ಮಡಿಕೇರಿ, ಮಾ. 3: ಪ್ರಸಕ್ತ ವರ್ಷದ ಶಿವರಾತ್ರಿ ಉತ್ಸವ ಶಿವನ ಆರಾಧನೆಯ ದಿನವಾದ ಸೋಮವಾರದಂದು (ತಾ. 4ರ ಈ ದಿನ) ನಿಗದಿಯಾಗಿದ್ದು, ನಾಡಿನೆಲ್ಲೆಡೆ ಶಿವರಾತ್ರಿ ಆಚರಣೆಗೆ ಭಕ್ತ ಸಮೂಹ ಸಿದ್ಧಗೊಂಡಿದೆ. ವಿವಿಧ ಶಿವ ದೇವಾಲಯಗಳಲ್ಲಿ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಶಿವರಾತ್ರಿಯ ದಿನದ ವಿಶೇಷ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆಗಳು ನಡೆದಿವೆ.

ಪೂಜೆ - ಪುನಸ್ಕಾರಗಳೊಂದಿಗೆ ಭಜನೆ, ಶಿವನ ವೇಷ - ಭೂಷಣದೊಂದಿಗೆ ಧಾರ್ಮಿಕ - ಸಾಂಸ್ಕøತಿಕ ಕಾರ್ಯಕ್ರಮಗಳು ತಾ. 4 ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ಬೆಳಿಗ್ಗೆ, ಸಂಜೆ, ಪೂಜಾ ವಿಧಿ ವಿಧಾನಗಳು ಜರುಗಲಿದ್ದು, ರಾತ್ರಿ ಜಾಗರಣೆಯ ಮೂಲಕ ಶಿವನನ್ನು ಆರಾಧಿಸಲೂ ಭಕ್ತಾದಿಗಳು ಕಾತರದಿಂದಿದ್ದಾರೆ. ಭಾಗಮಂಡಲದ ಭಗಂಡೇಶ್ವರ ದೇವಸ್ಥಾನ, ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ, ಮಡಿಕೇರಿಯ ಶ್ರೀ ಓಂಕಾರೇಶ್ವರ, ಶನಿವಾರಸಂತೆಯ ಮಲೆಮಳ್ಳೇಶ್ವರ, ಮೇಕೇರಿಯ ಗೌರಿಶಂಕರ ದೇವಾಲಯ, ಪಾಲೂರು ಮಹಾಲಿಂಗೇಶ್ವರ, ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನ, ಇರ್ಪು ಶ್ರೀ ರಾಮೇಶ್ವರ, ವೀರಾಜಪೇಟೆಯ ಅಂಗಾಳ ಪರಮೇಶ್ವರಿ, ಕಂಬಿಬಾಣೆ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಲಿವೆ.

ಪೇರ್ಮಾಡು ಈಶ್ವರ ದೇವಾಲಯ ಹಾಗೂ ಇರ್ಪು ಶ್ರೀ ರಾಮೇಶ್ವರ ದೇವಾಲಯಕ್ಕೆ ವಿಶೇಷ ಮಹತ್ವವಿದ್ದು, ಇರ್ಪುವಿನಲ್ಲಿ ಜಾಗರಣೆಯ ಮರುದಿನ ಪವಿತ್ರ ಸ್ನಾನ ಹಾಗೂ ಜಾತ್ರೆಯೂ ನಡೆಯಲಿದೆ. ನಾಡಿನೆಲ್ಲೆಡೆ ಹಲವಾರು ದೇವಾಲಯ ಗಳಲ್ಲಿ ಅಲ್ಲಲ್ಲಿನ ಆಚರಣೆಗೆ ವಿಶೇಷ ಪ್ರಾತಿನಿದ್ಯ, ಕಟ್ಟುಪಾಡುಗಳಿದ್ದು, ಅದಕ್ಕನುಗುಣವಾಗಿ ಶಿವನ ಆರಾಧನೆ ನೆರವೇರಲ್ಪಡಲಿದೆ.

* ಮಡಿಕೇರಿ ನಗರದ ದಾಸವಾಳ ಬಳಿಯ ಮಡಿಕಟ್ಟೆ ಶ್ರೀ ವೀರಭದ್ರ ಮುನೀಶ್ವರ ದೇವಾಲಯದಲ್ಲಿ ತಾ. 4 ರಂದು ಮಹಾಶಿವರಾತ್ರಿ ಪ್ರಯುಕ್ತ, ವಿಶೇಷ ದೈವಿಕ ಕೈಂಕರ್ಯಗಳು ನಡೆ ಯಲಿವೆ. ಬೆಳಗಿನ ಪೂಜೆಯೊಂದಿಗೆ ದೇವತಾ ಆರಾಧನೆ, ಸದ್ಭಕ್ತರಿಗೆ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ, 10 ಗಂಟೆಯಿಂದ ಸಾಂಸ್ಕøತಿಕ ಚಟುವಟಿಕೆ, ಸಂಗೀತ ಮಂಜರಿ ಏರ್ಪಡಿಸಿದ್ದು, ತಾ. 5ರ ಬೆಳಿಗ್ಗೆ ತನಕ ಪೂಜಾಧಿ ಜರುಗಲಿದೆ. ಶ್ರೀ ಮುನೀಶ್ವರ - ವೀರಭದ್ರ ದೇವಾಲಯ ಆಡಳಿತ ಮಂಡಳಿ ಸದ್ಭಕ್ತರ ಸಹಕಾರದಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿದೆ ಎಂದು ಪ್ರಕಟಣೆ ತಿಳಿಸಿದೆ.

ವೀರಾಜಪೇಟೆ: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ,4 ರಂದು ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಅಭಿಷೇಕ, ಶಾಂತಿಪೂಜೆ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಿದ್ದಾಪುರ: ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಯು ವಿವಿಧ ಧಾರ್ಮಿಕ ಪ್ರವಚನಗಳೊಂದಿಗೆ ತಾ.4 ರಂದು (ಇಂದು) ನಡೆಯಲಿದೆ. ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ಯುವಕಲಾ ಸಮಿತಿಯ ವತಿಯಿಂದ ಮುತ್ತಪ್ಪ ಸಭಾಂಗಣದಲ್ಲಿ ಸಂಜೆ 6.30 ಕ್ಕೆ ಉದ್ಘಾಟನೆ, ರಾತ್ರಿ 7 ಗಂಟೆಗೆ ಕಪಿಲಾಶ್ರಮ ಉತ್ತರ ಕಾಶಿಯ ರಾಮಚಂದ್ರ ಸ್ವಾಮಿಜೀಯವರಿಂದ ಆಶೀರ್ವಚನ ಹಾಗೂ ಧಾರ್ಮಿಕ ಪ್ರವಚನ ನಡೆಯಲಿದೆ.