ಶನಿವಾರಸಂತೆ, ಮಾ. 9: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದಲ್ಲಿ ಸಹೋದರರಿಬ್ಬರ ಆಸ್ತಿಯ ಖಾತೆ ಮಾಡಿಕೊಡುವ ವಿಚಾರದಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪ ಕತ್ತಿಯಿಂದ ಹಲ್ಲೆಗೊಳಗಾದ ಘಟನೆ ನಡೆದಿದೆ.
ಶೆಟ್ಟಿಗನಹಳ್ಳಿಯ ನಿವಾಸಿಗಳಾದ ಹೆಚ್.ಪಿ. ಧರ್ಮಪ್ಪ ಹಾಗೂ ಗಣೇಶ ಅವರುಗಳ ಆಸ್ತಿ ಜಂಟಿ ಖಾತೆಯಲ್ಲಿದ್ದು, ಇದುವರೆಗೂ ಆಸ್ತಿಯನ್ನು ಅವರವರ ಖಾತೆಗೆ ಮಾಡಿಕೊಂಡಿಲ್ಲ. ಇಂದು ಬೆಳಿಗ್ಗೆ ಧರ್ಮಪ್ಪ ಅವರ ಅಣ್ಣನ ಮಗ ಆರೋಪಿ ಸಚಿನ್ ಏಕಾಏಕಿ ಕತ್ತಿಯೊಂದಿಗೆ ಬಂದು ಚಿಕ್ಕಪ್ಪನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಗಾಯಗೊಳಿಸಿ ಬೆದರಿಕೆ ಹಾಕಿರುವದಾಗಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.