ಮಡಿಕೇರಿ, ಮಾ. 3: ಸ್ಯಾಂಡಲ್ವುಡ್ನಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದು ಹೆಸರು ಮಾಡಿರುವ ಬಹು ಬೇಡಿಕೆಯ ನಟ ದರ್ಶನ್ ತಾಯಿ ಮೂಲತಃ ಕೊಡಗಿನ ಪೊನ್ನಂಪೇಟೆಯವರು. ತೂಗುದೀಪ ಶ್ರೀನಿವಾಸ್ ಅವರ ಪತ್ನಿ ಮೀನಾ ಪೊನ್ನಂಪೇಟೆಯವರಾಗಿದ್ದು, ಈ ದಂಪತಿಯ ಪುತ್ರ ‘ದಾಸ’ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನಟ. ಈ ಹಿರಿಯ ನಟನ ಅಭಿನಯದ ಚಿತ್ರ ಯಜಮಾನ ಇದೀಗ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭೇಷ್ ಎನಿಸಿಕೊಳ್ಳುತ್ತಿದೆ. ಯಜಮಾನದಲ್ಲಿ ಈ ನಾಯಕ ನಟನೊಂದಿಗೆ ಯಜಮಾನಿಯಾಗಿ ಅಭಿನಯಿಸಿರುವದು ಕೊಡಗಿನ ತಾರೆ ರಶ್ಮಿಕಾ ಮಂದಣ್ಣ.
ಪ್ರಸ್ತುತ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸುದ್ದಿ ಮಾಡುತ್ತಿರುವ ರಶ್ಮಿಕಾ ಕೂಡ ವೀರಾಜಪೇಟೆಯವರು. ಮುಂಡಚಾಡಿರ ಮದನ್ ಮಂದಣ್ಣ ಹಾಗೂ ಸುಮನ್ ದಂಪತಿಯ ಪುತ್ರಿ ರಶ್ಮಿಕಾ. ‘ಕಿರಿಕ್ ಪಾರ್ಟಿ’ ಯಶಸ್ವಿ ಚಿತ್ರದ ಮೂಲಕ ದಿಢೀರನೆ ಚಿತ್ರರಂಗದಲ್ಲಿ ಹೆಸರು ಮಾಡಿದವರು.
ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನೊಂದಿಗೆ ಈಕೆಗೆ ಅವಕಾಶಗಳು ಹೆಚ್ಚು ಹೆಚ್ಚು ದೊರೆಯಲಾರಂಭಿಸಿದ್ದು, ಸಣ್ಣ ಅವಧಿಯಲ್ಲೇ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾಳೆ.
ಕನ್ನಡದೊಂದಿಗೆ ತೆಲುಗು ಚಿತ್ರರಂಗದಲ್ಲೂ ಭಾರೀ ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾ ಈಗಾಗಲೇ ಸುಮಾರು 10 ಚಿತ್ರಗಳಲ್ಲಿ ನಾಯಕಿಯಾಗಿ ಹೊರಹೊಮ್ಮಿದ್ದಾಳೆ. ಇದೀಗ ಕನ್ನಡ ಹಾಗೂ ತೆಲುಗು ಭಾಷಾ ಚಿತ್ರಗಳಲ್ಲದೆ, ತಮಿಳಿನಲ್ಲೂ ಈಕೆಗೆ ಅವಕಾಶವೊಂದು ದೊರೆಯುತ್ತಿದೆ ಎನ್ನಲಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟರೊಬ್ಬರೊಂದಿಗೆ ಈಕೆ ತಮಿಳು ಚಿತ್ರದಲ್ಲೂ ನಟಿಸುವ ಕುರಿತಾಗಿ ಮಾತುಕತೆ ನಡೆಯುತ್ತಿದ್ದು, ಇದು ಅಂತಿಮ ಹಂತದಲ್ಲಿದೆ.
ಇದಾದಲ್ಲಿ ರಶ್ಮಿಕಾ ತ್ರಿಭಾಷಾ ನಟಿಯಾಗಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಲಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿಯೊಂದಿಗೆ ಕಿರಿಕ್ ಪಾರ್ಟಿ, ಪುನಿತ್ರಾಜ್ಕುಮಾರ್ನೊಂದಿಗೆ ಅಂಜನಿಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ರೊಂದಿಗಿನ ಚಮಕ್ ಬಳಿಕ ಇದೀಗ ದರ್ಶನ್ರೊಂದಿಗೆ ಯಜಮಾನ ಚಿತ್ರ ತೆರೆ ಕಂಡಿದೆ. ಧ್ರುವ ಸರ್ಜಾರೊಂದಿಗಿನ ಅಭಿನಯದ ಪೊಗರು ಎಂಬ ಕನ್ನಡ ಚಿತ್ರವೂ ಚಿತ್ರೀಕರಣವಾಗುತ್ತಿದೆ. ಕನ್ನಡದ ಯಶಸ್ಸಿನೊಂದಿಗೆ ತೆಲುಗು ಚಿತ್ರರಂಗದಿಂದಲೂ ಅವಕಾಶ ಪಡೆದ ರಶ್ಮಿಕಾ ಈಗಾಗಲೇ ಚಲೋ, ಗೀತಗೋವಿಂದಂ, ದೇವದಾಸ್ ಚಿತ್ರಗಳಲ್ಲಿ ನಟಿಸಿದ್ದು, ಈ ಚಿತ್ರಗಳು ತೆರೆ ಕಂಡಿವೆ. ಇದರೊಂದಿಗೆ ಡಿಯರ್ ಕಾಮ್ರೇಡ್ ಹಾಗೂ ಭೀಷ್ಮ ಚಿತ್ರಗಳು ಚಿತ್ರೀಕರಣ ಹಂತದಲ್ಲಿದೆ.
ಸದ್ಯಕ್ಕೆ ನಟನೆಗಷ್ಟೇ ಒತ್ತು
ಚಿತ್ರರಂಗದಲ್ಲಿ ಪ್ರಸ್ತುತ ‘ಬ್ಯುಸಿ’ಯಾಗಿರುವ ನಟಿ ರಶ್ಮಿಕಾ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ಸದ್ಯದ ಮಟ್ಟಿಗೆ ನಟನೆಗೆ ಮಾತ್ರ ಒತ್ತು ನೀಡುತ್ತಿರುವದಾಗಿ ಹೇಳಿದರು. ಹಲವು ಕನಸುಗಳಿವೆ. ಈ ಗುರಿ ಸಾಧನೆಗಷ್ಟೆ ಈಗಿನ ಆದ್ಯತೆ ಎಂದ ಆಕೆ ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿಯೊಂದಿಗೆ ನಡೆದಿದ್ದ ವಿವಾಹ ನಿಶ್ಚಿತಾರ್ಥದ ಕುರಿತು ಪ್ರತಿಕ್ರಿಯಿಸಿ ಅದೊಂದು ಮುಗಿದ ಅಧ್ಯಾಯ ಎಂದಷ್ಟೆ ಹೇಳಿದರು.
ವಿವಾಹವಾಗುವ ವಿಚಾರ ಸದ್ಯಕ್ಕೆ ಇಲ್ಲ ಕೆಲವು ವರ್ಷಗಳು ಕಳೆಯಲಿ ಎಂದ ಈ ‘ಸಾನ್ವಿಕಾ’ ಖ್ಯಾತಿಯ ತಾರೆ ಯಜಮಾನ ಚಿತ್ರದ ಬಗ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದರ್ಶನ್ರೊಂದಿಗೆ ನಟಿಸಿರುವದು ಅನುಭವ ಹೆಚ್ಚಿಸಿದೆ ಎಂದಳು.
ಪ್ರಸ್ತುತ ತಾಯಿಯೊಂದಿಗೆ ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಕೊಡಗು, ಕೊಡಗಿನ ವಾತಾವರಣ ನೆನಪಾಗುತ್ತದೆ. ತಮ್ಮ ಪುಟ್ಟ ತಂಗಿ ಕೂಡ ವೀರಾಜಪೇಟೆ ಮನೆಯಲ್ಲೇ ಇದ್ದು, ಕರೆಯುತ್ತಿರುತ್ತಾಳೆ. ಆದರೆ ಚಿತ್ರೀಕರಣದ ಓಡಾಟದಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.