ಮಡಿಕೇರಿ, ಮಾ. 6: ಕೊಡಗು ಜಿಲ್ಲಾ ಯೋಜನಾ ಸಮಿತಿ ಸಭೆಯು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯಾ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಬೋಧಕ ಗಣೇಶ್ ಪ್ರಸಾದ್ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮಸಭೆಗಳ ಮೂಲಕ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ವಿವಿಧ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಗ್ರಾಮಸಭೆಯ ಅನುಮೋದನೆ ಅತಿ ಮುಖ್ಯ, ಸಂಪನ್ಮೂಲ ನೋಡಿಕೊಂಡು ಯೋಜನೆಗಳನ್ನು ತಯಾರಿಸುವದು, ಮಾನವ ಅಭಿವೃದ್ಧಿ ಪರಿಕಲ್ಪನೆ, ಶಿಕ್ಷಣ, ಆರೋಗ್ಯ ಮತ್ತು ಜೀವನದ ಗುಣಮಟ್ಟ ಬದಲಾವಣೆ, ಅಭಿವೃದ್ಧಿಯ ಪರಿಕಲ್ಪನೆ, ಸಾರ್ವಜನಿಕರಿಂದ ಬರುವ ಬೇಡಿಕೆಗಳಿಗೆ ಸ್ಪಂದನೆ, ಪಂಚಾಯತ್ ರಾಜ್ ವಿಕೇಂದ್ರಿಕರಣದಡಿ ಕಾರ್ಯ ನಿರ್ವಹಣೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಯೋಜನಾ ಸಮಿತಿಯು ಜಿಲ್ಲಾ ವ್ಯಾಪ್ತಿಯಲ್ಲಿನ ಗ್ರಾಮೀಣ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರಾಭಿವೃದ್ಧಿ ಇಲಾಖಾ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ಸ್ವೀಕೃತವಾಗುವ ಯೋಜನಾ ವರದಿಗಳನ್ನು ಕ್ರೋಢೀಕರಿಸಿ ಸ್ಥಳೀಯ ಸಂಪನ್ಮೂಲ ಮತ್ತು ಸರ್ಕಾರದ ಅನುದಾನವನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ಯೋಜನೆ ಸಿದ್ಧಪಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಯೋಜನೆಗಳನ್ನು ಸಿದ್ಧಪಡಿಸುವಾಗ ಗ್ರಾಮ ಪಂಚಾಯಿತಿ ಹಂತದಿಂದ ಜಿಲ್ಲಾ ಪಂಚಾಯಿತಿ ಹಂತದವರೆಗೆ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕ್ರಮ ಗಳನ್ನು ಸಿದ್ಧಪಡಿಸಬೇಕು ಎಂದು ಗಣೇಶ್ ಪ್ರಸಾದ್ ಸಲಹೆ ಮಾಡಿದರು.
ಅಭಿವೃದ್ಧಿಯ ಸಂಭವನೀಯ ಬೆಳವಣಿಗೆ, ಆರೋಗ್ಯ ಶಿಕ್ಷಣ, ನೈರ್ಮಲ್ಯ, ಮಕ್ಕಳ ಹಾಗೂ ಮಹಿಳೆಯರ ಅಭಿವೃದ್ಧಿ ಮತ್ತಿತರ ಕ್ಷೇತ್ರಗಳ ಪ್ರಾಮುಖ್ಯತೆಯನ್ನು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸಹಭಾಗಿಗಳಾದ ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳು, ಜನ ಸಮೂಹ ಮೂಲಕ ಮಾಹಿತಿ ಒದಗಿಸುವದು. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವದು, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕನಿಷ್ಟ ಅವಶ್ಯವಿರುವ ಎಲ್ಲಾ ಸವಲತ್ತುಗಳನ್ನು ಒದಗಿಸುವದು ಜಿಲ್ಲಾ ಯೋಜನಾ ಸಮಿತಿಯ ಕಾರ್ಯಸೂಚಿಯಲ್ಲಿ ಪ್ರಮುಖವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನೀರು ಪೂರೈಕೆ ಮತ್ತು ನೈರ್ಮಲ್ಯ, ವಸತಿ, ಉದ್ಯೋಗ, ಕೃಷಿ, ಸಮಾಜ ಕಲ್ಯಾಣ, ಆಡಳಿತಾತ್ಮಕ ವ್ಯವಸ್ಥೆ ಹೀಗೆ ಹಲವು ವಲಯಗಳನ್ನು ಒಳಗೊಂಡಂತೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ಜಿಲ್ಲೆಗೆ ಸಂಬಂಧಿಸಿದಂತೆ ದೂರದೃಷ್ಟಿಗಳನ್ನು ಒಳಗೊಂಡ ಜಿಲ್ಲಾ ಯೋಜನಾ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಯೋಜನೆ ರೂಪಿಸಬೇಕಿದ್ದು, ಆ ನಿಟ್ಟಿನಲ್ಲಿ ಸಮಿತಿ ಸದಸ್ಯರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸ ಬೇಕಿದೆ ಎಂದು ಅವರು ತಿಳಿಸಿದರು.
ಸಮಿತಿ ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ಕೊಡಗು ಜಿಲ್ಲೆಯ ಸಮಗ್ರ ದೃಷ್ಟಿಕೋನ ರೂಪಿಸುವ ನಿಟ್ಟಿನಲ್ಲಿ ಸಂಪನ್ಮೂಲ ಹಂಚಿಕೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮೀಣ ಯೋಜನೆಗಳಿಗೆ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಗ್ಗುತ್ತಿದೆ. ಕಾವೇರಿ ನದಿ ಹರಿಯುತ್ತಿದ್ದರೂ ಸಹ ಕುಡಿಯುವ ನೀರಿಗೆ ತೊಂದರೆ ಎದುರಿಸಬೇಕಿದೆ ಎಂದು ಗಮನ ಸೆಳೆದರು.
ಮೂಕೊಂಡ ಪಿ. ಸುಬ್ರಮಣಿ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳೇ ಆಗಿದೆ. ಆದರೆ ಇದುವರೆಗೆ ಯಾವದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಮುರಳಿ ಕರುಂಬಮ್ಮಯ್ಯ ಅವರು ಮಾತನಾಡಿ ಜಿಲ್ಲಾ ಯೋಜನಾ ಸಮಿತಿಯಲ್ಲಿ ಸಿದ್ಧಪಡಿಸಿದ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು.
ಅಭಿಮನ್ಯು ಕುಮಾರ್ ಮಾತನಾಡಿ, ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಚರಂಡಿ ನಿರ್ಮಾಣ, ಹೂಳು ತೆಗೆಯುವದು ಮತ್ತಿತರ ಯೋಜನೆಗಳನ್ನು ಕೈಗೊಳ್ಳಬೇಕಿದ್ದು, ಸುಮಾರು ರೂ. 2 ಸಾವಿರ ಕೋಟಿ ಬೇಕಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಗೆ ಯೋಜನೆ ಸಿದ್ಧಪಡಿಸಬೇಕು. ಮುಂದಿನ ವರ್ಷದ ವಾರ್ಷಿಕ ಕ್ರಿಯಾಯೋಜನೆ ತಯಾರಿಸಬೇಕು. ಕುಡಿಯುವ ನೀರು, ಚೆಕ್ ಡ್ಯಾಂ ನಿರ್ಮಾಣ ಮತ್ತಿತರ ಬಗ್ಗೆ ಗಮನ ಹರಿಸಬೇಕು ಎಂದರು.
ಸದಸ್ಯರಾದ ನಾಗೇಶ್ ಕುಂದಲ್ಪಾಡಿ, ಅನಿತಾ ಪೂವಯ್ಯ, ಶಿವಕುಮಾರಿ, ಸವಿತಾ ರಾಕೇಶ್, ಕಿರಣ್ ಕಾರ್ಯಪ್ಪ, ಎ. ಭವ್ಯ, ಅಚ್ಚಪಂಡ ಮಹೇಶ್, ಕವಿತಾ ಪ್ರಭಾಕರ್, ಯಾಲದಾಳು ಪದ್ಮಾವತಿ, ಪೂರ್ಣಿಮಾ ಗೋಪಾಲ್, ಕಲಾವತಿ ಪೂವಪ್ಪ, ಅಜಿತ್ ಕರುಂಬಯ್ಯ ಇತರರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಕುರಿತು ಗಮನ ಸೆಳೆದರು. ಜಿ.ಪಂ.ಮುಖ್ಯ ಯೋಜನಾಧಿಕಾರಿ ಕೆ.ಎಸ್. ಸಂದ್ಯಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.