ಗೋಣಿಕೊಪ್ಪಲು,ಮಾ.6: ಕೇಂದ್ರ ರಸ್ತೆ ನಿಧಿಯಿಂದ ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ಹೊಸೂರು ಗ್ರಾ.ಪಂ.ಮುಂಭಾಗ ಚಾಲನೆ ನೀಡಿದರು.ಸುಮಾರು ರೂ.4.50 ಕೋಟಿ ವೆಚ್ಚದಲ್ಲಿ ಅಮ್ಮತ್ತಿ ಜಂಕ್ಷನ್‍ನಿಂದ ಅತ್ತೂರುವಿನ ದಿ.ಸಿ.ಎಂ.ಪೂಣಚ್ಚ ಮನೆ ಮುಂಭಾಗದವರೆಗೆ 8 ಕಿ.ಮೀ.ರಸ್ತೆ ಅಭಿವೃದ್ಧಿಗೊಳ್ಳಲಿದ್ದು ಒಟ್ಟಾರೆ 5.50 ಮೀಟರ್ ರಸ್ತೆ ಅಗಲಗೊಳ್ಳಲಿದೆ. ಉದ್ಧೇಶಿತ ರಸ್ತೆಗೆ ಈಗಾಗಲೇ ಹಿರಿಯ ನಾಗರಿಕರು ಪಂದ್ಯಂಡ ಬೆಳ್ಯಪ್ಪ ರಸ್ತೆ ಎಂದು ನಾಮಕರಣ ಮಾಡಿದ್ದು, ಹಾಸನದ ಗುತ್ತಿಗೆದಾರ ಎಂ.ಟಿ.ನಾಗರಾಜ್ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಇದೇ ಸಂದರ್ಭ ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದ ಶಾಸಕ ಬೋಪಯ್ಯ ಅವರು ಚೆನ್ನರಾಯಪಟ್ಟಣ, ಅರಕಲಗೋಡು, ಕೊಡ್ಲಿಪೇಟೆ, ಶನಿವಾರಸಂತೆ, ಮಡಿಕೇರಿ, ಗೋಣಿಕೊಪ್ಪ ಮಾರ್ಗ ಕುಟ್ಟದವರೆಗೆ ಚತುಷ್ಪತ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇದಕ್ಕೆ ಯಾರೂ ವಿರೋಧಿಸಬಾರದು ಎಂದು ಮನವಿ ಮಾಡಿದರು. ಕೋಣನೂರು-ನೆಲ್ಲಿಹುದಿಕೇರಿ- ಮಾಕುಟ್ಟ ಮಾರ್ಗ ಹಾಗೂ ಹುಣಸೂರು-ತಲಕಾವೇರಿ ರಾಜ್ಯ ಹೆದ್ದಾರಿ ರಸ್ತೆಯೂ ಶೀಘ್ರ ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು. ವಿಶೇಷ ಪ್ಯಾಕೇಜ್ ಮತ್ತು ಮಳೆಹಾನಿ ಅನುದಾನವಾಗಿ ಸುಮಾರು ರೂ.34 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಎಲ್ಲ ರಸ್ತೆಗಳೂ ಇನ್ನು ಮುಂದೆ ಉತ್ತಮಗೊಳ್ಳಲಿದೆ. ಅಲ್ಲದೆ ವಿಶೇಷ ಪ್ಯಾಕೇಜ್‍ನ ಮೂರು ಕೋಟಿ ಅನುದಾನದಲ್ಲಿ ಸುಮಾರು 53 ಗ್ರಾ.ಪಂ.ಮಟ್ಟದ ಗ್ರಾಮೀಣ ರಸ್ತೆ ಕಾಮಗಾರಿಯೂ ಶೀಘ್ರ ಆರಂಭಗೊಳ್ಳಲಿದೆ ಎಂದು ಹೇಳಿದರು.

ಇದೇ ಸಂದರ್ಭ ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಅವರು,ಶಾಸಕ ಕೆ.ಜಿ.ಬೋಪಯ್ಯ ಅವರ ಅವಧಿಯಲ್ಲಿ ವೀರಾಜಪೇಟೆ ತಾಲೂಕಿನ ರಸ್ತೆ ಅಭಿವೃದ್ಧಿಯೂ ಒಳಗೊಂಡಂತೆ ಹಲವು ಜನಪರ ಕಾರ್ಯಕ್ರಮಗಳು ನಡೆದಿವೆ. ಕೇಂದ್ರ ಸರ್ಕಾರದ ಅನಿಲ ವಿತರಣೆ, ವಿಕಲಚೇತನರಿಗೆ ಸಲಕರಣೆ, ವೀಲ್ ಚೇರ್ ಮತ್ತು ಸೋಲಾರ್ ಲ್ಯಾಂಪ್ ವಿತರಣೆಯೂ ನಡೆದಿದ್ದು, ಇದರ ಸದುಪಯೋಗ ಹೊಂದಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಮೂಕೋಂಡ ವಿಜು ಸುಬ್ರಮಣಿ, ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಮಾಜಿ ತಾ.ಪಂ.ಉಪಾಧ್ಯಕ್ಷ ಮೊಳ್ಳೇರ ಸದಾ ಅಪ್ಪಚ್ಚು, ಮಲ್ಲಂಡ ಮಧು ದೇವಯ್ಯ, ಕಿಲನ್‍ಗಣಪತಿ, ಇ.ಸಿ.ಜೀವನ್, ಹಿರಿಯರಾದ ಕಲಿಯಂಡ ನಾಣಯ್ಯ, ಗುತ್ತಿಗೆದಾರ ಎಂ.ಟಿ.ನಾಗರಾಜ್,ಗ್ರಾ.ಪಂ.ಉಪಾಧ್ಯಕ್ಷೆ ವಿಶಾಲಾಕ್ಷಿ, ಪಿಡಿಓ ಶ್ರೀನಿವಾಸ್, ಗ್ರಾ.ಪಂ. ಸದಸ್ಯರಾದ ಕೊಲ್ಲೀರ ಪೂಣಚ್ಚ, ನರಸಿಂಹ, ಮಹಾದೇವ, ಕಾರ್ಮಾಡು ಗ್ರಾ.ಪಂ.ಸದಸ್ಯ ಮುಕ್ಕಾಟಿರ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.