ಮಡಿಕೇರಿ, ಮಾ.6 : ಮಾಜಿ ಸೈನಿಕರು ಹಾಗೂ ಅವರ ಅವಲಂಬಿತ ರನ್ನು ರಾಜ್ಯ ಸರಕಾರ ಮತ್ತು ಕೊಡಗು ಜಿಲ್ಲಾಡಳಿತ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ (ಕೆಸ್ಪಾ), ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಮಾಜಿ ಸೈನಿಕರ ಬೃಹತ್ ರ್ಯಾಲಿ ನಡೆಸುವ ಮೂಲಕ ತಕ್ಕ ಉತ್ತರ ನೀಡುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೇಜರ್ ಜನರಲ್ (ನಿವೃತ್ತ) ಬಿ.ಎ.ಕಾರ್ಯಪ್ಪ ಅವರು, ಜಿಲ್ಲೆಯಲ್ಲಿ ಸುಮಾರು 15-20 ಸಾವಿರ ಮಂದಿ ಮಾಜಿ ಸೈನಿಕರು, ವಿಧವೆಯರು ಹಾಗೂ ಅವರ ಅವಲಂಬಿತರು ವಾಸವಿದ್ದರೂ, ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಸರಕಾರಗಳು ಹಾಗೂ ಜಿಲ್ಲಾಡಳಿತ ಕನಿಷ್ಟ ಅವರ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಮಾತ್ರವಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಕೂಡ ಮಾಜಿ ಸೈನಿಕರ ಅದಾಲತ್ ನಡೆಸುವದಾಗಲಿ, ಅಹವಾಲು ಸ್ವೀಕರಿಸುವದಾಗಲಿ ಮಾಡಿಲ್ಲ ಎಂದು ಆರೋಪಿಸಿದರು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೂ ಕುಸಿತದಿಂದ ಕೊಡಗು ಜಿಲ್ಲೆಯ ಹಲವಾರು ಮಾಜಿ ಸೈನಿಕರಿಗೂ ತುಂಬಲಾರದ ಹಾನಿಯಾದ್ದರೂ, ಅವರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವದೇ ಪರಿಹಾರ ದೊರಕಿಲ್ಲ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರಿಗೂ ಸಮುದಾಯ ಭವನ ನೀಡಿರುವ ಸರಕಾರ ಮಾಜಿ ಸೈನಿಕರಿಗಾಗಿ ಕನಿಷ್ಟ ಒಂದು ಸಮುದಾಯ ಭವನ, ಮಾಜಿ ಸೈನಿಕರ ಅಹವಾಲು ಸ್ವೀಕರಿಸಲು ಜಿಲ್ಲಾ ಕೇಂದ್ರದಲ್ಲಿ ಮಾಜಿ ಸೈನಿಕರ ಸಂಘಕ್ಕೆ ಕಚೇರಿಯನ್ನು ನೀಡುವ ಸೌಜನ್ಯವನ್ನೂ ತೋರಿಲ್ಲ ಎಂದು ಟೀಕಿಸಿದರು. ಅಲ್ಲದೆ ಕನಿಷ್ಟ ಸೈನಿಕ ಕಲ್ಯಾಣ ಇಲಾಖೆಯ ಕಟ್ಟಡದಲ್ಲಾದರೂ ಸಂಘದ ಕಚೇರಿಗೆ ಅವಕಾಶ ಕಲ್ಪಿಸುವಂತಾಗಬೇಕು ಎಂದು ಆಗ್ರಹಿಸಿದರು.

ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗೆ ಸರಕಾರ 10 ಎಕರೆ ಭೂಮಿಯನ್ನು ಮಂಜೂರು ಮಾಡುತ್ತಿತ್ತು. ಆದರೆ ಸೇನೆಯಲ್ಲಿ ಸುಮಾರು 15 ರಿಂದ 40 ವರ್ಷಗಳವರೆಗೆ ಸೇವೆ ಸಲ್ಲಿಸಿರುವ ಕೊಡಗಿನ ಮಾಜಿ ಸೈನಿಕರಿಗೆ ಸರಕಾರಿ ಜಾಗ ಮಂಜೂರು ಮಾಡುವ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ಕ್ರಮ ಕೈಗೊಳ್ಳದ ಪರಿಣಾಮ ಯಾವದೇ ಮಾಜಿ ಸೈನಿಕರಿಗೂ ಜಾಗ ಮಂಜೂರಾಗುತ್ತಿಲ್ಲ. ಆದರೆ ಹೊರಗಿನಿಂದ ಬರುವ ಭೂ ಮಾಫಿಯಾ ವ್ಯಕ್ತಿಗಳಿಗೆ ಮಾತ್ರ ಭೂಮಿ ಮಂಜೂರಾಗುತ್ತಿದ್ದು, ಭೂಮಿಗಾಗಿ ಅರ್ಜಿ ಸಲ್ಲಿಸಿದ ಸುಮಾರು 250ಕ್ಕೂ ಅಧಿಕ ಮಾಜಿ ಸೈನಿಕರ ಅರ್ಜಿಗಳು ಧೂಳು ತಿನ್ನುತ್ತಾ ಬಿದ್ದಿವೆ ಎಂದು ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಅನೇಕ ರಾಜ್ಯದಲ್ಲಿ ಮಾಜಿ ಸೈನಿಕರ ಮನೆ ಕಂದಾಯದಲ್ಲಿ ರಿಯಾಯಿತಿ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಪಟ್ಟಣ ಪ್ರದೇಶಗಳಲ್ಲಿ ವಾಸವಿರುವ ಮಾಜಿ ಸೈನಿಕರಿಗೆ ಮಾತ್ರ ಶೇ.50ರಷ್ಟು ರಿಯಾಯಿತಿ ನೀಡಿ, ಗ್ರಾಮೀಣ ಪ್ರದೇಶದಲ್ಲಿರುವವರನ್ನು ಕಡೆಗಣಿಸಲಾಗಿದೆ. ಪ್ರಶಸ್ತಿ ಹಾಗೂ ಪುರಸ್ಕಾರ ಪಡೆದ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಮತ್ತು ಯುದ್ಧದಲ್ಲಿ ವೀರ ಮರಣ ಹೊಂದಿದವರಿಗೆ ಇತರ ರಾಜ್ಯಗಳಲ್ಲಿ ನಿರ್ದಿಷ್ಟ ಸವಲತ್ತುಗಳನ್ನು ನೀಡಲಾಗುತ್ತಿದ್ದರೂ, ಕರ್ನಾಟಕ ಸರಕಾರ ಮಾತ್ರ ಈ ವಿಚಾರದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸೈನಿಕ ಸುಬ್ಬಯ್ಯ ಅವರು ಶೂಟಿಂಗ್‍ನಲ್ಲಿ ಸುಮಾರು 200ಕ್ಕೂ ಅಧಿಕ ಪದಕಗಳನ್ನು ಪಡೆದಿದ್ದು, ಹವಾಲ್ದಾರ್ ತಿಮ್ಮಯ್ಯ ಅವರು ಕೃಷಿಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಆದರೆ ರಾಜ್ಯ ಸರಕಾರ ಇವರಿಗೆ ಕನಿಷ್ಟ ರಾಜ್ಯೋತ್ಸವ ಪ್ರಶಸ್ತಿ ನೀಡುವ ಔದಾರ್ಯವನ್ನೂ ಪ್ರದರ್ಶಿಸಿಲ್ಲ ಎಂದು ಟೀಕಿಸಿದರು. ವೀರಾಜಪೇಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ಮಾಜಿ ಸೈನಿಕರಿಗೆ ಮದ್ಯ ಸಿಗುವಂತೆ ಅಬಕಾರಿ ಇಲಾಖೆಯಿಂದ ಪರವಾನಗಿ ಕೊಡಿಸಬೇಕು. ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ವೈದ್ಯಕೀಯ ಕೇಂದ್ರ (ಈಸಿಹೆಚ್‍ಎಸ್)ಕ್ಕೆ ಹಾಗೂ ಮಾಜಿ ಸೈನಿಕರ ಸಂಘದ ಕಚೇರಿಗೆ ಖಾಯಂ ಜಾಗವನ್ನು ಮಂಜೂರು ಮಾಡಬೇಕೆಂದರು.

ನಿವೇಶನ ಇಲ್ಲದ ಮಾಜಿ ಸೈನಿಕರು ಪೈಸಾರಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡು ವಾಸವಿದ್ದಲ್ಲಿ ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಮೇಜರ್ ಓ.ಎಸ್.ಚಿಂಗಪ್ಪ ಅವರು ಮಾತನಾಡಿ, ಪರಮ ವೀರ ಚಕ್ರದಂತಹ ಮಹತ್ವದ ಪದಕ ಪಡೆದ ಯೋಧರಿಗೆ ಹರ್ಯಾಣ ಸರಕಾರ ಸುಮಾರು 2 ಕೋಟಿ ರೂ.ಗಳನ್ನು ನೀಡಿದರೆ, ಕೇರಳ ಸರಕಾರ ಸುಮಾರು 25 ಲಕ್ಷ ರೂ.ಗಳನ್ನು ನೀಡುತ್ತಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಕೇವಲ 10 ಲಕ್ಷ ರೂ.ಗಳನ್ನು ಮಾತ್ರ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅದೇ ರೀತಿ ವಿವಿಧ ಪದಕಗಳನ್ನು ಪಡೆಯುವ ಸರಕಾರಗಳಿಗೆ ಇತರ ಸರಕಾರಗಳು ಹೆಚ್ಚಿನ ನೆರವು ನೀಡುತ್ತಿದ್ದರೂ, ಕರ್ನಾಟಕ ಸರಕಾರ ಮಾತ್ರ ಅಲ್ಪ ಮೊತ್ತ ನೀಡಿ ಕೈತೊಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಕರ್ನಲ್ ಗಣೇಶ್, ಟಿ.ಶೆಟ್ಟಿಗೇರಿ ಘಟಕದ ಅಧ್ಯಕ್ಷ ಕೆ.ಎ.ವಿಶ್ವನಾಥ್ ಹಾಗೂ ಶನಿವಾರಸಂತೆ ಘಟಕದ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.