ಸೋಮವಾರಪೇಟೆ, ಮಾ. 8: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ಪಟ್ಟಣದಲ್ಲಿ ರನ್ ಫಾರ್ ನೈನ್ ಘೋಷಣೆಯಡಿ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಜಾಥಾ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಇಲ್ಲಿನ ಜೇಸಿ ವೇದಿಕೆ ಬಳಿಯಿಂದ ವಿವಿಧ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಯುವತಿಯರ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ನಂತರ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಆರ್. ನಾಗರಾಜಯ್ಯ ಉದ್ಘಾಟಿಸಿ ಮಾತನಾಡಿ, ದುಡಿಯುವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿದ್ದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಶತಮಾನಗಳಿಂದಲೂ ಮಹಿಳೆ ಪಕ್ಷಪಾತ, ದೌರ್ಜನ್ಯ, ಸ್ವಾರ್ಥತೆಗೆ ಬಲಿಯಾಗಿದ್ದಾಳೆ. ಮನೆಯ ಒಳಗೂ, ಹೊರಗೂ ಎಲ್ಲ ಕೆಲಸಗಳನ್ನು ಶ್ರೇಣೀಕರಿಸದೆ, ಸಮಾನ ಆಸಕ್ತಿಯಿಂದ, ಪ್ರೀತಿಯಿಂದ, ದಕ್ಷತೆಯಿಂದ ಮಾಡುವದರೊಂದಿಗೆ ಆತ್ಮಸ್ಥೈರ್ಯ, ದೃಢತೆ, ವಿಶ್ವಾಸಾರ್ಹತೆಗೆ ಅರ್ಹಳಾಗಿದ್ದಾಳೆ ಎಂದರು.

ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರಬಾರದು. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವಂತೆ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆಯೂ ಚಿಂತನೆ ನಡೆಸಬೇಕು. ದುಡಿಯುವ ಮಹಿಳೆಯ ಕೈಗೆ ಶಕ್ತಿ ತುಂಬಬೇಕು. ಸಧೃಡ ಸಮಾಜದ ನಿರ್ಮಾಣದಲ್ಲಿ ಸಶÀಕ್ತ ಮಹಿಳೆಯ ಪಾತ್ರ ಶ್ರೇಷ್ಠವಾದುದು. ಇಂದಿಗೂ ಹೆಣ್ಣುಮಕ್ಕಳು ಸಮಾಜದ ಆಸ್ತಿಯಾಗಿದ್ದಾರೆ. ಮಹಿಳೆಯರಲ್ಲಿ ಸಾಧಿಸುವ ಛಲ, ಎದೆಗಾರಿಕೆ, ಛಲವಿದ್ದರೆ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥಬರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ಪದಾಧಿಕಾರಿಗಳಾದ ಮಾಯಾ ಗಿರೀಶ್, ಕೆ.ಎ. ಪ್ರಕಾಶ್, ಸುಮಲತಾ ಉಪಸ್ಥಿತರಿದ್ದರು.