ಮಡಿಕೇರಿ, ಮಾ. 6: ಹಳೆಯ ವೈಷಮ್ಯದಿಂದ ವ್ಯಕ್ತಿಯೋರ್ವ ನಿವೃತ್ತ ಪೊಲೀಸ್ ಸಿಬ್ಬಂದಿಯೋರ್ವರನ್ನು ಗುಂಡಿಕ್ಕಿ ಕೊಲೆಗೈಯಲು ಯತ್ನಿಸಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈರಳವಳಮುಡಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಈ ಹಿಂದೆ ಜಿಲ್ಲೆಯ ಹಲವೆಡೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಬಿ.ಕೆ. ಉತ್ತಪ್ಪ (61) ಅವರನ್ನು ಅವರ ಕುಟುಂಬದ ಮತ್ತೋರ್ವ ವ್ಯಕ್ತಿ ಜಪ್ಪು ಕಾವೇರಪ್ಪ ಎಂಬಾತ ಗುಂಡಿಕ್ಕಿ ಕೊಲೆಗೈಯಲು ಯತ್ನಿಸಿದ್ದಾನೆ. ತಾ. 3ರಂದು ರಾತ್ರಿ ಈ ಘಟನೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಉತ್ತಪ್ಪ ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ವಿವರ : ಬಿ.ಕೆ. ಉತ್ತಪ್ಪ ಹಾಗೂ ಜಪ್ಪು ಕಾವೇರಪ್ಪ ನಡುವೆ ಈ ಹಿಂದಿನಿಂದಲೂ ಹಳೇ ವೈಷಮ್ಯವಿದ್ದು, ಇದು ಪೊಲೀಸ್ ಠಾಣಾ ಮೆಟ್ಟಿಲನ್ನೂ ಏರಿತ್ತು. ತಾ. 3ರಂದು (ಮೊದಲ ಪುಟದಿಂದ) ಉತ್ತಪ್ಪ ಅವರು ತಮ್ಮ ಪುತ್ರ ಪೊನ್ನಣ್ಣರೊಂದಿಗೆ ತೋಟಕ್ಕೆ ನೀರು ಹಾಯಿಸುತ್ತಿದ್ದ ಸಂದರ್ಭ ಇವರಿಗೆ ಸೇರಿದ ಮೋಟಾರು ಇದ್ದಕ್ಕಿದ್ದಂತೆ ನಿಂತುಹೋಗಿತ್ತು. ಇದಕ್ಕೆ ಮುನ್ನ ಇವರಿಗೆ ಸೇರಿದ ಗದ್ದೆಯಲ್ಲಿ ಜಪ್ಪು ಕಾವೇರಪ್ಪ ಆತನ ಹಸುವನ್ನು ಕಟ್ಟಿಹಾಕಿದ್ದು ಇವರ ಗಮನಕ್ಕೆ ಬಂದಿತ್ತು. ಸಂಜೆ 7 ಗಂಟೆಯಾದರೂ ಹಸುವನ್ನು ಹೊಡೆದುಕೊಂಡು ಹೋಗದಿದ್ದ ಕಾರಣ ಇವರು ಸಂಶಯಗೊಂಡು ಮೋಟಾರು ಬಳಿ ತೆರಳಿದಾಗ ಅಲ್ಲಿ ಜಪ್ಪುಕಾವೇರಪ್ಪ ಕೋವಿ ಸಹಿತ ನಿಂತಿದ್ದನೆನ್ನಲಾಗಿದೆ. ಈ ಬಗ್ಗೆ ವಿಚಾರಿಸಿದ ಸಂದರ್ಭ ಆತ ನಿಮ್ಮನ್ನು ಕೊಲೆಗೈಯುವದಾಗಿ ಹೇಳಿ ಗುಂಡುಹಾರಿಸಿದ್ದಾನೆ. ಈ ಸಂದರ್ಭ ಉತ್ತಪ್ಪ ಅವರ ಕಾಲಿಗೆ ಗುಂಡೇಟು ತಗುಲಿದ್ದು, ಅವರು ಅಲ್ಲಿ ಕುಸಿದುಬಿದ್ದಿದ್ದಾರೆ. ಈ ವೇಳೆ ಅವರೊಂದಿಗಿದ್ದ ಪುತ್ರ ಪೊನ್ನಣ್ಣ ಕೋವಿಯನ್ನು ಕಿತ್ತುಕೊಂಡಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಕೋವಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಳಿಕ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಗುಂಡು ಹಾರಿಸಿರುವ ಕೋವಿಯು ಬೇರೆ ವ್ಯಕ್ತಿಗೆ ಸೇರಿದ್ದೆನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆದಿದೆ. ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದು, ಕೋವಿಯ ಮಾಲೀಕನನ್ನೂ ಬಂಧಿಸಿರುವದಾಗಿ ಹೇಳಲಾಗಿದೆ.