ಮಡಿಕೇರಿ, ಮಾ. 8: ಸಮಾಜದ ಎಲ್ಲ ರಂಗದಲ್ಲಿಯೂ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅವರವರ ಕೌಶಲ್ಯತೆ, ನೈಪುಣ್ಯತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಚಿನ್ನದ ವ್ಯಾಪಾರಸ್ಥರಿಗೂ ಪ್ರಮಾಣ ಪತ್ರ ನೀಡುವ ಮೂಲಕ ಅವರ ವೃತ್ತಿ ಕೌಶಲ್ಯತೆಗೆ ಗೌರವ ನೀಡಿದಂತಾಗುತ್ತದೆ ಎಂದು ಶಾಸಕÀ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟ ಇವರ ಸಹಭಾಗಿತ್ವದಲ್ಲಿ ನಗರದ ಬಾಲಭವನದಲ್ಲಿ ನಡೆದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಿನ್ನಕ್ಕೆ ಆಕರ್ಷಣೀಯ ರೂಪ ನೀಡಿದಾಗ ಮಾತ್ರ ಅದನ್ನು ಉಪಯೋಗಿಸಲು ಸಾಧ್ಯ. ಆ ಕೆಲಸದಲ್ಲಿ ಅಕ್ಕಸಾಲಿಗರ ವೃತ್ತಿ ನೈಪುಣ್ಯತೆ ಮೆಚ್ಚುವಂತಹದ್ದು ಹಾಗೂ ಪ್ರಮಾಣ ಪತ್ರ ಪಡೆದ ಪ್ರತಿಯೊಬ್ಬರೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಅಕ್ಕಸಾಲಿಗರಿಗೆ ಪ್ರಮಾಣ ಪತ್ರ ವಿತರಿಸುತ್ತಿರುವದು ತುಂಬಾ ಸಂತೋಷದ ವಿಷಯವಾಗಿದೆ. ಯಾವದೇ ವ್ಯಕ್ತಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವದು ಅತ್ಯವಶ್ಯಕವಾಗಿದೆ ಎಂದರು.
ಸರ್ಕಾರ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಅಕ್ಕಸಾಲಿಗರ ವೃತ್ತಿಯಲ್ಲಿ ತೊಡಗಿರುವವರ ಕೈಚಳಕ, ನೈಪುಣ್ಯತೆ ಶ್ಲಾಘನೀಯ ಎಂದರು.
ಪ್ರಾಸ್ತ್ತಾವಿಕವಾಗಿ ಮಾತನಾಡಿದ ಉಮೇಶ ಆಚಾರ್ಯ ಅವರು; ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಯೋಜನೆಯನ್ನು 2014 ರಲ್ಲಿ ಜಾರಿಗೆ ತರಲಾಗಿದ್ದು, ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿ ಅವಧಿಯಲ್ಲಿ ಗೋಲ್ಡ್ ಕಂಟ್ರೋಲ್ ಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಪರವಾನಿಗೆ ನೀಡಲಾಗಿತ್ತು, ನಂತರದಲ್ಲಿ ಗೋಲ್ಡ್ ಕಂಟ್ರೋಲ್ ಕಾಯ್ದೆ ರದ್ದುಪಡಿಸಿದ ನಂತರ ಚಿನ್ನದ ಕೆಲಸ ಮಾಡುವವರನ್ನು ಗುರುತಿಸುವ ಕಾರ್ಯ ನಡೆಯಲಿಲ್ಲ. ಈಗ ಅಕ್ಕಸಾಲಿಗರನ್ನು ಗುರುತಿಸುವ ಕಾರ್ಯ ನಡೆದಿದೆ. ಅಕ್ಕಸಾಲಿಗರಿಗೆ ಆರ್.ಪಿ.ಎಲ್ (ಪೂರ್ವ ಕಲಿಕೆ ಗುರುತಿಸುವದು) ಅನ್ವಯವಾಗತ್ತದೆ. ಪೂರ್ವಜರು ಕಲಿತ ವಿದ್ಯೆಯನ್ನು ಈಗಿನ ಯುವಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಉಡುಪಿ, ಮಂಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯ ಅಕ್ಕಸಾಲಿಗರಿಗೆ ತರಬೇತಿ ನೀಡಿ ಅವರಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್, ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಕೆ.ರವಿ ಆಚಾರ್ಯ, ಎಂ.ಎ. ಮನೋಹರ್, ಬಿ.ಎಸ್.ಉಲ್ಲಾಸ್ ಶೇಟ್, ಸುರೇಶ್ ಜಿ.ಆಚಾರ್ಯ ಇತರರು ಇದ್ದರು.