ಬಾಲ್ಯದ ಆಟಗಳು ಬಾಲ್ಯದಲ್ಲೇ ಕ್ರೀಡಾಪ್ರತಿಭೆಗಳನ್ನು ಅರಳಿಸುತ್ತವೆ, ಬೆಳೆಸುತ್ತದೆ. ಈ ಆಟಗಳಲ್ಲಿ ಗ್ರಾಮೀಣ ಸೊಗಡು ಇರುವದನ್ನು ಕಾಣಬಹುದು. ಬಾಲ್ಯದ ಆಟಗಳಲ್ಲಿ ನಿಯಮಗಳು ಕಠಿಣವಾಗಿರುವದಿಲ್ಲ, ಇವು ಮನೋರಂಜನೆಗೆ ಹೆಚ್ಚಿನ ಅವಕಾಶ ನೀಡಿ, ಮುಕ್ತವಾಗಿ ಆಟವಾಡಲು ಅನುವು ಮಾಡಿಕೊಡುತ್ತದೆ. ಉಪಯೋಗಿಸುವ ಪರಿಕರಗಳು ಪ್ರಕೃತಿದತ್ತವಾಗಿರುತ್ತದೆ. ಈ ಬಾಲ್ಯದ ಆಟಗಳಲ್ಲಿ ಸಹಾಸವಿರುತ್ತದೆ, ಸ್ವರ್ಧೆಯಿರುತ್ತದೆ, ಹಲವು ಗುಣಗಳು ಬಾಲ್ಯದಲ್ಲೇ ಅಡಕವಾಗಲು ಸಹಾಯಕವಾಗುವುದು. ಇಂತಹ ಬಾಲ್ಯದ ಆಟಗಳು ಇಂದು ಮರೆಯಾಗುತ್ತಿರುವದು ಬೇಸರದ ಸಂಗತಿ. ಬಾಲ್ಯದ ಆಟಗಳು ಬಾಲ್ಯದಲ್ಲೇ ಕ್ರೀಡಾ ವ್ಯಕ್ತಿತ್ವ, ಸಾಧನೆ, ಪ್ರತಿಭೆಗಳಿಗೆ ಖಂಡಿತಾ ಪೂರಕ.

ಚಿನ್ನಿದಾಂಡು : ಒಂದರಿಂದ ಒಂದೂಕಾಲು ಅಡಿ ಉದ್ದದ ದಾಂಡು, ಅರ್ಧ ಅಡಿ ಉದ್ದದ ಇನ್ನೊಂದು ತುಂಡು ಎರಡರ ತುದಿಗಳು ಚೂಪಾಗಿರುತ್ತವೆ. ಆಡುವ ಸ್ಥಳದಲ್ಲಿ ಸಣ್ಣ ಒಂದು ಗುಂಡಿ ಮಾಡಿಕೊಳ್ಳಬೇಕು. ಸಣ್ಣ ತುಂಡನ್ನು ಕೆಳಗಿಟ್ಟು ಅಡ್ಡವಾಗಿ ಉದ್ದ ದಾಂಡು ಎತ್ತಿ (ಡೋಕಿ) ನಂತರ ಹೊಡಿಬೇಕು. ಎದುರಾಳಿಗಳು ತಡೆಯಲು ಪ್ರಯತ್ನಿಸಬೇಕು. ಗುಂಡಿಗಿಂತ ದೂರ ಹೊಡೆದಷ್ಟು ಹೆಚ್ಚು ಅಳತೆಗಳನ್ನು ದಾಂಡುವಿನಿಂದ ಮಾಡಬಹುದು. ಹೀಗೆ ಆಟ ಸಾಗುತ್ತದೆ. ಇದನ್ನು ತಂಡವಾಗಿ ಇಲ್ಲ ವೈಯಕ್ತಿಕವಾಗಿಯೂ ಆಡಬಹುದು. ಯಾರು ಹೆಚ್ಚು ಅಳತೆಯ ಅಂಕಗಳನ್ನು ಮಾಡುತ್ತಾರೋ ಅವರು ಗೆಲ್ಲುತ್ತಾರೆ.

ಕುಂಟೆಬಿಲ್ಲೆ : ಈ ಆಟ ವಿಶ್ವದ ಬಹಳಷ್ಟು ಕಡೆ, ಆಡಲಾಗುತ್ತದೆ. ಈ ಆಟದ ಮೂಲ ಭಾರತದ್ದಾಗಿದ್ದು, ಹುಡುಗಿಯರು ಹೆಚ್ಚಾಗಿ ಈ ಆಟ ಆಡಿದರೂ, ಬಾಲಕರು ಆಟವನ್ನು ಆಡಬಲ್ಲರು. ಇಲ್ಲಿ ಸುಣ್ಣದ ಗೆರೆಗಳು, ಇಲ್ಲ ಗೆರೆಗಳನ್ನು ಮಣ್ಣಿನ ಅಂಕಣದಲ್ಲಿ ರಚಿಸಿ ಕೋಣೆಗಳನ್ನು ಮಾಡಿ ಚಪ್ಪಟೆಯಾದ ಹಂಚಿನ ಅಥವಾ ಕಲ್ಲಿನ ಚೂರುಗಳನ್ನು ಒಂದು ಕಾಲಿನ ಸಹಾಯದಿಂದ ಕೋಣೆಗಳನ್ನು ತುಳಿಯುವದರ ಮೂಲಕ ದಾಟಿಸಬೇಕು. ಗೆರೆಗಳ ಮೇಲೆ ಕಲ್ಲುಗಳು ಉಳಿಯಬಾರದು, ಹೀಗೆ ಕೆಲವು ಸುಲಭ ನಿಯಮಗಳಿಗೊಳಪಟ್ಟು ಆಡುವ ಆಟದಲ್ಲಿ ಯಶಸ್ವಿಯಾಗಿ ಚಪ್ಪಟೆ ಹಂಚಿನ ಚೂರು ದಾಟಿಸಿದವರು ಗೆಲುವನ್ನು ಗಳಿಸುತ್ತಾರೆ. ಈ ಆಟವನ್ನು ವೈಯಕ್ತಿವಾಗಿ ಇಲ್ಲ ತಂಡವಾಗಿಯೂ ಆಡಬಹುದು. ಈ ಆಟ ಆಟದ ಅನೇಕ ಕೌಶಲ್ಯಗಳನ್ನು ಕಲಿಸುತ್ತದೆ. ಏಕಾಗ್ರತೆ, ದೈಹಿಕ ವ್ಯಾಯಾಮಗಳು. ಸಹನೆ ಮುಂತಾದ ಗುಣಗಳು, ಕ್ರೀಡಾ ಆಸಕ್ತಿ ಬೆಳೆಯುತ್ತದೆ.

ಕಣ್ಣಾ ಮುಚ್ಚೆ ಕಾಡೇಗೂಡೆ : ಈ ಆಟ ಪ್ರಕೃತಿಯ ಕುತೂಹಲ ಮತ್ತು ಪ್ರಕೃತಿಯ ಮಧ್ಯೆಯೇ ನಡೆಯುವ ಆಟ. ಮರಗಳ ಕೊಂಬೆ, ಪೊಟರೆ, ಇವೆಲ್ಲಾ ಈ ಆಟದಲ್ಲಿ ಪರಿಕರಗಳು, ಇಲ್ಲವೆ ಈ ಆಟಕ್ಕೆ ಅವಶ್ಯ ಎನ್ನಿಸುವದು ಆಟದಲ್ಲಿ ಒಬ್ಬನು ಕಣ್ಣುಮುಚ್ಚಿಕೊಂಡು ‘ಕಣ್ಣಾಮುಚ್ಚೆ ಕಾಡೆಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ, ನಿಮ್ಮಯ್ಯ ಹಕ್ಕಿ ಮುಚ್ಚಿಕೊಳ್ಳಿ’’ ಎಂದು ಹಾಡಿದಾಗ ಈ ಹಾಡು ಮುಗಿಯುವದರೊಳಗೆ ಬೇರೆ ಆಟಗಾರರು ಓಡಿ ಹಾಡುವವನನ್ನು (ಹಿಡಿಯುವವನಿಗೆ) ಸಿಗದಂತೆ ಅವಿತುಕೊಳ್ಳುತ್ತಾರೆ. ಹಿಡಿಯುವವನು ಹಾಡು ಮುಗಿದ ತಕ್ಷಣ ಅವಿತುಕೊಂಡಿರುವವರನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆಗ ಮರದ ಕೊಂಬೆ, ಕಲ್ಲಿನ ಹಿಂದೆ, ಮರದ ಹಿಂದೆ ಅಡಗಿರುವವರಲ್ಲಿ ಮೊದಲು ಸಿಕ್ಕಿದವ ಔಟ್ ಆಗುತ್ತಾನೆ. ಮುಂದೆ ಆತನೇ ಇತರ ಆಟಗಾರರನ್ನು ಹಿಡಿಯುವವನು ಆಗುತ್ತಾನೆ. ಈ ಆಟದಲ್ಲೂ ಬಾಲ್ಯದಲ್ಲೇ ಪ್ರಕೃತಿಯ ಜೊತೆ ಸಮ್ಮಿಳಿತಗೊಳ್ಳುವ ಗುಣಬೆಳೆದು ಪ್ರಕೃತಿಯ ಮಧ್ಯೆಯೇ ಕಾಡಿನ ಪರಿಚಯದ ಜೊತೆಗೆ ಕ್ರೀಡಾಸಕ್ತಿಯು ಬೆಳೆಯುತ್ತದೆ.

ಬುಗುರಿ ಆಟ : ಈ ಆಟ ಬಾಲಕರೇ ಹೆಚ್ಚಾಗಿ ಆಡುತ್ತಾರೆ. ಆದರೆ ಬಾಲಕಿಯರೂ ಈ ಆಟದಲ್ಲಿ ಪಾಲ್ಗೊಳ್ಳಬಹುದು. ಒಂದು ವೃತ್ತವನ್ನು ರಚಿಸಿ, ಅಲ್ಲಿ ಒಬ್ಬ ಬುಗುರಿಯನ್ನು ಇಟ್ಟು ಬುಗುರಿಗೆ ಗುನ್ನಾ ಹೊಡೆಯುವ ಆಟ. ಇಲ್ಲಿ ಯಾರು ಗುನ್ನಾ ಹೆಚ್ಚು ಹೊಡೆಯುವರು, ಇಲ್ಲ ಹೊಡೆಯಲಾಗದ ವರು ಬುಗುರಿ ಇಡಬೇಕಾಗುವದು ಹೀಗೆ ಆಟ ಸಾಗುವದು ಅದೇ ರೀತಿ ಬುಗುರಿಯನ್ನು ಇಲ್ಲಿ ದಾರದ ಮೂಲಕ ತಿರುಗಿಸುವದು, ಕೈಯಲ್ಲಿ ತಿರುಗಿಸುವದು ಮುಂತಾದ ಕೌಶಲ್ಯಗಳನ್ನು ಆಟವಾಡುವವರು ಕಲಿಯುತ್ತಾರೆ ಬುಗುರಿ ತಿರಿಗಿಸುವದು, ನೋಡುವದು ಕೂಡ ಉತ್ತಮ ಮನೋರಂಜನೆ, ಕ್ರೀಡಾ ಉಲ್ಲಾಸ ನೀಡುವದು. ಇವಷ್ಟೆ ಅಲ್ಲದೆ ಇನ್ನೂ ಅನೇಕ ಬಾಲ್ಯದ ಆಟಗಳಿವೆ. ಆರೋಗ್ಯಕ್ಕೆ ಕ್ರೀಡೆಗಳಿಗೆ, ಗುಣ ಕೌಶಲ್ಯಗಳ ಆಗರವಾಗಿರುವ ಬಾಲ್ಯದ ಆಟಗಳು ಈಗ ಮೊಬೈಲ್, ಕಂಪ್ಯೂಟರ್, ವೀಡಿಯೋ ಗೇಮ್ಸ್‍ಗಳ ಮಧ್ಯೆ ಮಾಯವಾಗಿದೆಯೇನೋ... ಎಂದೆನ್ನಿಸುತ್ತದೆ. ಹಾಗಾಗದೇ ಬಾಲ್ಯದ ಆಟಗಳು ಬಾಲ್ಯದಲ್ಲಿ ಕ್ರೀಡಾ ಗುಣಗಳ ವಿಕಾಸವನ್ನು ಅರಳಿಸುವಂತಾಗಲಿ.

? ಹರೀಶ್ ಸರಳಾಯ,

ಮಡಿಕೇರಿ