ಮಡಿಕೇರಿ, ಮಾ. 6: ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿಗೆ ಇದೀಗ ನೀರಿನ ತೀರಾ ಅಗತ್ಯವಿದೆ. ಮುಂದಿನ ವರ್ಷದ ಫಸಲು ಉತ್ತಮವಾಗಿರಬೇಕೆಂದರೆ ಈ ಸಮಯದಲ್ಲಿ ಕಾಫಿ ತೋಟಗಳಿಗೆ ನೀರು ಅನಿವಾರ್ಯ. ಕಳೆದ ಕೆಲವು ದಿವಸಗಳಿಗೆ ಮುನ್ನ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತಾದರೂ, ಮಳೆ ಸುರಿದಿರುವದು ಮಾತ್ರ ಕೆಲವೇ ಕೆಲವು ವಿಭಾಗಗಳಲ್ಲಿ ಆ ಸಂದರ್ಭದಲ್ಲಿ ಕಾಫಿ ಕುಯಿಲು ಸೇರಿದಂತೆ, ಕುಯಿದ ಕಾಫಿ ಒಣಗುವದೂ ದುಸ್ತರವಾಗಿತ್ತು. ಈ ಕೆಲಸಗಳನ್ನು ಪೂರೈಸಿದ್ದ ಬೆಳೆಗಾರರಿಗೆ ಅವರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ತುಸು ಅನುಕೂಲಕರವೂ ಆಗಿತ್ತು. ಕೆರೆ, ನದಿಗಳಲ್ಲಿ ನೀರಿನ ಸೌಲಭ್ಯದೊಂದಿಗೆ ನೀರು ಹಾಯಿಸಲು ಸಾಮಥ್ರ್ಯ ಹೊಂದಿರುವ ಬೆಳೆಗಾರರು ಈ ಕೆಲಸದಲ್ಲಿ ಕಾರ್ಯತತ್ಪರರಾಗಿದ್ದಾರೆ. ಇದೀಗ ಬಹುತೇಕ ಪ್ರಸ್ತುತದ ಕಾಫಿಯ ಕೆಲಸ ಕಾರ್ಯಗಳು ಹಲವು ಸಮಸ್ಯೆಗಳ ನಡುವೆಯೂ ಮುಗಿಸಿರುವ ಬೆಳೆಗಾರರಿಗೆ, ಮುಂದಿನ ವರ್ಷದ ಉತ್ತಮ ಫಸಲಿಗೆ ನೀರು ಅವಶ್ಯಕವಾಗಿದೆ.

ಜಿಲ್ಲೆಯಲ್ಲಿ ಕಳೆದ ಮಳೆಗಾಲದ ಸಂದರ್ಭದಲ್ಲಿ ಜಲಪ್ರಳಯದಂತಹ ಮಹಾಮಳೆ ಕಂಡುಬಂದಿತ್ತಾದರೂ ಇದು ನಿಂತ ಬಳಿಕ ಮಳೆಯಾಗಿರುವದು ಕಡಿಮೆ. ಇದೀಗ ಶಿವರಾತ್ರಿ ಉತ್ಸವವೂ ಮುಗಿದಿದ್ದು, ಬೇಸಿಗೆಯ ಬಿಸಿಲಿನ ಪ್ರಖರತೆಯೂ ಹೆಚ್ಚಾಗುತ್ತಿದೆ. ಇರುವ ಜಲಮೂಲಗಳಲ್ಲೂ ನೀರಿನ ಮಟ್ಟದಲ್ಲಿ ದಿನೇ ದಿನೇ ಇಳಿಕೆಯಾಗುತ್ತಿರುವದು ಕಂಡುಬಂದಿದೆ. ಬಿಸಿಲ ಧಗೆಯ ನಡುವೆ ಅಲ್ಲಲ್ಲಿ ಬೆಂಕಿ ಅನಾಹುತಗಳೂ ಸಂಭವಿಸುತ್ತಿರುವದು ಆತಂಕ ಮೂಡಿಸುತ್ತಿದೆ. ಪ್ರಸ್ತುತದ ವಾತಾವರಣವನ್ನು ಗಮನಿಸಿದರೆ ಜಿಲ್ಲೆಯ ಯಾವದೇ ಭಾಗಗಳಲ್ಲೂ ಮಳೆಯಾಗುವಂತಹ ಲಕ್ಷಣಗಳು ಗೋಚರಿಸುತ್ತಿಲ್ಲ. ಸದ್ಯಕ್ಕೆ ಅನುಕೂಲ ಇರುವ ಮಂದಿ ತೋಟಗಳಿಗೆ ನೀರು ಹಾಯಿಸುವ ಕೆಲಸವನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಕಾರ್ಯೋನ್ಮುಖವಾಗಿರುವದು ಕಂಡುಬರುತ್ತಿದೆ. ಸದ್ಯದಮಟ್ಟಿಗೆ ಇರುವ ನೀರನ್ನು ಬಳಸಿ ಕಾಫಿ ಹೂ ಅರಳಿಸಲು ಯಶಸ್ವಿಯಾದರೂ ಬ್ಯಾಕಿಂಗ್ (ಪೂರಕಮಳೆ)ಗೆ ಯಾವ ಸಂಕಷ್ಟ ಕಾದಿದೆಯೋ ಎಂಬ ಚಿಂತೆ ಇಂತಹ ಬೆಳೆಗಾರರದ್ದಾಗಿದೆ. ನೀರು ಹಾಯಿಸಲು ಶಕ್ತರಲ್ಲದವರಿಗೆ ನೈಸರ್ಗಿಕವಾದ ಮಳೆಯೇ ಅತ್ಯಗತ್ಯವಾಗಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ಕಾಫಿಗೆ ಹೂಮಳೆ ತೀರಾ ಅಗತ್ಯವಾಗಿದೆ. ಕಾಫಿ ಬೆಳೆಗಾರರ ಪರಿಸ್ಥಿತಿ ಒಂದೆಡೆಯಾದರೆ ಬೇಸಿಗೆಯ ಈ ಸಮಯದಲ್ಲಿ ಜಲಮೂಲಗಳಲ್ಲಿ ನೀರಿನ ಮಟ್ಟ ಇಳಿಕೆ ಕಾಣುತ್ತಿರುವದೂ ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯತೆಗಳಿಗೆ ಆತಂಕವನ್ನು ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಸೇರಿದಂತೆ ಎಲ್ಲರ ಚಿತ್ತ ಇದೀಗ ಆಗಸದತ್ತ ಹರಿದಾಡುತ್ತಿದೆ.