಂತರ ಕುಶಾಲನಗರದ ಗಣಪತಿ ದೇವಾಲಯದಿಂದ ಪಾಲಿಟೆಕ್ನಿಕ್ ಕಾಲೇಜುವರೆಗೆ ನೂರಾರು ಯುವ ಕನ್ನಡ ಮನಸ್ಸುಗಳ ಕನ್ನಡ ಪರ ಜಯಘೋಷದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಅಲಂಕೃತ ವಾಹನದಲ್ಲಿ ಕನ್ನಡಾಂಭೆಯ ಭಾವಚಿತ್ರವನ್ನಿಟ್ಟು ಯುವ ಜನಾಂಗ ‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ, ಕನ್ನಡಕ್ಕೆ ಜೈ, ಕನ್ನಡವೇ ಸತ್ಯ-ಕನ್ನಡವೇ ನಿತ್ಯ’ ಇತ್ಯಾದಿ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಾಲಿನ ಆಡಳಿತ ಮಂಡಳಿ ರಚನೆಗೊಂಡಾಗಿನಿಂದ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯದ ತೇರನ್ನು ಎಳೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಹಲವಷ್ಟು ಕಾರ್ಯಕ್ರಮಗಳಿಗೆ ರಾಜ್ಯಕ್ಕೆ ಮಾದರಿಯಾಗಿದ್ದು, ಯುವ ಸಮ್ಮೇಳನವನ್ನು ಪ್ರಥಮವಾಗಿ ಕೊಡಗಿನಲ್ಲಿ ಆಯೋಜಿಸುವ ಮೂಲಕ ಮತ್ತೊಮ್ಮೆ ಅನುಕರಣೀಯ ದಾರಿಯನ್ನು ತೋರಿತು.
ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮತ್ತು ಪದಾಧಿಕಾರಿಗಳ ಪ್ರಯತ್ನದಿಂದ ಈವರೆಗೆ 3 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, 6 ತಾಲೂಕು ಸಾಹಿತ್ಯ ಸಮ್ಮೇಳನವನ್ನು ನಡೆಸಿದ್ದು, ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ(2), ಮಕ್ಕಳ ಸಾಹಿತ್ಯ ಸಮ್ಮೇಳನ(2) ಕೃಷಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಇದೀಗ ಮತ್ತೊಂದು ಹೆಜ್ಜೆಯಾಗಿ ಯುವ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ರಾಜ್ಯದ ಇತರ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‍ಗೆ ಮಾದರಿಯಾಯಿತು.
ಇದರೊಂದಿಗೆ ಪತ್ರಕರ್ತ ಎಸ್.ಎ. ಮುರಳೀಧರ್ ಅವರ ತಾಯಿ ಪಾರ್ವತಮ್ಮ ಅವರ ಜ್ಞಾಪಕಾರ್ಥ ಅಂತರ್ ಕಾಲೇಜು ಭಾವಗೀತೆ ಸ್ಪರ್ಧೆ, ಯುವ ಜನಾಂಗದಲ್ಲಿ ಕನ್ನಡ ಸಾಹಿತ್ಯದ, ಗೀತೆಗಳ ಬಗ್ಗೆ ಅಭಿರುಚಿ ಮೂಡಿಸುವ ಉದ್ದೇಶದಿಂದ ಆಯೋಜಿಸಲ್ಪಟ್ಟಿದ್ದ ಭಾವ ಸಂಗಮ, ಯುವ ಕವಿಗಳಿಗೆ ವೇದಿಕೆ ಒದಗಿಸುವ ಮೂಲಕ ಸಾಹಿತ್ಯ ಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆಸಲಾದ ಯುವ ಕವಿಗೋಷ್ಠಿ, ವಿಚಾರ ಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಯುವ ಸೌರಭಕ್ಕೆ ಇನ್ನಷ್ಟು ಮೆರುಗು ತಂದವು.
ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಕೋಶಾಧ್ಯಕ್ಷ ಮುರಳೀಧರ್,
(ಮೊದಲ ಪುಟದಿಂದ) ಮಾಧ್ಯಮ ಕಾರ್ಯದರ್ಶಿ ಅಶ್ವಥ್, ನಾಗರಾಜ ಶೆಟ್ಟಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಕೋಶಾಧ್ಯಕ್ಷ ವೀರರಾಜು, ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಗೌ. ಕಾರ್ಯದರ್ಶಿ ಹಂಡ್ರಂಗಿ ನಾಗರಾಜು, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಸೇರಿದಂತೆ ಪದಾಧಿಕಾರಿಗಳು, ನೂರಾರು ಮಂದಿ ಕನ್ನಡಾಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ನಂತರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡು ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ಯುವ ಸಾಹಿತ್ಯ ಸಮ್ಮೇಳನದ ಭಾವ ಸಂಗಮ ಕಾರ್ಯಕ್ರಮ, ಸಾಹಿತ್ಯಾಭಿಮಾನಿ ಗಳನ್ನು ಭಾವನೆಗಳ ಕಡಲಿನಾಳಕ್ಕೆ ಕರೆದೊಯ್ಯಿತು.
ಭಾವ ಸಂಗಮ ಕಾರ್ಯ ಕ್ರಮವನ್ನು ಯುವ ಗಾಯಕ ಹಾಗೂ ಪತ್ರಕರ್ತ ರೆಜಿತ್‍ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಯುವ ಜನಾಂಗದಲ್ಲಿ ಸಾಹಿತ್ಯದ ಕೃಷಿ ಹೆಚ್ಚಾಗಬೇಕು ಎಂದು ಆಶಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ಗಾಯಕರುಗಳಾದ ಶ್ರೀರಕ್ಷಾ, ವಿನಿಶಾ, ಲಖಿತಾ, ಜನಿಫರ್ ಸಾಲ್ಡಾನ, ಕವಿತಾ, ಮಮತ, ಪಲ್ಲವಿ, ಅಕ್ಷಯ್ ಅವರುಗಳಿಂದ ಮೂಡಿ ಬಂದ ಭಾವಗೀತೆಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಜಿ.ಎಸ್. ಶಿವರುದ್ರಪ್ಪ, ಕುವೆಂಪು, ಬೇಂದ್ರೆ ಸೇರಿದಂತೆ ಕನ್ನಡದ ಮಹಾನ್ ಕವಿಗಳಿಂದ ರಚಿಸಲ್ಪಟ್ಟ ಗೀತೆಗಳಿಗೆ ಯುವ ಗಾಯಕರು ಭಾವನೆಗಳನ್ನು ತುಂಬಿ ಶುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ವೇದಿಕೆಯಲ್ಲಿ ಉಪನ್ಯಾಸಕ ಎನ್.ಎಸ್. ಲೋಕೇಶ್, ವಿಭಾಗಾದಿ üಕಾರಿ ಉಮಾಪತಿ, ಪತ್ರಕರ್ತ ತೇಲಪಂಡ ಕವನ್ ಕಾರ್ಯಪ್ಪ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕವಿ ತೀರ್ಥೆಶ್, ಉದಯ ಟಿ.ವಿ. ನಿರೂಪಕ ಬೋಪಯ್ಯ, ಕಸಾಪ ಪದಾಧಿಕಾರಿ ಕೋಡಿ ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.
ಸಾಮಾಜಿಕ ಬದ್ಧತೆಯನ್ನು ಚರ್ಚೆಗೆ ಹಚ್ಚಿದ ವಿಚಾರಗೋಷ್ಠಿ
ಯುವ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ, ಯುವ ಸಮುದಾಯದಿಂದ ಮಂಡಿಸಲ್ಪಟ್ಟ ವಿಚಾರಧಾರೆಗಳು ಸಾಮಾಜಿಕವಾಗಿ ಯುವ ಜನಾಂಗದ ಮೇಲೆ ಬೆಳಕು ಚೆಲ್ಲಿದವು.
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಯುವ ಬರಹಗಾರರು ವಿಷಯ ಮಂಡಿಸಿದರು.
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ‘ದೇಶ ರಕ್ಷಣೆಯಲ್ಲಿ ಯುವ ಜನತೆಯ ಪಾತ್ರ’ ವಿಷಯದ ಕುರಿತು ವಿಚಾರ ಮಂಡಿಸಿ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಯುವ ಶಕ್ತಿ ದೇಶದಲ್ಲಿದ್ದು, ದುಶ್ಚಟಗಳಿಗೆ ಬಲಿಯಾಗದೇ ದೇಶಕ್ಕಾಗಿ ಬದುಕುವಂತಾಗಬೇಕು. ದೇಶದ ಆಂತರಿಕ ರಕ್ಷಣೆಯಲ್ಲಿ ಸೈನಿಕರಂತೆ ಕೆಲಸ ನಿರ್ವಹಿಸುವ ಮೂಲಕ ಸಮಾಜಕ್ಕೆ ಪೂರಕವಾಗುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
‘ಸಾಹಿತ್ಯ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ’ ವಿಷಯ ಬಗ್ಗೆ ವಿಚಾರ ಮಂಡಿಸಿದ ಪತ್ರಕರ್ತ ವಿಘ್ನೇಶ್ ಭೂತನಕಾಡು ಅವರು, ಸಾಹಿತ್ಯ ಕ್ಷೇತ್ರಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಮುದ್ರಣ ಮಾಧ್ಯಮಗಳು ಸಾಹಿತ್ಯದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿವೆ. ಪತ್ರಿಕೋದ್ಯಮ ಇಲ್ಲದಿದ್ದರೆ ಸಾಹಿತ್ಯ ಕ್ಷೇತ್ರದಲ್ಲಿ ಈ ಮಟ್ಟಿಗಿನ ಬೆಳವಣಿಗೆ ನಿರೀಕ್ಷಿಸಲು ಅಸಾಧ್ಯ ಎಂದು ಅಭಿಪ್ರಾಯಿಸಿದರು.
ದೇಶದ ಸಂಸ್ಕøತಿ, ಸಾಹಿತ್ಯದ ಮಹತ್ವ;ಅದರ ಉಳಿವಿಗಾಗಿ ಯುವ ಜನತೆಯ ಪಾತ್ರ ವಿಷಯದ ಬಗ್ಗೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಗುರುಕಿರಣ್ ವಿಚಾರ ಮಂಡಿಸಿದರು.
‘ಸ್ವಯಂ ಉದ್ಯೋಗ ಮತ್ತು ಯುವ ಜನತೆ’ ವಿಷಯದ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ ವಿ.ಆರ್. ಮಧುರ ಅವರು, ದೇಶದಲ್ಲಿ ಯುವ ಜನತೆ ಹೆಚ್ಚಿದ್ದರೂ ನಿರೀಕ್ಷಿತ ಉದ್ಯೋಗ ಸೃಷ್ಟಿಯಾಗಿಲ್ಲ. ಪರಿಣಾಮ ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ವಿದ್ಯಾವಂತರಾದರೂ ಉದ್ಯೋಗದ ಖಾತ್ರಿ ಕಾಣುತ್ತಿಲ್ಲ. ಈ ಹಿನ್ನೆಲೆ ಯುವ ಜನರು ಸ್ವಯಂ ಉದ್ಯೋಗದತ್ತ ಗಮನ ಹರಿಸಬೇಕು. ಯಾವ ಉದ್ಯೋಗವೂ ಕೀಳಲ್ಲ ಎಂಬದನ್ನು ಮನಗಾಣಬೇಕು ಎಂದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್, ಕಸಾಪ ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು
ಸಮಾರೋಪದಲ್ಲಿ ಬೋಪಯ್ಯ
ಇಂಗ್ಲೀಷ್ ವ್ಯಾಮೋಹದ ನಡುವೆಯೂ ಕನ್ನಡಕ್ಕೆ ಮಾತೆಯ ಸ್ಥಾನ ನೀಡಬೇಕು. ಮಾತೃ ಭಾಷೆಯೇ ಪ್ರಥಮ ಆದ್ಯತೆಯಾಗ ಬೇಕು ಎಂದು ಉದಯ ಟಿ.ವಿ. ನಿರೂಪಕ ಬೋಪಯ್ಯ ಅವರು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಶಾಲನಗರ ಹೋಬಳಿ ಘಟಕ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ಯುವ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನ್ಯ ಭಾಷೆಗಳ ಹಾವಳಿ ಮಧ್ಯೆ ಕನ್ನಡ ಭಾಷೆ ಮಸುಕಾಗುತ್ತಿರುವ ಸಂದರ್ಭ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ಅತ್ಯವಶ್ಯಕ. ಸುಮಧುರ, ಸುಲಲಿತ ಭಾಷೆಯಾ ಗಿರುವ ಕನ್ನಡ ಎಂದಿಗೂ ಬೆಳೆಯುತ್ತಲೇ ಇರಬೇಕು. ಸಾಹಿತ್ಯಿಕ ಚಟುವಟಿಕೆಗಳು ಇನ್ನಷ್ಟು ಹೆಚ್ಚಬೇಕು ಎಂದು ಬೋಪಯ್ಯ ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರ ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ಮಾತನಾಡಿ, ಸಾಹಿತ್ಯವನ್ನು ಜೀವಂತಿಕೆಯಿಂದ ಇಡಲು ಸಮ್ಮೇಳನ ಸಹಕಾರಿ. ಸಹಸ್ರಾರು ಮಂದಿಯ ಹೋರಾಟದ ಫಲವಾಗಿ ಕಾವೇರಿ ತಾಲೂಕು ಹೋರಾಟ ಈಡೇರಿದೆ. ದೇಶವನ್ನು ಕಟ್ಟುವ ಶಕ್ತಿ ಯುವ ಜನಾಂಗಕ್ಕಿದೆ. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನ ಬದಲಾಗುತ್ತಿದೆ. ಯುವ ಜನಾಂಗವನ್ನು ಕವಲು ದಾರಿಯಲ್ಲಿ ನಿಲ್ಲಿಸಲಾಗಿದೆ ಎಂದರು.
ನಾಡಿನ ಪ್ರಜೆಗಳಲ್ಲಿ ಸಂಸ್ಕಾರ ಇದ್ದರೆ ಮಾತ್ರ ನಾಡು ಸುಭೀಕ್ಷೆಯಿಂದಿರುತ್ತದೆ. ಸಾಹಿತ್ಯ ಸಮ್ಮೇಳನಗಳು ಇವುಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಮಾತನಾಡಿ, ಕಳೆದ 3 ವರ್ಷಗಳಲ್ಲಿ ಕಸಾಪದಿಂದ 182 ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಹಿಂದೆ ಇದ್ದ ಮೂರು ವರ್ಷದ ಅವಧಿಯನ್ನು ಇದೀಗ ಎರಡೂವರೆ ವರ್ಷಕ್ಕೆ ವಿಸ್ತರಿಸಿದ್ದು, ಮುಂದಿನ ಎರಡೂವರೆ ವರ್ಷದಲ್ಲೂ ಇನ್ನಷ್ಟು ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು. ವೇದಿಕೆಯಲ್ಲಿ ಶ್ರೀ ರಾಜೇಶ್‍ನಾಥ್ ಗುರೂಜಿ, 13ನೇ ಜಿಲ್ಲಾ ಸಮ್ಮೇಳನಾಧ್ಯಕ್ಷ ಭಾರಧ್ವಾಜ್ ಕೆ. ಆನಂದತೀರ್ಥ, ಕಾಲೇಜು ಪ್ರಾಂಶುಪಾಲ ಕೆಂಪೇಗೌಡ, ನಿವೃತ್ತ ಪ್ರಾಂಶುಪಾಲ ಶಿವಪ್ಪ, ಕಸಾಪ ಪದಾಧಿಕಾರಿಗಳಾದ ಪ್ರಭಾಕರ್, ಅಶ್ವಥ್, ನಾಗರಾಜಶೆಟ್ಟಿ, ಮುರಳೀಧರ್, ರಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸನ್ಮಾನ:
ಇದೇ ಸಂದರ್ಭ ಸಮಾಜ ಕವಯತ್ರಿ, ಪತ್ರಕರ್ತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಲಾಯಿತು. ವೀರಾಜಪೇಟೆಯ ರಂಜಿತಾ ಕಾರ್ಯಪ್ಪ, ಕೊಡ್ಲಿಪೇಟೆಯ ಶಿಕ್ಷಕ ಸತೀಶ್, ತಾವೂರಿನ ಕವಿ ಬಿ.ಬಿ. ಕಿಶೋರ್‍ಕುಮಾರ್, ಚೆಂಬು ಗ್ರಾಮದ ಕವಯತ್ರಿ ಸಂಗೀತ ರವಿರಾಜ್, ಕುಶಾಲನಗರದ ಮಂಜು ಭಾರ್ಗವಿ, ಸತೀಶ್, ಸಂಗೀತ ಸಂಯೋಜಕ ದರ್ಶನ್ ಸಾಗರ್, ಪತ್ರಕರ್ತ ವಿಜಯ್ ಹಾನಗಲ್, ವೀರಾಜಪೇಟೆಯ ಶ್ರೇಯಸ್, ಪತ್ರಕರ್ತ ಮಾಲಂಬಿ ದಿನೇಶ್, ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಸೈನಿಕರ ತ್ಯಾಗ;ಪ್ರಕೃತಿ ವಿಕೋಪದ ತಾಪವನ್ನು ಪದಗಳಲ್ಲಿ ಹಿಡಿದಿಟ್ಟ ಕವಿಗೋಷ್ಠಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಶಾಲನಗರ ಹೋಬಳಿ ಘಟಕ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಯುವ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಯುವ ಕವಿಗಳು, ಸೈನಿಕರ ತ್ಯಾಗ ಬಲಿದಾನ, ಕೊಡಗಿನ ಪ್ರಾಕೃತಿಕ ವಿಕೋಪ ಸೇರಿದಂತೆ ಇನ್ನಿತರ ದೃಷ್ಟಾಂತಗಳನ್ನು ತಮ್ಮ ಕವನದ ಸಾಲುಗಳಲ್ಲಿ ಹಿಡಿದಿಟ್ಟರು.
ಪ್ರಾಕೃತಿಕ ವಿಕೋಪದಲ್ಲಿ ತನ್ನ ಮನೆಯನ್ನೇ ಕಳೆದುಕೊಂಡಿರುವ, ಮಡಿಕೇರಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎನ್.ಎಂ. ಲತಾ ಅವರು ವಾಚಿಸಿದ ‘ಕೇಳಿ ನಗದಿರಿ’ ಕವನದಲ್ಲಿ ತಮ್ಮ ಮನದಾಳದ ನೋವುಗಳನ್ನು ತೋಡಿಕೊಂಡರು. ತಂದೆ ತಾಯಿ ಕಷ್ಟಪಟ್ಟು ಬೆವರು ಸುರಿಸಿ ಕಟ್ಟಿದ ಮನೆ ಮಹಾ ಮಳೆಗೆ ಕಣ್ಮರೆಯಾದರೂ ಸಹ ಮನದಾಳದಲ್ಲಿ ಮನೆಯ ಕನಸು ಮೊಳಕೆಯೊಡೆಯುತ್ತಿದೆ ಎಂದು ತಮ್ಮ ಭಾವನೆಗಳನ್ನು ಅಕ್ಷರದ ವಾಚಿಸಿದರು. ಹಿರಿಯ ಕವಿಗಳಾದ ತೀರ್ಥೆಶ್ ಅವರು ಸಮಕಾಲೀನ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ ಕಾಜೂರು ಸತೀಶ್ ಅವರು ಕವನಗಳ ವಿಮರ್ಶೆ ಯೊಂದಿಗೆ, ಕವನಗಳನ್ನು ರಚಿಸುವ ವಿಧಾನ, ಪ್ರಸ್ತುತಪಡಿಸುವಿಕೆಯ ಬಗ್ಗೆ ಯುವ ಕವಿಗಳಿಗೆ ಮಾಹಿತಿ ಒದಗಿಸಿದರು. ಕಸಾಪ ಪದಾಧಿಕಾರಿ ಗಳಾದ ಗಣೇಶ್ ಮತ್ತು ಮಹೇಂದ್ರ ಕವಿಗೋಷ್ಠಿ ನಿರ್ವಹಿಸಿದರು.