ವೀರಾಜಪೇಟೆ, ಮಾ. 9: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹಾಗೂ ಮಾನಭಂಗಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿನಾಂಕ 24.1.2017 ರಂದು ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಕರಡಿಗೋಡು ಗ್ರಾಮದ ಪಣಿ ಎರವರ ರವಿ ಎಂಬಾತನಿಗೆ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಮಾ ಅವರು ಫೋಕ್ಸೋ ಕಾಯ್ದೆಯಡಿ ಮೂರು ವರ್ಷ ಸಜೆ, ರೂ. 15 ಸಾವಿರ ದಂಡ ಹಾಗೂ ಐಪಿಸಿ 506ರಡಿ ಎರಡೂವರೆ ವರ್ಷ ಸಜೆ ಹಾಗೂ ರೂ. 5 ಸಾವಿರ ದಂಡ ವಿಧಿಸಿದ್ದು, ದಂಡದ ಹಣದಲ್ಲಿ ರೂ. 15 ಸಾವಿರವನ್ನು ಬಾಲಕಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಶಾಲೆಗೆ ತೆರಳಿ ಹಿಂತಿರುಗುತ್ತಿದ್ದ ಅಪ್ರಾಪ್ತೆ ಮೇಲೆ ದಿ. 1.8.2015 ರಂದು ಮಾನಭಂಗಕ್ಕೆ ಯತ್ನಿಸಿದ್ದ ಬಿಳುಗುಂದ ಗ್ರಾಮದ ಯೋಗೇಶ್ ಎಂಬಾತನಿಗೆ ನ್ಯಾಯಾಧೀಶರಾದ ರಮಾ ಅವರು ಫೋಕ್ಸೋ ಕಾಯ್ದೆಯಡಿ 5 ವರ್ಷ ಸಜೆ, ರೂ. 20 ಸಾವಿರ ದಂಡ, ಐಪಿಸಿ 354 (ಎ) ಅಡಿ ಮೂರು ವರ್ಷ ಸಜೆ ಹಾಗೂ ರೂ. 15 ಸಾವಿರ ದಂಡ ವಿಧಿಸಿದ್ದು, ದಂಡದ ಹಣದಲ್ಲಿ ಬಾಲಕಿಗೆ ರೂ. 20 ಸಾವಿರವನ್ನು ಪರಿಹಾರವಾಗಿ ನೀಡುವಂತೆ ಸೂಚಿಸಿದ್ದಾರೆ. ಎರಡೂ ಪ್ರಕರಣಗಳಲ್ಲೂ ಸರಕಾರದ ಪರ ಸರಕಾರಿ ಅಭಿಯೋಜಕರಾದ ಡಿ. ನಾರಾಯಣ್ ವಾದಿಸಿದರು.