ನಾಪೋಕ್ಲು, ಮಾ. 6: ಕಳೆದ ಸಾಲಿನ ಅತಿವೃಷ್ಟಿಯಿಂದಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದ್ದು, ರಾಜ್ಯ ಸರ್ಕಾರವು ಬೆಳೆಹಾನಿ ಪರಿಹಾರ ಘೋಷಿಸಿದ್ದರೂ ಬೆಳೆಗಾರರು ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲವೆಂದು ಡಾ. ಸಣ್ಣುವಂಡ ಕಾವೇರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕೊಡಗಿನ ಕೆಲವೆಡೆಗಳಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ನೂರಾರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದರು. ನಾಪೋಕ್ಲು ವ್ಯಾಪ್ತಿಯಲ್ಲೂ ಅತಿವೃಷ್ಟಿಯಿಂದಾಗಿ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಕಾಫಿ, ಕರಿಮೆಣಸು, ಭತ್ತ ಸೇರಿದಂತೆ ಕೃಷಿ ಫಸಲುಗಳು ನಾಶಗೊಂಡಿದ್ದವು.
ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಫಸಲುಗಳಿಗೆ ರಾಜ್ಯ ಸರ್ಕಾರವು ಬೆಳೆಹಾನಿ ಪರಿಹಾರವನ್ನು ಘೋಷಿಸಿತ್ತು. ಆಧಾರ್ ಕಾರ್ಡ್, ಆರ್ಟಿಸಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸುವ ಮೂಲಕ ಹಾನಿಗೊಳಗಾದ ಕೃಷಿ ಫಸಲುಗಳಿಗೆ ಬೆಳೆ ಪರಿಹಾರವನ್ನು ಪಡೆಯುವಂತೆ ರೈತರಿಗೆ ಕಂದಾಯ ಇಲಾಖೆ ಮನವಿ ಮಾಡಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಹಾನಿ ಪರಿಹಾರಕ್ಕೆ ನಾಪೋಕ್ಲು ವ್ಯಾಪ್ತಿಯಲ್ಲಿ ರೈತರು ಹಾಗೂ ಬೆಳೆಗಾರರಿಂದ ಅರ್ಜಿ ಸಲ್ಲಿಕೆಯಾಗದಿರುವದು ಇಲಾಖೆಯ ಮೂಲಗಳಿಂದ ತಿಳಿದುಬಂದಿದ್ದು, ಈ ಹಿನ್ನೆಲೆ ರಾಜ್ಯ ಸರ್ಕಾರ ಘೋಷಿಸಿರುವ ಬೆಳೆಹಾನಿ ಪರಿಹಾರ ಪಡೆಯಲು ಬೆಳೆಗಾರರು ಹಾಗೂ ಕೃಷಿಕರು ಅಗತ್ಯ ದಾಖಲೆಗಳೊಂದಿಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮನವಿ ಮಾಡಿದ್ದಾರೆ.
- ದುಗ್ಗಳ