v ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ v ಸುಳ್ಯದಲ್ಲಿ ಪ್ರಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ

ಮಡಿಕೇರಿ, ಮಾ. 6: ಅರೆಭಾಷೆ ಆಡುಭಾಷೆಯಾಗಿ ಬೆಳೆಯಬೇಕು. ಭಾಷೆಯ ಬಗ್ಗೆ ಕೀಳರಿಮೆ ಇಟ್ಟು ಕೊಳ್ಳದೆ ಹೆಮ್ಮೆಯಿಂದ ಆಡಿದರೆ ಭಾಷೆ ಬೆಳೆಯುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಸುಳ್ಯದಲ್ಲಿ ನಡೆದ ಅರೆಭಾಷೆ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಪಿ ಇದ್ದ ಭಾಷೆ ಮಾತ್ರ ಶ್ರೇಷ್ಠ ಭಾಷೆ ಎಂದಿಲ್ಲ. ಅರೆಭಾಷೆಯಂತಹ ಭಾಷೆಗಳು ನಮ್ಮ ಬದುಕಿನ ಅಡಿಪಾಯ. ತಮ್ಮತನವನ್ನು ಜಗತ್ತಿಗೆ ಸಾರುವ ಇಂತಹ ಭಾಷೆಯನ್ನು ಉಳಿಸಬೇಕಾದರೆ ಇದನ್ನು ಆಡುವವರ ಸಂಖ್ಯೆ ಜಾಸ್ತಿಯಾಗಬೇಕು ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಸಾಹಿತ್ಯ ಅಕಾಡೆಮಿ, ಅರೆಭಾಷಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಮತ್ತು ಗೌಡರ ಯುವಸೇವಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಗೌಡ ಸಮುದಾಯಭವನದ ಕೊಳಂಬೆ ಪುಟ್ಟಣ್ಣ ಗೌಡ ಸಭಾಂಗಣದಲ್ಲಿ, ಕುರುಂಜಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಪ್ರಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯಿತು.

ಸಾಹಿತ್ಯ ಸಮ್ಮೇಳನಗಳು, ಗೋಷ್ಠಿಗಳು ಭಾಷೆಯ ಬೆಳವಣಿಗೆಗೆ ಕಾರಣ ಆಗುತ್ತವೆ. ಅರೆಭಾಷೆ ಮಾತನಾಡುತ್ತಿದ್ದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯ ನಾಯಕರಾಗಿದ್ದರು. ಇದರಿಂದ ಇಂದಿಗೂ ಅರೆಭಾಷೆಯ ಸ್ವಂತಿಕೆ ಉಳಿದುಕೊಂಡಿದೆ. 5 ರಿಂದ 8 ಲಕ್ಷ ಅರೆಭಾಷೆಯ ಮಾತನಾಡುವ ಜನರು ಭಾಷೆ ಮಾತಾಡಿದರೆ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ. ಭಾಷೆಯೊಂದಿಗೆ ನಮ್ಮ ಆಚಾರ ವಿಚಾರ, ಸಂಸ್ಕಾರ, ಸಂಸ್ಕøತಿಯನ್ನು ಉಳಿಸಬೇಕು ಎಂದರು.

ದಾಖಲೆಯಿಂದ ಭಾಷೆಯ ಉಳಿವು: ಯಾವದೇ ಭಾಷೆಯ ಉಳಿವಿಗೆ ಆ ಭಾಷೆಯ ಸಾಹಿತ್ಯ ದಾಖಲೆಯಾಗುತ್ತದೆ. ವಿಶೇಷ ಸಂಸ್ಕøತಿಯನ್ನು ಹೊಂದಿರುವ ಅರೆಭಾಷೆ ಕೂಡ ಇಂತಹ ಸಾಹಿತ್ಯ ದಾಖಲೀಕರಣದಿಂದ ಬೆಳೆಯಬೇಕು ಎಂದು ನಿವೃತ್ತ ಉಪ ಕುಲಪತಿ ಡಾ. ಕೊಳಂಬೆ ಚಿದಾನಂದ ಗೌಡ ಹೇಳಿದ್ದಾರೆ. ಅರೆಭಾಷೆಯ ಚರಿತ್ರೆ ಕ್ರಿಸ್ತ ಪೂರ್ವದ್ದು. ಸಂಸ್ಕøತದ ಪದಗಳಿಂದ ಭಾಷೆ ಸ್ವಲ್ಪ ಮರೆಯಾದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ವಿಜೃಂಭಿಸುತ್ತಿದೆ. ಮಾತೃಭಾಷೆ ಹೃದಯದ ಭಾಷೆ. ಭಾಷೆಯಿಂದ ಬದುಕಿನ ಒಗ್ಗಟ್ಟು ಕೂಡ ಸಾಧ್ಯ ಎಂದು ಡಾ. ಕೊಳಂಬೆ ಹೇಳಿದರು.

ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಅನಾವರಣಗೊಳಿಸಿದ ಸುಳ್ಯ ಶಾಸಕ ಅಂಗಾರ ಮಾತನಾಡಿ, ಭಾಷೆಯ ಹಿಂದೆ ಭಾವನೆ ಬೇಕು. ಭಾವನೆ ಹಿಂದೆ ಭಕ್ತಿ ಬೇಕು. ಈ ಹಿನ್ನೆಲೆ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಸಿ. ಜಯರಾಮ ಮಾತನಾಡಿ, ಗೌಡ ಜನಾಂಗದ ಭಾಷೆ ಮಾತ್ರ ಅಲ್ಲ. ಈ ಭಾಷೆ ಜಾತಿಯನ್ನು ಮೀರಿದ ಭಾಷೆ. ಎಲ್ಲ ಜನಾಂಗ ಪ್ರೀತಿಸುವ ಭಾಷೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ-ಚಿಕ್ಕ ಭಾಷೆ ನಶಿಸಿಹೋಗುತ್ತಿರುವ ವೇಳೆ ಭಾಷೆಗಳ ಸಬಲೀಕರಣಕ್ಕೆ ಸರಕಾರ ಒತ್ತು ನೀಡಬೇಕಾಗಿದೆ.

ಮುಂದೆ ಅರೆಭಾಷೆ ಅಧ್ಯಯನ ಪೀಠ ರಚನೆಯಾಗಬೇಕು. ಭಾಷಾ ಅಲ್ಪಸಂಖ್ಯಾತ ಪಟ್ಟಿಯಲ್ಲಿ ಅರೆ ಭಾಷೆಯೂ ಸೇರ್ಪಡೆಯಾಗಬೇಕು. ಅಲ್ಲದೆ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕು ಎಂದರು.

ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ರೇಣುಕಾಪ್ರಸಾದ್ ಉದ್ಘಾಟಿಸಿದರು. ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾದವ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ಧ್ವಜರೋಹಣವನ್ನು ಉಬರಡ್ಕ ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ನೆರವೇರಿಸಿದರು. ವಸ್ತು ಪ್ರದರ್ಶನವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು. ಪುಸ್ತಕ ಪ್ರದರ್ಶನ ವನ್ನು ಜಿ.ಪಂ. ಸದಸ್ಯ ಹರೀಶ್ ಕಂಜಿವಿಪಿಲಿ ಉದ್ಘಾಟಿಸಿದರು.

ಕುಕ್ಕೆಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಪೂರ್ವಾಧ್ಯಕ್ಷರುಗಳಾದ ದೇವಿಪ್ರಸಾದ್ ಸಂಪಾಜೆ, ಗಿರೀಶ್ ಕೊಲ್ಯದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಕೆ.ಸಿ. ಅಕ್ಷಯ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಅಕಾಡೆಮಿ ಸದಸ್ಯ ಕೆ.ಟಿ. ವಿಶ್ವನಾಥ ನಿರೂಪಿಸಿದರು. ಯು.ಸು. ಗೌಡ ಗುತ್ತಿಗಾರ್ ಸ್ಮರಣ ಸಂಚಿಕೆ ಸಂಪಾದಕರ ನೆಲೆಯಲ್ಲಿ ಮಾತನಾಡಿದರು.