ವೀರಾಜಪೇಟೆ, ಮಾ. 8: ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದ ಮೇರೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಆರೋಪಿ ಜೆ.ಕೆ. ರಾಜು (50) ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಜೆ.ಕೆ.ರಾಜು ಕಳೆದ ತಾ:27-3-2018 ರಂದು ರಾತ್ರಿ 9ಗಂಟೆ ಸಮಯದಲ್ಲಿ ತನ್ನ ಪತ್ನಿ ಪದ್ಮ (45) ಎಂಬಾಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಂತೆ ಸಿದ್ದಾಪುರ ಪೊಲೀಸರು ವೀರಾಜಪೇಟೆ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಗೊಂಡಿದೆ.
ದಂಡದ ರೂ.30.000 ಹಣದಲ್ಲಿ ರೂ. 20,000ವನ್ನು ಮೃತಳ ಮದುವೆಯಾಗದ ಮಕ್ಕಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.
ಸರ್ಕಾರದ ಪರ ಸಹಾಯಕ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.