ಮಡಿಕೇರಿ, ಮಾ. 8: ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿಯ ಬದುಕು ನಡೆಸಲು ಮಹಿಳೆಯರು ತಮಗಿರುವ ಕಾನೂನನ್ನು ಖಡ್ಗದಂತೆ ಬಳಸುವ ಬದಲು ಕವಚದಂತೆ ಬಳಸಿಕೊಂಡರೆ ಜೀವನವು ಸಂತೋಷದಿಂದ ತುಂಬಿರುವದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವಿ.ವಿ.ಮಲ್ಲಾಪುರ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನ್ಯಾಯಾಂಗ ಇಲಾಖಾ ನೌಕರರ ಸಂಘ ಮತ್ತು ಸರ್ಕಾರಿ ಅಭಿಯೋಜನಾ ಇಲಾಖೆ ಇವರ ಸಂಯುಕ್ತಾಶ್ರ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನೊಂದಿಗೆ ನಮ್ಮ ಜೀವನವನ್ನು ಹೊಂದಾಣಿಕೆಯೊಂದಿಗೆ ನಡೆಸಿಕೊಂಡು ಸಾಗಿಸುವದು ಅತಿಮುಖ್ಯ. ಸರ್ಕಾರ ರಚಿಸಿದ ಹಲವಾರು ಕಾನೂನುಗಳು ಮಹಿಳೆಯ ಹಕ್ಕುಗಳನ್ನು ರಕ್ಷಣೆ ಮಾಡುವದರೊಂದಿಗೆ ಸಂಕಷ್ಟದಲ್ಲಿ ನೆರವಿಗೆ ಬಂದು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ನುಡಿದರು.
ಇಂದು ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿದ್ದು, ಇದರೊಂದಿಗೆ ಕಾನೂನಿನ ರಕ್ಷಣೆಯೊಂದಿಗೆ ಮಹಿಳೆಯರನ್ನು ಶಕ್ತರನ್ನಾಗಿ ಮಾಡಿದೆ ಎಂದು ಅವರು ಹೇಳಿದರು.
ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಮಾತನಾಡಿ ಮಹಿಳೆಯರು ಪ್ರತಿಯೊಬ್ಬರ ಜೀವನದಲ್ಲೂ ಮಹತ್ತರ ಪಾತ್ರವನ್ನು ವಹಿಸುತ್ತಾರೆ. ಮಹಿಳೆಯರು ಪ್ರಸ್ತುತ ಕಾಲ ಘಟ್ಟದಲ್ಲಿ ಪುರುಷರಂತೆ ಹಲವು ಮಹತ್ತರ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ವಿಜಯ ಕುಮಾರ್ ಮಾತನಾಡಿ ಹೆಣ್ಣು ಮಕ್ಕಳು ಸೃಷ್ಟಿಯ ನಿಯಮದಲ್ಲಿ ಮೇಲು ಸ್ಥಾನದಲ್ಲಿರುವದು ಹೆಮ್ಮೆಯ ವಿಚಾರ. ಪ್ರತಿ ಹಂತದಲ್ಲೂ ಮಹಿಳೆಯರ ಪಾತ್ರ ಮಹತ್ವವಾಗಿದ್ದು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದು, ಮಹಿಳೆಯರಿಗೆ ಇರುವಂತಹ ಕಾನೂನನ್ನು ಅವಶ್ಯವಿದ್ದಾಗ ಬಳಸಿಕೊಳ್ಳುವಂತೆ ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಕೆ.ಮನು ಮಾತನಾಡಿ ಪ್ರತಿ ಪುರುಷರ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಮಹತ್ತರವಾದುದು. ಎಲ್ಲಾ ರಂಗದಲ್ಲು ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಖ್ಯ ಪಾತ್ರವಹಿಸುತ್ತಿದ್ದಾರೆ ಎಂದರು.
ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ ಮಾತನಾಡಿ ಮಾರ್ಚ್ 8 ಮಹಿಳೆಯರಿಗೆ ಮಹತ್ತರ ದಿನವಾಗಿದ್ದು ಜಗತ್ತಿನಾದ್ಯಂತ ಶ್ರೇಷ್ಠ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಆಚರಣೆ ಮಾಡುವ ಸುದಿನವಾಗಿದ್ದು, ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ತಮ್ಮ ಮಹತ್ತರ ಪಾತ್ರವಹಿಸಿದ್ದಾರೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನಿಸ ಅವರು ಮಾತನಾಡಿ 1931 ರಿಂದ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳೆಯು ಮಗಳಾಗಿ, ಸೊಸೆಯಾಗಿ, ತಾಯಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಜೀವನದಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಕುಟುಂಬವನ್ನು ಕಟ್ಟುವಂತಹ ಕೆಲಸವನ್ನು ಮಾಡುತ್ತಿರುವದು ಹೆಮ್ಮೆಯ ವಿಚಾರ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಮ್ ಮಾತನಾಡಿ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದರೆ ಶಾಲೆಯೊಂದು ತೆರೆದಂತೆ, ಪೋಷಕರು ಹೆಣ್ಣು, ಗಂಡು ಎಂಬ ಬೇಧ ಮಾಡದೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ಸ್ವಾವಲಂಬಿಗಳಾಗಿ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಹಿಳಾ ನಿರ್ದೇಶಕಿ ದಿವ್ಯ, ಜನಿತಾ, ನ್ಯಾಯಾಂಗ ಇಲಾಖೆಯ ನೌಕರರು, ವಕೀಲರು ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಇತರರು ಇದ್ದರು. ವಕೀಲರಾದ ಕೆ.ಎಂ. ಮೀನಾಕುಮಾರಿ ಸ್ವಾಗತಿಸಿದರು. ನ್ಯಾಯಾಂಗ ಇಲಾಖೆಯ ನೌಕರರಾದ ಜಿ.ಸಿ.ಮೀನಾ ನಿರೂಪಿಸಿದರು.