ಮಡಿಕೇರಿ, ಮಾ. 3: ಕೊಡಗಿನ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ ಹಾಗೂ ಇತರ ಸಂದರ್ಭಗಳಲ್ಲಿ ವಾಹನ ದಟ್ಟಣೆ ಎದುರಾಗದಂತೆ, ಪರ್ಯಾಯ ರಸ್ತೆ ನಿರ್ಮಾಣ ಕಾಮಗಾರಿಗೆ, ರಾಜ್ಯ ಸರಕಾರದಿಂದ ರೂ. 3 ಕೋಟಿ ಅನುದಾನದಲ್ಲಿ ಇಂದು ಭೂಮಿಪೂಜೆ ಮಾಡಲಾಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಇತರ ಜನ ಪ್ರತಿನಿಧಿಗಳ ಜತೆಗೂಡಿ ಪರ್ಯಾಯ ರಸ್ತೆ ಸಂಪರ್ಕ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರಕಾರವು ಪ್ರಮುಖ 20 ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಸಂಬಂಧ ಅನುದಾನವನ್ನು ಕಲ್ಪಿಸಿದ್ದು, ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಸಹಕಾರದೊಂದಿಗೆ ತಲಕಾವೇರಿ ಕ್ಷೇತ್ರದ ಸಂಪರ್ಕ ರಸ್ತೆಗೆ ರೂ. 3 ಕೋಟಿ ಒದಗಿಸಿರುವದು ಶ್ಲಾಘನೀಯ ಎಂದು ನುಡಿದರು.
ಭಾಗಮಂಡಲದಿಂದ ತಲಕಾವೇರಿಯ ಪ್ರಸಕ್ತ ಮುಖ್ಯ ರಸ್ತೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತನಕ ಈ ರಸ್ತೆ ಅಭಿವೃದ್ಧಿ ಹೊಂದಲಿದ್ದು, ಈಗಿನ ರೂ. 3 ಕೋಟಿಯಲ್ಲಿ ಸುಸಜ್ಜಿತವಾಗಿ 2 ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ರೂ. 4 ಕೋಟಿ ರಸ್ತೆ : ಅಂತೆಯೇ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧೀ ಯೋಜನೆಯಡಿ; ಶ್ರೀ ಕ್ಷೇತ್ರ ತಲಕಾವೇರಿಗೆ ರೂ. 3 ಕೋಟಿ ವೆಚ್ಚದಲ್ಲಿ, ಅಲ್ಲಿನ ಕೆಂಪುರಾಶಿ ಮೊಟ್ಟೆಯಿಂದ ಮಂಟಿಕಲ್ ಶಾಲೆಯ ತನಕ 2 ಕಿ.ಮೀ. ದೂರದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು. ಅಲ್ಲದೆ, ಈ 3 ಕೋಟಿ ಯಲ್ಲದೆ, ಕೋರಂಗಾಲ, ಸುಬ್ರಹ್ಮಣ್ಯ ರಸ್ತೆ ರೂ. 10 ಲಕ್ಷ, ತಾವೂರು, ಅಚ್ಚೋಳು, ಬಾರಿಕೆ ರಸ್ತೆಗೆ ರೂ. 10 ಲಕ್ಷ, ಚೇರಂಗಾಳ - ಕೋಡಿಮನೆ ರಸ್ತೆಗೆ ರೂ. 10 ಲಕ್ಷ, ಕೋರಂಗಾಲ - ಕೋಟಿಗದ್ದೆ ರಸ್ತೆಗೆ ರೂ. 5 ಲಕ್ಷ ಸಹಿತ ಇತರ ಒಟ್ಟು ವಿವಿಧ ಕಾಮಗಾರಿಗಳ ಬಾಬ್ತು ಅಂದಾಜು ರೂ. 4 ಕೋಟಿಯ ಕೆಲಸ ಕೈಗೊಳ್ಳಲಾಗುತ್ತಿದೆ ಎಂದು ಅವರು ನೆನಪಿಸಿದರು.
ಗ್ರಾಮಸ್ಥರು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಮತ್ತು ಕಳಪೆ ಕೆಲಸ ಆಗದಂತೆ ನೋಡಿ ಕೊಳ್ಳುವದು ಸ್ಥಳೀಯ ಪ್ರತಿನಿಧಿಗಳ ಸಹಿತ, ಆಯ ಗ್ರಾಮಸ್ಥರ ಕರ್ತವ್ಯ ವೆಂದು ಬೋಪಯ್ಯ ಒತ್ತಿ ಹೇಳಿದರು.
ಮೇಲ್ಸೇತುವೆ ಬಗ್ಗೆ ಚರ್ಚೆ : ಶ್ರೀ ಕ್ಷೇತ್ರ ಭಾಗಮಂಡಲ - ತಲಕಾವೇರಿ ಮಾರ್ಗದಲ್ಲಿ; ವರ್ಷಂಪ್ರತಿ ಮಡಿಕೇರಿ ಹಾಗೂ ನಾಪೋಕ್ಲುವಿಗೆ ತೆರಳುವ ಎರಡು ರಸ್ತೆಗಳು, ಮಳೆಗಾಲದಲ್ಲಿ ಮುಳುಗಡೆಗೊಂಡು ಸಾರಿಗೆ ಸಂಪರ್ಕ ಕಡಿತಗೊಳ್ಳುವದ್ದನ್ನು ತಪ್ಪಿಸಲು ನೂತನವಾಗಿ ನಿರ್ಮಾಣಕ್ಕೆ ಮುಂದಾಗಿರುವ ಮೇಲ್ಸೇತುವೆ ಕಾಮಗಾರಿಗೆ ಯಾವದೇ ಅಡಚಣೆ ಎದುರಾಗದಂತೆ ಇಂದು ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮತ್ತು ಸ್ಥಳೀಯ ಅಲ್ಲಿನ ಜನ ಪ್ರತಿನಿಧಿಗಳು ಈ ಸಂಬಂಧ ಗುತ್ತಿಗೆ ಸಂಸ್ಥೆ ಮುಖ್ಯಸ್ಥರೊಂದಿಗೆ ಚರ್ಚಿಸಿದರು.
ಕರ್ನಾಟಕ ಸರಕಾರದಿಂದ ಕಾವೇರಿ ನೀರಾವರಿ ನಿಗಮದ ವತಿಯಿಂದ ಪ್ರಾರಂಭಿಕ ರೂ. 30 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆಯ ರೂಪುರೇಷೆ (ಮೊದಲ ಪುಟದಿಂದ) ಹಾಗೂ ಗುಣಮಟ್ಟದ ಕಾಮಗಾರಿಯ ಸಂಬಂಧ ಶಾಸಕರು ಗುತ್ತಿಗೆ ಸಂಸ್ಥೆ ಬೆಂಗಳೂರಿನ ಎವಿಆರ್ ತೇಜಸ್ ಇಸ್ಫ್ರಾ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಹಾಗೂ ಡಾ. ಆನಂದ್ ಅವರು ಗಳೊಂದಿಗೆ ಮಾತುಕತೆ ನಡೆಸಿದರು. ಭಾಗಮಂಡಲ ದೇವಾಲಯ ಪರಿಸರ, ಸಂಗಮ ಕ್ಷೇತ್ರ ಹಾಗೂ ಶ್ರೀ ನಾಗಬನ ಮತ್ತು ಚಾಮುಂಡಿ ಸನ್ನಿಧಿಗಳಿಗೆ ಕ್ಷೇತ್ರಕ್ಕೆ ಬಂದು ಹೋಗುವ ಭಕ್ತರ ಸಹಿತ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಗಮನ ಹರಿಸುವ ಮೂಲಕ ಕಾಮಗಾರಿ ಕೈಗೊಳ್ಳ ಬೇಕೆಂದು ಸಂಬಂಧಪಟ್ಟವರಿಗೆ ಸಲಹೆ ನೀಡಲಾಯಿತು. ಆ ದಿಸೆಯಲ್ಲಿ ಗಮನ ಹರಿಸುವದಲ್ಲದೆ, ಭವಿಷ್ಯದ ದೂರದೃಷ್ಟಿಯನ್ನು ಕಂಡುಕೊಳ್ಳುವತ್ತ ಕೆಲಸ ಮಾಡುವಂತೆ ಶಾಸಕರು ಕಳಕಳಿ ವ್ಯಕ್ತಪಡಿಸಿದರು.
ಈ ಬಗ್ಗೆ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಇಂಜಿನಿಯರ್ಗೆ ತಾನು ಆಗಿಂದಾಗ್ಗೆ ಗಮನಕ್ಕೆ ತಂದಿರುವದಾಗಿ ತಿಳಿಸಿದ ದೇವಾಲಯ ಸಮಿತಿ ಅಧ್ಯಕ್ಷರು, ಮುಂದಿನ ಮೇ ತಿಂಗಳು ಭಾಗಮಂಡಲ ಕ್ಷೇತ್ರದಲ್ಲಿ ತಂತ್ರಿಗಳ ಮಾರ್ಗದರ್ಶನದಲ್ಲಿ ಅಷ್ಟಮಂಗಲ ದೊಂದಿಗೆ ಅವರ ಸಲಹೆಯಂತೆ ದೈವಿಕ ನೆಲೆಗಳ ಅಭಿವೃದ್ಧಿ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದರು.
ಅಲ್ಲದೆ ಮೇಲ್ಸೇತುವೆ ಕಾಮಗಾರಿ ಯಿಂದ ದೈವಿಕ ಕ್ಷೇತ್ರ ಸಂಬಂಧ ಯಾವದೇ ತೊಡಕುಗಳು ಬಾರದಂತೆ ಸಂಬಂಧಪಟ್ಟವರಿಗೆ ಮಾಹಿತಿ ಒದಗಿಸಲಾಗಿದೆ ಎಂದು ಅಧ್ಯಕ್ಷರು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ರಾಜ್ಯ ಸರಕಾರವು ಕಾವೇರಿ ನೀರಾವರಿ ನಿಗಮದಿಂದ ಕಾಮಗಾರಿಗೆ ಅಗತ್ಯ ಅನುದಾನ ಕಲ್ಪಿಸಿರುವ ಸಂಬಂಧ ಕೆ.ಜಿ.ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಶ್ಲಾಘನೀಯ ನುಡಿಯಾಡಿದರು.
ಈ ಮೇಲ್ಸೇತುವೆಯಿಂದಾಗಿ ಕಳೆದ ಅನೇಖ ದಶಕದಿಂದ ಮಳೆಗಾಲದಲ್ಲಿ ಭಾಗಮಂಡಲ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ - ಕಾಲೇಜು ಮಕ್ಕಳು, ಗ್ರಾಮದ ಉದ್ಯೋಗಿಗಳ ಸಹಿತ ಯಾತ್ರಾರ್ಥಿ ಗಳಿಗೆ ಉಂಟಾಗುತ್ತಿರುವ ಸಂಕಷ್ಟ ಭವಿಷ್ಯದಲ್ಲಿ ತಪ್ಪಲಿದೆ ಎಂದು ಇದೇ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ನೆನಪಿಸಿಕೊಂಡರು.
ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷೆ ಸುನಿತಾ, ಜಿ.ಪಂ. ಮಾಜಿ ಸದಸ್ಯ ರಾಜೀವ್, ಮಾಜಿ ಮಂಡಲ ಪ್ರಧಾನ ಟಿ.ಎಸ್. ನಾರಾಯಣಾಚಾರ್, ಗ್ರಾ.ಪಂ. ಪ್ರತಿನಿಧಿಗಳು, ಪಕ್ಷದ ಪ್ರಮುಖರಾದ ಕಾಳನ ರವಿ, ಕೆ.ಜಿ. ಕೀರ್ತನ್, ಡಾ. ಖುಷ್ವಂತ್ ಗುತ್ತಿಗೆದಾರ ನಾಗರಾಜ್, ಇಂಜಿನಿಯರ್ ದೇವರಾಜ್ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.
- ಚಿತ್ರ : ಕೆ.ಡಿ. ಸುನಿಲ್