ಕುಶಾಲನಗರ, ಮಾ. 7: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಮೈಸೂರು ವಿಭಾಗದ ಆಯ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕುಶಾಲನಗರದ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ತರಬೇತಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 29 ಜಿಲ್ಲಾ ಸಹಕಾರ ಯೂನಿಯನ್‍ಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಸುಮಾರು 42 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ರಾಜ್ಯ ಸರ್ಕಾರದ ಅವಧಿಯಲ್ಲಿ ಸುಮಾರು ಎಂಟು ಸಾವಿರದ ನಾನೂರು ಕೋಟಿ ರೂಪಾಯಿಗಳ ಸಾಲ ಮನ್ನಾ ಈ ಬಾರಿಯ ಸರ್ಕಾರದಲ್ಲಿ ಸುಮಾರು ರೂ. 9400 ಕೋಟಿ ಸಾಲ ಮನ್ನಾ ಆಗಿದೆ. ಈ ಎಲ್ಲಾ ಸಾಲ ಮನ್ನಾಗಳಿಂದ ರೈತರಿಗೆ ಉಪಯೋಗವಾಗಿದ್ದು, ಸಹಕಾರಿ ಕ್ಷೇತ್ರಗಳಿಂದ ಸಾಲ ಪಡೆದದ್ದಕ್ಕೆ ಮಾತ್ರ ರೈತರಿಗೆ ಉಪಯೋಗವಾಗಲು ಸಾಧ್ಯ ವಾಗಿದೆ ಎಂದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಜನಸಾಮಾನ್ಯರಿಗೆ ತಲಪುತ್ತಿಲ್ಲ ಹಾಗೂ ಹಳ್ಳಿಗಾಡು ಮತ್ತು ಅರಣ್ಯ ವಾಸಿಗಳಿಗೆ ಮಾಹಿತಿಯ ಕೊರತೆ ಇರುವದರಿಂದ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ವಿತರಿಸಬೇಕಾದದ್ದು ಅನಿವಾರ್ಯವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗಿರಿಜನ ಲ್ಯಾಂಡ್ ಸೊಸೈಟಿಯ ಅಧ್ಯಕ್ಷರೂ ಆದ ಎಸ್.ಎನ್. ರಾಜಾರಾವ್ ಸಾಮಾನ್ಯ ಬಡ ರೈತರು ಸಹಕಾರ ಸಂಘಗಳಿಂದ ಸಾಲ ಸೌಲಭ್ಯ ಪಡೆಯಬೇಕಾದರೆ ಬ್ಯಾಂಕಿನ ಅಧಿಕಾರಿಗಳು ಹೇಳಿದಂತೆ ಕೇಳಬೇಕಾಗುತ್ತದೆ ಅಲ್ಲದೆ ಕಡಿಮೆ ಮೊತ್ತಕ್ಕೆ ಅಧಿಕ ಸಮಯದವರೆಗೂ ಅಲೆಯ ಬೇಕಾದಂತಹ ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಭಾಗಮಂಡಲ ಜಿಲ್ಲಾ ಪಂಚಾಯಿತಿ ಸದಸ್ಯ ಕುಮಾರ್. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಸಹಕಾರ ಸಂಘಗಳ ಅಪರ ನಿಬಂಧಕರಾದ ಶಶಿಧರ ಎಲೆ, ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಇನ್ನಿತರರು ಹಾಜರಿದ್ದರು.