ಸುಂಟಿಕೊಪ್ಪ, ಮಾ. 8: ಪ್ರತಿಯೊಬ್ಬ ವಿಶೇಷಚೇತನರು ಗುರುತಿನ ಚೀಟಿಗಳನ್ನು ಪಡೆದು ಕೊಳ್ಳಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಮಡಿಕೇರಿ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಕಾವೇರಪ್ಪ ಹೇಳಿದರು.

ಕೂರ್ಗ್ ಫೌಂಡೇಷನ್ ಮತ್ತು ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ, ಸಮೂದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದ ಸಂಯುಕ್ತ ಸಹಭಾಗಿತ್ವದಲ್ಲಿ ವಿಶೇಷಚೇತನರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಸಾಧನ ಸಲಕರಣೆಗಳ ಮಾಪನ ಹಾಗೂ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು

ವಿಶೇಷಚೇತನರಿಗೆ ವೈದ್ಯಕೀಯ ಕಾಲೇಜಿನ ವತಿಯಿಂದ ಕೈಲಾದಷ್ಟು ಸಹಾಯ ಮಾಡಲಾಗುತ್ತದೆ. ಅಲ್ಲದೇ ಸಮಾಜದಲ್ಲಿ ಎಲ್ಲರೂ ಅವರನ್ನು ಸಾಮಾನ್ಯ ಜನರಂತೆ ನೋಡಿ ಕೊಳ್ಳಬೇಕು ಎಂದು ಕರೆ ನೀಡಿದರು.

ಮಡಿಕೇರಿ ಇ.ಎನ್.ಟಿ. ವೈದ್ಯ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ವಿಶೇಷಚೇತನರ ಆರೋಗ್ಯದ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾನಸಿಕ ರೋಗ ತಜ್ಞೆ ಡಾ. ಶುಭ ಮಾತನಾಡಿ, ವಿಶೇಷಚೇತನರನ್ನು ನೋಡಿಕೊಳ್ಳುವ ಪೋಷಕರಲ್ಲಿ ತಾಳ್ಮೆ ಇರಬೇಕು. ಮಕ್ಕಳಿಗೆ ಮತ್ತು ಪೋಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಈ ತರಬೇತಿಯಲ್ಲಿ ಪಾಲ್ಗೊಳ್ಳಬೇಕು. ಮಕ್ಕಳ ಬಗ್ಗೆ ಸಮಸ್ಯೆ ಇದ್ದರೇ ವೈದ್ಯರಲ್ಲಿ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಅಮ್ಮತ್ತಿ ಜನರಲ್ ಪಿಜಿಸಿಯನ್ ಡಾ. ದಿವ್ಯಾ ಕರುಂಬಯ್ಯ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಮೂಳೆ ತಜ್ಞ ಡಾ. ಶ್ರೀಧರ್, ಡಾ. ನಿಖಿತ, ಬೆಂಗಳೂರು ಸಾಧನ ಸಲಕರಣೆಯ ಮಾಪನ ತಜ್ಞ ಸುಂದರೇಶ್, ಕಣ್ಣಿನ ವೈದ್ಯ ಡಾ. ಪ್ರಶಾಂತ್, ಪೋಷಕರ ಸಂಘದ ಅಧ್ಯಕ್ಷೆ ಶಾಂತಿ ಕೃಷ್ಣಯ್ಯ ಇತರರು ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ವಹಿಸಿದ್ದರು. ಒಟ್ಟಾರೆಯಾಗಿ 72 ಮಂದಿ ಆರೋಗ್ಯ ತಪಾಸಣೆ ಮಾಡಿಸಿದ್ದು, 36 ಮಂದಿ ವಿಶೇಷಚೇತನರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಸ್ವಸ್ಥ ಶಾಲೆಯ ಸಂಚಾಲಕ ಮುರುಗೇಶ್ ನಿರೂಪಿಸಿ, ಶಿಕ್ಷಕಿ ಶೀತಲ್ ವಂದಿಸಿದರು.