ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |

ಪದ ಕುಸಿಯೆ ನೆಲವಿಹುದು-ಮಂಕುತಿಮ್ಮ ||

ಮಾನವನ ಬದುಕೇ ಒಂದು ಜಟಕಾಬಂಡಿಯಂತೆ. ವಿಧಿಯೇ ಬಂಡಿಯ ಸಾಹೇಬ, ನೀನು ಕುದುರೆ, ವಿಧಿ ಹೇಳಿದಂತೆ ಪ್ರಯಾಣ ಸಾಗುತ್ತದೆ. ಮದುವೆಗೋ, ಸ್ಮಶಾನಕ್ಕೋ ಹೇಳಿದ ಕಡೆಗೆ ಸಾಗಬೇಕು, ಆಡಿ ಸೋತಾಗ ನಿಂತ ನೆಲವೇ ನೆಲೆ ಎಂದಿದ್ದಾರೆ ಡಿವಿಜಿಯವರು. ಈ ವರ್ಷದ ಮಳೆಗಾಲದಲ್ಲಿ ನಮ್ಮ ಕೊಡಗಿನಲ್ಲಿ ನಡೆದ ಘೋರ ಘಟನೆಗಳನ್ನು ಉದ್ದೇಶಿಸಿಯೇ ಹೇಳಿದಂತಿದೆ ಈ ಮೇಲಿನ ಮಾತುಗಳು.

1947 ಆಗಸ್ಟ್ 15 ನಮ್ಮ ದೇಶದ ಚರಿತ್ರೆಯಲ್ಲಿ ಸುವರ್ಣಾಕ್ಷರಲ್ಲಿ ಬರೆದಿಡುವ ದಿವಸ, ಪ್ರತೀ ವರ್ಷವೂ ಆಗಸ್ಟ್ 15 ಭಾರತೀಯರೆಲ್ಲರಿಗೂ ಅತ್ಯಂತ ಸಂಭ್ರಮದ ಹಬ್ಬ. ಜಾತಿ, ಮತ, ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಆನಂದದಿಂದ ಮನಸ್ಸು, ಹೃದಯಗಳಲ್ಲಿ ದೇಶಭಕ್ತಿಯನ್ನು ತುಂಬಿಕೊಂಡು ಎಲ್ಲಾ ಕಾರಣೀಭೂತರನ್ನು ನೆನೆದು, ಅವರಿತ್ತ ಸ್ವಾತಂತ್ರ್ಯವೆಂಬ ಅಮೂಲ್ಯ ಕೊಡುಗೆಯನ್ನು ಉಳಿಸಿ ಬೆಳೆಸುತ್ತೇವೆ ಎಂದು ದೃಢ ನಿರ್ಧಾರ ಮಾಡುತ್ತೇವೆ. ಅದೇ ರೀತಿ ಈ ವರ್ಷವೂ ಕೂಡ ಎಲ್ಲಾ ಕಾರ್ಯಕ್ರಮಗಳಿಗೂ ಜೋರಾದ ಮಳೆಯ ಮಧ್ಯೆಯೂ ತಯಾರಿ ಸಾಗಿತ್ತು. ಆದರೆ...

ಆ ಸುಂದರ ದಿವಸವೇ ನಮ್ಮ ಕೊಡಗಿನ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ, ಕಂಡರಿಯದ ಭೀಕರ ದುರ್ಘಟನೆಗಳಿಗೆ ನಾಂದಿಯಾಯಿತು. ಮಳೆಯ ಆರ್ಭಟ ಹೆಚ್ಚುತ್ತಾ ಹೋಯಿತು. ಪ್ರತೀ ದಿವಸ ಹಲವಾರು ಜೀವಗಳು ಮಣ್ಣಿನಡಿಯಲ್ಲಿ ಬಲಿಯಾದವು, ಮನೆ-ಮರಗಳು ನಾಶಗೊಂಡವು, ಎಲ್ಲರ ತೋಟಗಳು ನಾಶಗೊಂಡವು, ನೀರಿನ ಪ್ರವಾಹ ಆರ್ಭಟಿಸಿ ಹರಿಯತೊಡಗಿತು. ಪ್ರತೀ ದಿನ ಎಲ್ಲರೂ ಹಗಲು, ರಾತ್ರಿ ಎನ್ನದೆ ಜೀವಭಯದಿಂದ ಬಾಳುವಂತಾಯಿತು ಇದು ಏಕಾಯಿತು ? ಹೇಗಾಯಿತು ? ಇದಕ್ಕೆಲ್ಲಾ ಏನು ಕಾರಣ ಎನ್ನುವದಕ್ಕೆ ಬಹುಶಃ ಸರಿಯಾದ ಉತ್ತರ ಯಾರ ಬಳಿಯೂ ಇಲ್ಲ. ಡಿವಿಜಿಯವರು ಹೇಳಿದಂತೆ ‘‘ಮುತ್ತಿರುವದಿಂದು ಭೂಮಿಯನೊಂದು ದುರ್ದೈವ. ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ||’’ ಎಂದು ಕಾಣುತ್ತಿತ್ತು.

ಪ್ರಕೃತಿ ಈ ರೀತಿ ಮುನಿಯಲು ಕಾರಣಗಳು ಹಲವಾರು ಇರಬಹುದು. ತನ್ನ ಸಮತೋಲನ ಕಳೆದುಕೊಂಡು ಮಾನವನ ಕೆಲಸಗಳನ್ನು ಸಹಿಸಲಾಗದೆ ತಾಳ್ಮೆ ಮೀರಿಹೋಗಿ ಪ್ರಕೃತಿ ಇಂದು ಆರ್ಭಟಿಸಿದೆ. ನಮ್ಮ ತಾಯಿ ಸಮಾನವಾದ ಪ್ರಕೃತಿಯನ್ನು ನಾವು ಪ್ರೀತಿಯಿಂದ ಸರಿಯಾಗಿಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಭೂಮಿಯ ಒಡಲನ್ನು ಬಗೆದು ನಮ್ಮ ಆಸೆಯನ್ನು ತೀರಿಸಿಕೊಳ್ಳ ಬಾರದು. ಬೆಟ್ಟ-ಗುಡ್ಡಗಳು ಮತ್ತು ಕಾಡುಗಳು ಇರುವಂತೆಯೇ ಇರಬೇಕು. ಇದರಿಂದ ವನ್ಯ ಪ್ರಾಣಿಗಳಿಗೂ ಕೂಡ ಅನುಕೂಲವಾಗುತ್ತದೆ. ಬಹುಶಃ ಪ್ರಕೃತಿಯೂ ಶಾಂತವಾಗಿ ಇರಬಹುದು. ತಾಯಿ ತನ್ನ ಮಕ್ಕಳನ್ನು ತಿದ್ದುವಂತೆ ಪ್ರಕೃತಿಯೂ ಕೂಡ ನಮ್ಮನ್ನು ತಿದ್ದುತ್ತದೆ. ಆದರೆ ಅದಕ್ಕೆ ಎಷ್ಟೋ ನಿಸ್ಸಹಾಯಕರು ಹಾಗೂ ನಿರುಪದ್ರವಿಗಳು ಬಲಿಯಾಗಬೇಕಾಯಿತು. ನಾವು ಪ್ರಕೃತಿಯನ್ನು ವಿಕೃತಿಗೊಳಿಸಿದರೆ ನಮಗೆ ಸರ್ವನಾಶ ಶತಃಸಿದ್ಧ, ಪ್ರಕೃತಿಯ ಮುಂದೆ ನಾವೆಲ್ಲರೂ ಕೈಗೊಂಬೆಗಳು.

ವಿಜ್ಞಾನಿಗಳ ಪ್ರಕಾರ ಬೆಟ್ಟ-ಗುಡ್ಡ ಹಾಗೂ ಇಳಿಜಾರು ಪ್ರದೇಶಗಳ ಮಾರ್ಪಾಡು ಭೂಕುಸಿತಕ್ಕೆ ಕಾರಣವಾಗುತ್ತದೆ. ಇದು ನೀರಿನ ಸಹಜ ಹರಿಯುವಿಕೆಯನ್ನು ತಡೆಗಟ್ಟುವದರ ಜೊತೆಗೆ ಒತ್ತಡವೂ ಅಧಿಕವಾಗುತ್ತದೆ. ಇದರಿಂದ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ. ಮಳೆ ಸಾಮಾನ್ಯವಾಗಿಯೇ ಅಧಿಕವಾಗಿರುವ ಕೊಡಗಿನಲ್ಲಿ ನಾವು ಬಹಳ ಎಚ್ಚರಿಕೆಯಿಂದ ಬದುಕಬೇಕು ಎಂದು ಪ್ರಕೃತಿ ನಮಗೆ ಸದಾ ಎಚ್ಚರಿಕೆಯನ್ನು ಕೊಡುತ್ತಿರುತ್ತದೆ. ಪ್ರತಿ ವರ್ಷ ದೇಶದ ಯಾವದಾದರೂ ಒಂದು ಕಡೆ ಈ ರೀತಿಯ ಘಟನೆಗಳು ನಡೆದೇ ನಡೆಯುತ್ತವೆ. ನಮ್ಮ ಕೊಡಗು ಸುರಕ್ಷಿತ ಎಂದು ನಾವು ತಿಳಿದಿದ್ದೆವು. ಆದರೆ ಪ್ರಕೃತಿಯು ‘‘ನೀವೆಲ್ಲರೂ ನನಗೆ ಒಂದೇ, ನನಗೆ ಯಾವ ಭೇದವೂ ಇಲ್ಲ. ನೀನನಗಿದ್ದರೆ ನಾ ನಿನಗೆ ನೆನಪಿರಲಿ ನುಡಿ ನಮ್ಮೊಳಗೆ’’ ಎಂಬ ಪಾಠವನ್ನು ಈ ಘಟನೆಯ ಮೂಲಕ ಕಲಿಸಿಕೊಟ್ಟಿದೆ ಎಂದು ನನಗನಿಸುತ್ತದೆ. ಯಾವದೂ ಶಾಶ್ವತವಲ್ಲ, ಎಷ್ಟೋ ವರ್ಷಗಳಿಂದ ಇದ್ದ ಜಮೀನು, ತೋಟ, ಮನೆ, ಗದ್ದೆ ಎಲ್ಲವೂ ಕ್ಷಣದಲ್ಲಿ ನಾಶವಾಯಿತು. ಇರುವಾಗ ಆಸ್ತಿಗಾಗಿ ಜಗಳ, ಹೊಡೆದಾಟ, ಕೋರ್ಟು ಕೇಸು, ಕೊಲೆ ಎಲ್ಲವೂ ನಡೆಯುತ್ತದೆ. ಈಗ ಜೀವ ಉಳಿದರೆ ಸಾಕು ಎಂದಾಗಿದೆ. ನಮ್ಮ ಜೀವನದಲ್ಲಿ ಶಾಶ್ವತವಾಗಿ ಇರುವದು ವಿದ್ಯೆ, ಒಂದೇ. ಈ ರೀತಿ ಆದಾಗಲು ಕೂಡ ವಿದ್ಯೆಯ ಬಲವಿದ್ದರೆ ಎಲ್ಲಾದರೂ ಬದುಕಬಹುದು. ಆದ್ದರಿಂದ ವಿದ್ಯೆಗಿಂತ ದೊಡ್ಡದಾದ ಆಸ್ತಿ ಯಾವದೂ ಇಲ್ಲ ಎನ್ನುವ ಇನ್ನೊಂದು ಪಾಠ ಈ ಘಟನೆಯಿಂದ ನಾವೆಲ್ಲ ಕಲಿತಿದ್ದೇವೆ ಎಲ್ಲರೂ ಒಂದಾಗಿ, ಒಟ್ಟಾಗಿ ಪ್ರಕೃತಿಯನ್ನು ಉಳಿಸಿ ನಮ್ಮ ಕೊಡಗನ್ನು ಬೆಳೆಸಿ ಸೋಲದೆ, ಹೆದರದೆ, ಛಲದಿಂದ ಜೀವನ ನಡೆಸೋಣ. ?ಜಿ. ಯು. ಶ್ರೀಲತಾ, ಮಡಿಕೇರಿ.