ಮಡಿಕೇರಿ, ಮಾ. 3: ಪೊನ್ನಂಪೇಟೆಯ ಹಳೆಯ ನ್ಯಾಯಾಲಯ ಕಟ್ಟಡ ಬಳಿ ರಸ್ತೆಯಲ್ಲಿ ನಿನ್ನೆ ರಾತ್ರಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮೃತನಾಗಿದ್ದು, ಮತ್ತೋರ್ವ ಗಂಭೀರ ಗಾಯಗಳೊಂದಿಗೆ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ನಾಪೋಕ್ಲು ನಿವಾಸಿ ಕಾರ್ಮಿಕ ಕಿಶೋರ್ (31) ಎಂಬವರು ಕೆಲಸದ ನಿಮಿತ್ತ ಪೊನ್ನಂಪೇಟೆಗೆ ತೆರಳಿದ್ದು, ಈ ವೇಳೆ ಗೋಣಿಕೊಪ್ಪಲುವಿನ ಕೆ.ಇ.ಬಿ. ಉದ್ಯೋಗಿ ನಂಜುಂಡ ನಾಯ್ಕ ಎಂಬವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಕಿಶೋರ್ ಚಲಿಸುತ್ತಿದ್ದ ಬೈಕ್ (ಕೆಎ 12 ಕೆ 7941)ಗೆ ಎದುರಾಳಿಯ ಬೈಕ್ (ಕೆಎ 45 ಕ್ಯೂ 1964) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.

ಗಾಯಾಳು ಕಿಶೋರ್ ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ತಲೆಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಂಜುಂಡ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.