ಮಡಿಕೇರಿ, ಮಾ. 6: ನಾಡಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ವಿವಿಧೆಡೆಗಳಲ್ಲಿ ದೇವರ ಉತ್ಸವ, ಪೂಜಾ ಕಾರ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರುದ್ರಪಠಣ
ಮಡಿಕೇರಿ: ಶಿವರಾತ್ರಿ ಅಂಗವಾಗಿ ಮಡಿಕೇರಿಯ ಶ್ರೀ ಓಂಕಾರೇಶ್ವರ ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಜಿಲ್ಲಾ ಹವ್ಯಕ ವಲಯದಿಂದ ರುದ್ರಪಠಣ ನೆರವೇರಿತು.
ಸಿದ್ಧಾರೂಢಾಶ್ರಮದಲ್ಲಿ ಮಹಾಶಿವರಾತ್ರಿ
ಟಿ. ಶೆಟ್ಟಿಗೇರಿಯ ಶ್ರೀ ಸಿದ್ಧಾರೂಢಾಶ್ರದಮದಲ್ಲಿ ಶಿವರಾತ್ರಿ ಕಾರ್ಯಕ್ರಮದ ಪ್ರಯುಕ್ತ ನಿತ್ಯಪೂಜೆ, ಗಣಪತಿ ಹೋಮ ಹಾಗೂ ಗೋಣಿಕೊಪ್ಪಲಿನ ಸತ್ಯಸಾಯಿ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದವು. ಉಳಿದಂತೆ ಮಹಾರುದ್ರಾಭಿಷೇಕ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾತಂಡ ಉತ್ತಯ್ಯ, ಡಾ. ಕೆ.ಕೆ. ಶಿವಪ್ಪ ಉಪಸ್ಥಿತರಿದ್ದರು. ಕೈಬುಲಿರ ಹರೀಶ್ ಅಪ್ಪಯ್ಯ ಹಿತವಚನ ನೀಡಿದರು. ವಿ.ಎ. ನಾಣಯ್ಯ ಕಾರ್ಯಕ್ರಮ ನಿರೂಪಿಸಿದರು. ಆಶ್ರಮದ ಸ್ವಾಮೀಜಿ ಸಿದ್ದುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು. ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಅಂಗಾಳ ಪರಮೇಶ್ವರಿ ಮಹೋತ್ಸವ
ವೀರಾಜಪೇಟೆ: ಶಿವ-ಪಾರ್ವತಿಯೊಂದಿಗೆ ಐಕ್ಯಗೊಂಡು ಅರ್ಧನಾರಿಶ್ವರಿ ಎಂದೇ ಖ್ಯಾತವಾಗಿರುವ ಕೊಡಗಿನ ಏಕೈಕ ದೇವಾಲಯವಾದ ಶ್ರೀ ಅಂಗಾಳ ಪರಮೇಶ್ವರಿ ದೇವಿಯ ಆಲಯದಲ್ಲಿ ಶಿವರಾತ್ರಿಯ ವಾರ್ಷಿಕ ಮಾಹೋತ್ಸವದ ಆಚರಣೆಯು ನಾಲ್ಕು ದಿನಗಳ ಕಾಲ ಭಕ್ತಿಯಿಂದ ಆರಾಧನೆಗೊಂಡು ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಪರಿಪೂರ್ಣಗೊಂಡಿತು.
ನಗರದ ತೆಲುಗುಶೆಟ್ಟರ ಬೀದಿಯಲ್ಲಿರುವ ಶ್ರೀ ಅಂಗಾಳ ಪರಿಮೇಶ್ವರಿ ದೇವಾಲಯದಲ್ಲಿ ಶಿವರಾತ್ರಿಯಂದು ವಾರ್ಷಿಕ ಮಹೋತ್ಸವ ನಡೆಯುತ್ತಿರುವದು ವಿಶೇಷ. ಇಲ್ಲಿನ ವಿಶೇಷತೆಯು ಶ್ರೀ ದೇವಿಯು ಶಿವ ಪಾರ್ವತಿ ದೇವಿಯೊಂದಿಗೆ ಒಳಗೊಂಡಿರುವ ಭವ್ಯ ಶಿಲಾ ಮೂರ್ತಿ, ಗರ್ಭಗುಡಿಯ ಮುಂಭಾಗದಲ್ಲಿ ಶ್ರೀ ದೇವಿಯ ಕೋಪವನ್ನು ತಣಿಸಲು ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ತಾ. 2 ರಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ತಾ. 5 ರ ರಾತ್ರಿ 9 ಗಂಟಗೆ ಮಹಾಪೂಜೆಯೊಂದಿಗೆ ಪರಿಸಮಾಪ್ತಿಯಾಯಿತು.
ಸಾಂಸ್ಕøತಿಕ ಕಾರ್ಯಕ್ರಮ
ಕೂಡಿಗೆ: ಸಮಾಜಕ್ಕೆ ಆಧ್ಯಾತ್ಮಿಕ ಚಿಂತನೆಗಳ ಜೊತೆಗೆ ಇಂದಿನ ಯುವ ಪೀಳಿಗೆಗೆ, ದೇಶಿಯ ಸಂಸ್ಕøತಿಯ ಬಗ್ಗೆ ಹಾಗೂ ಭಕ್ತಿ ಪ್ರಧಾನವಾದ ನಾಡು ನುಡಿಯ ಗ್ರಾಮಾಂತರ ಜನಪದ ಕಾರ್ಯಕ್ರಮಗಳು ಅನಿವಾರ್ಯವಾಗಿರುತ್ತದೆ. ಇಂದಿನ ಯುವ ಪೀಳಿಗೆಯು ಜನಪದ ಭಕ್ತಿ ಪ್ರಧಾನ ಕಾರ್ಯಕ್ರಮಗಳತ್ತ ಗಮನಹರಿಸುವದು ಬಹುಮುಖ್ಯ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಹೇಳಿದರು.
ತೊರೆನೂರಿನಲ್ಲಿ ನಡೆದ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೀತಗಾಯನ ಮತ್ತು ಜನಪದ ಜಾತ್ರೆ, ಹಾಸ್ಯ ಮತ್ತು ಟಿ.ಆರ್. ಪ್ರಭುದೇವ್ ತಂಡದಿಂದ ಜಾದೂ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಸಹಕಾರ ಬ್ಯಾಂಕ್‍ನ ನಿದೇರ್ಶಕರಗಳಾದ ಟಿ.ಕೆ. ಪಾಂಡುರಂಗ, ಚಂದ್ರಪ್ಪ, ಕುಶಾಲನಗರದ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ವಿವಿಧ ಸಮಿತಿಯ ಅಧ್ಯಕ್ಷರುಗಳು ಹಾಜರಿದ್ದರು.
ಧಾರಾ ಮಹೇಶ್ವರ ಉತ್ಸವ
ವೀರಾಜಪೇಟೆ: ಐತಿಹಾಸಿಕ ಹಿನ್ನೆಲೆಯುಳ್ಳ ವೀರಾಜಪೇಟೆ ನಗರ ಸಮೀಪ ಗ್ರಾಮವಾದ ಕೊಟ್ಟೋಳಿಯ ಧಾರಾ ಮಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದು ವಾರ್ಷಿಕ ಮಹೋತ್ಸವವು ತೆರೆ ಕಂಡಿತು.
ಸ್ವಯಂಭೂಷಿತ ಉದ್ಭವಿಸಿ ನೆಲೆ ನಿಂತ ಶಿವಶಂಕರ ಧಾರಾ ಮಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವರ ನೃತ್ಯ ಬಲಿಯ ಮೂಲಕ ಸಂಪನ್ನಗೊಂಡಿತು. ಚಂಗಚಂಡ ಐನ್‍ಮನೆಯಿಂದ ಭಂಡಾರ ಬಂದು ಕೊಡಿಮರ ಪೂಜೆ, ಅಂದಿ ಪೂಜೆ ತೂಚಂಬಲಿ, ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು.
ರುದ್ರಾಭಿಷೇಕ ರುದ್ರಹೋಮ, ಚಂಗಚಂಡ ಕೋದಂಡ, ಕೋಣೇರಿರ ಮತ್ತು ಕುಟ್ಟೇರಿರ ಕುಟುಂಬಸ್ತರಿಂದ ತಾವುಗಳು ಮನೆಯ ಪರಿಸರದಲ್ಲಿ ಪೋಷಿಸುವ ಪಶುಗಳಿಗೆ ಯಾವದೇ ರೀತಿಯಲ್ಲಿ ತೊಂದರೆಗಳು ಕಾಣಿಸಬಾರದು ಎಂದು ಎತ್ತುಪೋರಾಟ ನಡೆಯಿತು. ದೇವರ ನೃತ್ಯಬಲಿ, ಮಹಾಪೂಜೆ, ದೇವರ ಜಳಕವಾದ ನಂತರ ಉತ್ಸವ ಮೂರ್ತಿಯ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿದ ಸಂದರ್ಭ ಭಕ್ತರಿಂದ ಸೂರೆ ಕಾಯಿ ಒಡೆದು ನಮನ ಸಲ್ಲಿಸಲಾಯಿತು. ದೇವಾಲಯದ ಪ್ರಾಂಗಣದಲ್ಲಿ ಹನ್ನೊಂದು ಸುತ್ತು ಪ್ರದಕ್ಷಿಣೆ ದೇವರ ನೃತ್ಯ ಬಲಿಯು ಅಮೋಘವಾಗಿ ಮೂಡಿಬಂದಿತು. ನೆರೆದಿದ್ದ ಭಕ್ತ ಸಮೂಹವು ದೇವರ ನೃತ್ಯವನ್ನು ಕಂಡು ಪುಳಕಿತರಾದರು.
ನಂತರದಲ್ಲಿ ಉತ್ಸವ ಮೂರ್ತಿಗೆ ವಸಂತ ಪೂಜೆ ಸಮರ್ಪಣೆಗೊಂಡು ಶ್ರೀ ದೇವರಿಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹ ಪಡೆದು ಪುನೀತರಾದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ದೇವ ತಕ್ಕಮುಖ್ಯಸ್ಥರಾದ ಕೋದಂಡ ಮನ್ನಾ ಮಂದಣ್ಣ ಕಾರ್ಯದರ್ಶಿ ಚಂಗಚಂಡ ರತ್ನ ಅಯ್ಯಣ್ಣ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನ ಪ್ರಮುಖ ಕುಟುಂಬಗಳ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ಹುದುಗೂರುವಿನಲ್ಲಿ ಮಹಾಶಿವರಾತ್ರಿ
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ಅನೇಕ ಪೂಜಾ ಕಾರ್ಯಕ್ರಮಗಳು ನಡೆದವು.
ಶ್ರೀ ಉಮಾಮಹೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತವಾದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ವಾದ್ಯ ಗೋಷ್ಠಿಯೊಂದಿಗೆ ಕ್ಷೇತ್ರದ. ಪ್ರದಕ್ಷಿಣೆಯ ನಂತರ ಹುದುಗೂರು ಗ್ರಾಮ ಪ್ರದಕ್ಷಿಣೆ ಮಾಡಿ ಕ್ಷೇತ್ರಕ್ಕೆ ರಾತ್ರಿ ಬಂದು ಸೇರಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಬಿ.ಎಲ್. ಸುರೇಶ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ 4 ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.ದಿವ್ಯ ಪೂಜೆ
ಮಡಿಕೇರಿ: ಇಲ್ಲಿನ ಸಂತ ಮೈಕಲರ ದೇವಾಲಯದಲ್ಲಿ ನವೀಕರಣಗೊಂಡ ಬಲಿಪೀಠದ ಆಶೀರ್ವಚನ ಹಾಗೂ ಪವಿತ್ರಿಕರಣದ ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರದ ಬಿಷಪ್ ಡಾ. ವಿಲಿಯಂ ಕೆ.ಎ. ನೆರವೇರಿಸಿ ಬಲಿಪೂಜೆಯನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಶ್ರೇಷ್ಠ ಗುರುಗಳಾದ ಫಾ. ಮದಲೈಮುತ್ತು ಮತ್ತು ಕೊಡಗು ವಲಯದ ಗುರುಗಳು ಉಪಸ್ಥಿತರಿದ್ದರು. ಮಡಿಕೇರಿ ಧರ್ಮಕೇಂದ್ರ ಗುರುಗಳಾದ ಫಾ. ಆಲ್ಪ್ರೇಡ್ ಜಾನ್ ಮೆಂಡೊನ್ಸಾ, ಸಂತ ಮೈಕಲರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾ. ನವೀನ್‍ಕುಮಾರ್ ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.
ತೊರೆನೂರಿನಲ್ಲಿ ನುಡಿನಮನ
ಕೂಡಿಗೆ: ತೊರೆನೂರು ಗ್ರಾಮದಲ್ಲಿ ಶನೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ತ್ರಿವಿಧ ದಾಸೋಹ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನುಡಿನಮನ ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ ವಹಿಸಿದ್ದರು. ಉದ್ಘಾಟನೆಯನ್ನು ಮೈಸೂರು ಮಾಜಿ ಶಾಸಕ ವಾಸು ನೆರವೇರಿಸಿ, ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ನಾಡಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಮಹಾ ದೇವ ಪುರುಷ. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ತನ್ನದೆ ಆದ ದೃಷ್ಟಿಕೋನದಲ್ಲಿ ಆರೋಗ್ಯಕರ ಬಾಳ್ವೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವದರ ಮೂಲಕ ದೇಶಕ್ಕೆ ಮಾದರಿ ಎಂದರು.
ಮುಖ್ಯ ಭಾಷಣ ಮಾಡಿದ ಸಾಹಿತಿ ಮತ್ತು ಉಪನ್ಯಾಸಕ ಡಾ. ಮೋಹನ್ ಪಾಳೇಗಾರ್ ದೇಶ ಕಂಡ ಕೆಲವೇ ಶ್ರೇಷ್ಠ ಸಂತರ ಸಾಲಿನಲ್ಲಿ ಬರುವ ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ಹಾಕ್ಕಿಕೊಟ್ಟ ಮಾರ್ಗದರ್ಶನ ಹಿಂದಿನ ಎಲ್ಲಾ ಸಮಾಜಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎ. ಮಾದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತೊರೆನೂರು ಸಹಕಾರ ಸಂಘದ ನಿರ್ದೇಶಕ ಚಂದ್ರಪ್ಪ ಮಾತನಾಡಿದರು.
ವೇದಿಕೆಯಲ್ಲಿ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಪ್ರಶಾಂತ್ ಗೌಡ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಎಸ್. ಲೋಕೇಶ್ ಸಾಗರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ದೇವರಾಜು, ಸಹಕಾರ ಸಂಘದ ನಿರ್ದೇಶಕರಾದ ಜಗದೀಶ್, ಟಿ.ಕೆ. ಪಾಂಡುರಂಗ, ಶಿವಾನಂದ, ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಮಡಿಕೇರಿ ಡಿ.ಸಿ.ಸಿ. ಬ್ಯಾಂಕ್‍ನ ಅಧಿಕಾರಿ ಟಿ.ಎನ್. ತುಂಗರಾಜ್ ಮತ್ತಿತರರು ಇದ್ದರು.
ಮಾರಮ್ಮ ದೇವಸ್ಥಾನದಲ್ಲಿ ಪೂಜೆ
ಕೋತೂರು ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನ ಸಮಿತಿ ವತಿಯಿಂದ ಶ್ರೀ ಮಹದೇವ ದೇವರ ವಾರ್ಷಿಕ ಪೂಜೆ ತಾ. 9 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೇರಳದ ಶಂಕರ ನಂಬೂದ್ರಿ ತಂತ್ರಿಯವರಿಂದ ನಡೆಸಲು ತೀರ್ಮಾನಿಸಲಾಗಿದೆ.
ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ತಂತ್ರಿಯವರಿಂದ ಪೂಜೆ ನಡೆಯಲಿದೆ. ತಾ. 18 ರಂದು ಶ್ರೀ ಮಹದೇವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮುತ್ತಪ್ಪ ಉತ್ಸವ
*ಗೋಣಿಕೊಪ್ಪಲು: ತಿತಿಮತಿ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. 15 ರಿಂದ 17 ರವರೆಗೆ ಮೂರು ದಿನಗಳು ನಡೆಯಲಿದೆ.
ತಾ. 15 ರಂದು ಬೆಳಿಗ್ಗೆ 11 ಗಂಟೆಗೆ ಗಣಪತಿ ಹೋಮ ಮತ್ತು ಮಕ್ಕಳ ಭವಿಷ್ಯಕ್ಕಾಗಿ ದಿವ್ಯಾ ಮೌನ ಜ್ಞಾನ ನಡೆಯಲಿದೆ. ಸಂಜೆ 4 ಗಂಟೆಗೆ ಬಾಳುಮನೆ ಗಣಪತಿ ದೇವಸ್ಥಾನದಿಂದ ಕಳಸ ತರುವ ಕಾರ್ಯಕ್ರಮ ನಡೆಯಲಿದೆ. ನಂತರ ಎರಡು ದಿನಗಳು ಮುತ್ತಪ್ಪ ದೇವರ ವೆಳ್ಳಾಟ, ವಸುರಿಮಾಲ ತೆರೆ, ಗಿಳಿಗ ತೆರೆ, ಕಾರ್ನವರ್ ತೆರೆ ಹಾಗೂ ಇತರ ವಿವಿಧ ತೆರೆಗಳು ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ.
ಇಂದಿನಿಂದ ಪ್ರತಿಷ್ಠಾಪನೆ
ಸುಂಟಿಕೊಪ್ಪ: ಇಲ್ಲಿನ ಗ್ರಾಮ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮವು ತಾ. 7 ರಂದು (ಇಂದು) ನಡೆಯಲಿದ್ದು, ಸಂಜೆ 6.30ಕ್ಕೆ ಗ್ರಾಮ ದೇವರ ಗುಡಿ ಸ್ವೀಕಾರ, 7 ಗಂಟೆಗೆ ಸ್ಥಳಶುದ್ಧಿ, ಸಪ್ತಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಜಲದಿವಾಸ, ದಾನ್ಯ ದಿವಾಸ, ದಿಕ್ಷಾಲಕ ಬಲಿ, ತಾ. 8 ರಂದು ಬೆಳಿಗ್ಗೆ 7.30ಕ್ಕೆ ಸ್ಥಳ ಶುದ್ಧಿ ಗಣಹೋಮ, ಪ್ರತಿಷ್ಠಾ ಹೋಮ, ನವಕಲಶ ಪ್ರತಿಷ್ಠೆ, 10.26ಕ್ಕೆ ವೃಷಭ ಲಗ್ನದಲ್ಲಿ ಗ್ರಾಮ ದೇವರ ಪ್ರತಿಷ್ಠೆ, ಕಲಷಾಭಿಷೇಕ, 12 ಗಂಟೆಗೆ ವiಹಾ ಪೂಜೆ, 12.30ಕ್ಕೆ ತೀರ್ಥ ಪ್ರಸಾದ ಮಂತ್ರಾಕ್ಷತೆ, ಅನ್ನಸಂತರ್ಪಣೆ. ತಾ. 15 ರಂದು ಬೆಳಿಗ್ಗೆ 10 ಗಂಟೆಗೆ ದೇವಿಗೆ ಹರಕೆ ಸಮರ್ಪಣೆ, 2 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರು, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರಾಧನೆ-ನುಡಿ ನಮನ
ಸೋಮವಾರಪೇಟೆ: ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗ, ಬೆಂಗಳೂರಿನ ಶಾರದ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿ ಸಮೀಪದ ಹಾನಗಲ್ಲು ಗ್ರಾ.ಪಂ. ಆವರಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಗಂಗಾ ಶ್ರೀಗಳ ಆರಾಧನೆ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ವಹಿಸಿದ್ದರು. ಶಾರದ ಪ್ರತಿಷ್ಠಾನದ ಅಧ್ಯಕ್ಷ ಹುಲಿವಾನ ನರಸಿಂಹಸ್ವಾಮಿ ಅವರು ಶ್ರೀಗಳ ಸಾಮಾಜಿಕ ಸೇವೆಯ ಬಗ್ಗೆ ಸ್ಮರಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ ಕಾಳಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕವಿಗೋಷ್ಠಿ ಮತ್ತು ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುತ್ತಪ್ಪ ಉತ್ಸವ
*ಗೋಣಿಕೊಪ್ಪಲು: ಅರುವತ್ತೋಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ ಮುತ್ತಪ್ಪ ದೇವಸ್ಥಾನದ 8ನೇ ವರ್ಷದ ಉತ್ಸವ ತಾ. 9 ಹಾಗೂ 10 ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ತಾ. 9 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ಧ್ವಜರೋಹಣ, 9.30ಕ್ಕೆ ದೇವರ ಕಲಶ ಇರಿಸುವದು. ಅಪರಾಹ್ನ 4.30 ಕ್ಕೆ ಮುತ್ತಪ್ಪನ ಮಲೆ ಇಳಿಸುವದು. ಸಂಜೆ 7.30 ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, 8 ಗಂಟೆಗೆ ಬಾಲಕಿಯರ ತಾಲಪ್ಪೊಲಿ ಹರಡುವದು, 8.30 ಕ್ಕೆ ವಸೂರಿ ಮಾಲ ತೆರೆ ಹೊರಡುವದು. ನಂತರ ಅನ್ನಸಂತರ್ಪಣೆ ಹಾಗೂ ರಾತ್ರಿ 12.30 ಕ್ಕೆ ಗುಳಿಗೆ ದೇವರ ವೆಳ್ಳಾಟಂ ನಡೆಯಲಿದೆ ಎಂದು ತಿಳಿಸಿದೆ.
ತಾ. 10 ರಂದು ಬೆಳಿಗ್ಗೆ 6 ಗಂಟೆಗೆ ಮುತ್ತಪ್ಪ ಹಾಗೂ ತಿರುವಪ್ಪನ ವೆಳ್ಳಾಟಂ, ಪೈಂಗುತ್ತಿ, 11 ಗಂಟೆಗೆ ಗುಳಿಗೆ ದೇವರ ತೆರೆ, 11.30 ಕ್ಕೆ ವಸೂರಿ ಮಾಲ ತೆರೆ ನಂತರ ಅನ್ನಸಂತರ್ಪಣೆ ನಡೆಯಲಿದೆ.