ಕೂಡಿಗೆ, ಮಾ. 7: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕುಶಾಲನಗರ ವಕೀಲರ ಸಂಘ, ತೊರೆನೂರು ಗ್ರಾಮ ಪಂಚಾಯಿತಿ ಹಾಗೂ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಶಿಬಿರ ಕಾರ್ಯಕ್ರಮವು ತೊರೆನೂರು ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನೂರುನ್ನೀಸ ಉದ್ಘಾಟಿಸಿ, ಮಾತನಾಡಿ, ಕಾನೂನಿನ ಅರಿವನ್ನು ಸರ್ವರೂ ಅರಿತುಕೊಂಡಾಗ ಎಲ್ಲರೂ ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಶಾಲನಗರದ ಜೆ.ಎಂ.ಎಫ್.ಸಿ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ್ ಮಾತನಾಡಿ, ಜನಸಾಮಾನ್ಯರು ಸಾಮಾನ್ಯವಾಗಿ ತಿಳಿಯಬೇಕಾದ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ವಿ. ದೇವರಾಜ್ ವಹಿಸಿದ್ದರು. ಈ ಸಂದರ್ಭ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೇಷ್ಣೇಗೌಡ, ತೊರೆನೂರು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್, ಸಹಕಾರ ಸಂಘದ ನಿರ್ದೇಶಕ ಹೆಚ್.ಪಿ. ಚಂದ್ರಪ್ಪ ಹಾಗೂ ಇನ್ನಿತರರು ಇದ್ದರು.