ಸೋಮವಾರಪೇಟೆ, ಮಾ. 7: ಗ್ರಾಮ ಪಂಚಾಯಿತಿ ಕಿರಗಂದೂರು, ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಜೇಸಿ ಬೋಸ್ ಪರಿಸರ ಸಂಘ ಮತ್ತು ಜಾಗೃತಿ ಸಂಸ್ಥೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಕಿರಗಂದೂರು ಅಭಿಯಾನ ನಡೆಸಲಾಯಿತು.
ಶಾಲೆಯಿಂದ ಹೊರಟ ಜಾಗೃತಿ ಜಾಥಾವನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಉದ್ಘಾಟಿಸಿದರು. ಶಾಲೆಯಿಂದ ಹೊರಟ ಜಾಗೃತಿ ಜಾಥಾವು ಕಿರಗಂದೂರು ಪಂಚಾಯಿತಿ ಆಸುಪಾಸು ಹಾಗೂ ಜನವಸತಿ ಪ್ರದೇಶದಲ್ಲಿ ಪ್ಲಾಸ್ಟಿಕ್‍ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಘೋಷಣೆ ಕೂಗಿ ಜನರಲ್ಲಿ ಅರಿವು ಮೂಡಿಸಲಾಯಿತು.
ನಂತರ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಹಾಗೂ ಇತರ ಕಸವನ್ನು ಶ್ರಮದಾನದ ಮೂಲಕ ವಿಲೇವಾರಿ ಮಾಡಿದರು. ಸಮಾರೋಪದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಬಿ. ಪೊನ್ನಪ್ಪ ಮಾತನಾಡಿ, ಪ್ಲಾಸ್ಟಿಕ್‍ಗಳು ಭೂಮಿಯ ಮೇಲೆ ಕರಗದೆ ಪರಿಸರ ಮಾಲಿನ್ಯ ಉಂಟುಮಾಡುತ್ತದೆ. ಇದನ್ನು ಜಾನುವಾರುಗಳು ತಿಂದು ಮರಣಹೊಂದುತ್ತವೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದರು.
ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್.ಜಿ. ಪ್ರಸನ್ನಕುಮಾರ್, ಜೇಸಿ ಬೋಸ್ ಇಕೋ ಕ್ಲಬ್‍ನ ಸಂಚಾಲಕ ಇ. ಸುಲೇಮಾನ್, ಪ್ರೌಢಶಾಲಾ ಪ್ರಬಾರ ಮುಖ್ಯ ಶಿಕ್ಷಕ ಎ. ವಿಜು, ಸಹ ಶಿಕ್ಷಕರಾದ ಎನ್.ಎನ್. ಶಿವಣ್ಣ, ಹೆಚ್.ಎಂ. ರಮೇಶ್, ಕೆ.ಜೆ. ರಶ್ಮಿ, ವಿನೋದ, ಶಾಂತಮ್ಮ, ರಮ್ಯ, ಹೆಚ್.ಎಸ್. ಮಂಜುನಾಥ್ ಮತ್ತು ಮೈತ್ರಿ ಉಪಸ್ಥಿತರಿದ್ದರು.