ಮಡಿಕೇರಿ, ಮಾ. 6: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೊಡಗು - ಕೇರಳ ಗಡಿ ಭಾಗಗಳಲ್ಲಿ ನಕ್ಸಲೀಯ ಚಟುವಟಿಕೆ ವಿರುದ್ಧ ಕಟ್ಟೆಚ್ಚರ ವಹಿಸಲಾಗಿದೆ. ತಾ. 3ರಂದು ತಲಕಾವೇರಿಗೆ ಪರ್ಯಾಯ ರಸ್ತೆ ಮಾರ್ಗಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆಗೆ ಮುಂದಾದ ವೇಳೆಯಲ್ಲೂ ನಕ್ಸಲ್ ನಿಗ್ರಹ ದಳ ಸಿಬ್ಬಂದಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಸಂಬಂಧ ನಕ್ಸಲ್ ವಿರೋಧಿ ಕಾರ್ಯಪಡೆಯ ಇನ್ಸ್‍ಪೆಕ್ಟರ್ ಮಧು ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಕಳೆದ ಹದಿನೈದು ದಿನಗಳಿಂದ ಕೊಡಗಿನ ಗಡಿಯುದ್ದಕ್ಕೂ ಸೂಕ್ಷ್ಮ ಸ್ಥಳಗಳಲ್ಲಿ ಕೋಂಬಿಂಗ್ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ನಾಲ್ಕಾರು ವರ್ಷಗಳ ಹಿಂದೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಳಿಬೀಡು ಹಾಗೂ ಸಂಪಾಜೆ ಬಳಿಯ ಗೂಡುಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಪ್ರಸಕ್ತ ನಿಗಾವಹಿಸಲಾಗುತ್ತಿದೆ. ಅಲ್ಲದೆ, ಭಾಗಮಂಡಲ ಪೊಲೀಸ್ ಠಾಣಾ ಸರಹದ್ದು, ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಕೋಬಿಂಗ್ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕುಟ್ಟದಿಂದ ದಕ್ಷಿಣ ಕೊಡಗಿನ ಗಡಿ ಕುಟ್ಟ ತನಕ ಕೋಂಬಿಂಗ್ ಮುಂದುವರಿದಿದೆ ಎಂದ ಅವರು, ಎಲ್ಲಿಯೂ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಅವಕಾಶ ವಾಗದಂತೆ ಕಣ್ಗಾವಲು ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿ ದ್ದಾರೆ.(ಮೊದಲ ಪುಟದಿಂದ) ವೀರಾಜಪೇಟೆಯ ಆರ್ಜಿಯಲ್ಲಿರುವ ನಕ್ಸಲ್ ನಿಗ್ರಹ ಕಾರ್ಯಪಡೆ ಅಲ್ಲಿನ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೋಂಬಿಂಗ್ ನಡೆಸುತ್ತಿದೆ. ಇತ್ತ ಭಾಗಮಂಡಲದಲ್ಲಿರುವ ನಕ್ಸಲ್ ನಿಗ್ರಹ ಕಾರ್ಯಪಡೆ ಜಿಲ್ಲಾ ಪೊಲೀಸ್ ವರಿಷ್ಠರ ಸಹಿತ ನಕ್ಸಲ್ ನಿಗ್ರಹದಳ ಮೇಲಾಧಿಕಾರಿಗಳ ನಿರ್ದೇಶನದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿರುವದಾಗಿ ಮಾಹಿತಿ ನೀಡಿದ್ದಾರೆ.

ವ್ಯಾಪಕ ಕಟ್ಟೆಚ್ಚರ: ಈಗಾಗಲೇ ದಕ್ಷಿಣ ಕನ್ನಡ- ಕೊಡಗು ಗಡಿಯಲ್ಲಿರುವ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು, ಭಾಗಮಂಡಲ- ಸಂಪಾಜೆ ಗಡಿ ಗ್ರಾಮಗಳು, ಕರಿಕೆ, ಚೆಂಬೇರಿ, ಪಾಣತ್ತೂರು ಸೇರಿದಂತೆ ಎಲ್ಲೆಡೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ನೆನಪಿಸಿದ್ದಾರೆ.

ಅಂತೆಯೇ ಕಳೆದ ಸಾಲಿನಲ್ಲಿ ನಾಲಡಿ ವ್ಯಾಪ್ತಿಯಲ್ಲಿ ಗೋಚರಿಸುವದರೊಂದಿಗೆ, ಕೇರಳದತ್ತ ಅರಣ್ಯದ ಮೂಲಕ ನುಸುಳಿರುವ ನಕ್ಸಲರ ಬಗ್ಗೆಯೂ ಕಣ್ಗಾವಲು ಇರಿಸಲಾಗಿದೆ ಎಂದು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ. ಹೀಗಾಗಿ ಎರಡು ಪ್ರತ್ಯೇಕ ತಂಡಗಳಲ್ಲಿರುವ ಸುಮಾರು 60 ಮಂದಿ ನಕ್ಸಲ್ ನಿಗ್ರಹ ದಳದವರೊಂದಿಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿ ಮತ್ತು ಜಿಲ್ಲಾ ಸಶಸ್ತ್ರದಳದ ಸಹಕಾರದೊಂದಿಗೆ ಕೊಡಗು ಪೊಲೀಸ್ ಅಧೀಕ್ಷಕರು ಕಾರ್ಯಾಚರಣೆ ಮಾರ್ಗದರ್ಶನ ನೀಡುತ್ತಿರುವದೆಂದು ಕೆಳಹಂತದ ಅಧಿಕಾರಿಗಳು ಖಚಿತಪಡಿಸಿದ್ದಾರೆ.