ಕುಶಾಲನಗರ, ಮಾ. 6: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಪಂಚಾಯ್ತಿಗೆ ಒಳಪಟ್ಟ ಹಳೆಯ ಕಟ್ಟಡಗಳನ್ನು ತೆರವು ಗೊಳಿಸಲು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಮಾರ್ಚ್ 8 ರ ಒಳಗೆ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಹಳೆಯ ಕಟ್ಟಡದಲ್ಲಿರುವ ವ್ಯಕ್ತಿಗಳಿಗೆ ತಿಳುವಳಿಕೆ ನೀಡಿದ್ದಾರೆ.

ಕಟ್ಟಡದ ಶಿಥಿಲತೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ತಾಂತ್ರಿಕವಾದ ಅಭಿಪ್ರಾಯವನ್ನು ಪಡೆದುಕೊಂಡಿದ್ದು ತಜ್ಞರ ಅಭಿಪ್ರಾಯದಂತೆ ಅನುಸೂಚಿತ ಕಟ್ಟಡಗಳು, ವ್ಯಾಪಾರ ಉಪಯೋಗಿ ಸ್ಥಿತಿಯಲ್ಲಿ ಇಲ್ಲದೆ ಇರುವುದರಿಂದ ಮತ್ತು ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟಾಗುವ ರೀತಿಯಲ್ಲಿ ಇರುವ ಹಿನ್ನಲೆಯಲ್ಲಿ ಸದರಿ ಕಟ್ಟಡವನ್ನು ಕೆಡವಲು ಆದೇಶ ನೀಡಿರುತ್ತಾರೆ ಎಂದು ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾರ್ಚ್ 8 ರ ಒಳಗೆ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಪಂಚಾಯ್ತಿ ಕ್ರಮಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ತೆರವುಗೊಳಿಸಿದ ನಂತರ ಇದೇ ಪ್ರದೇಶದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಪಪಂ ಉದ್ದೇಶ ಹೊಂದಿದ್ದು ಈಗಾಗಲೆ ಈ ಸಂಬಂಧ ಕಾಮಗಾರಿ ಪ್ರಾರಂಭಗೊಂಡಿದೆ. ಸುಮಾರು 7.5 ಕೋಟಿ ರು ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ ಎಂದು ಸುಜಯ್‍ಕುಮಾರ್ ಮಾಹಿತಿ ನೀಡಿದ್ದಾರೆ.