ಉಗ್ರ ಮಸೂದ್ ಅಜರ್ ಸಾವು ?
ರಾವಲ್ಪಿಂಡಿ, ಮಾ.3 : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಭಾರತದ ಮಟ್ಟಿಗೆ ಇದು ಶುಭ ಸುದ್ಧಿಯಾಗಲಿದೆ. ಮೂತ್ರ ಪಿಂಡ ತೀವ್ರ ವೈಫಲ್ಯದಿಂದ ಬಳಲುತ್ತಿದ್ದ ಜೈಷ್ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿ ರೂವಾರಿ ಅಜರ್ ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಇನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗವಾಗಿ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇರುವದಾಗಿ ಹಾಗೂ ಆತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿಕೊಂಡಿತ್ತು. ಇನ್ನು ಮಸೂದ್ ಅಜರನ್ ನನ್ನು ಉಳಿಸಿಕೊಳ್ಳಲು ಪಾಕ್ ಮತ್ತೊಂದು ನಾಟಕ ಶುರು ಮಾಡಿಕೊಂಡಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಇನ್ನು ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಗಳ ಮೇಲಿನ ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ನಲ್ಲಿ ಮಸೂದ್ ಅಜರ್ ಗಾಯಗೊಂಡಿದ್ದ ಆತನನ್ನು ಪಾಕಿಸ್ತಾನ ರಹಸ್ಯವಾಗಿ ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಂಗ್ ಕಮಾಂಡರ್ ಅಭಿನಂದನ್ಗೆ ಗಾಯ
ನವದೆಹಲಿ, ಮಾ.3 : ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರರಿಗೆ ಎರಡನೇ ದಿನವೂ ಸಹ ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ. ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಐಎ ಎಫ್ ಅಧಿಕಾರಿಗಳ ಸಮ್ಮುಖದಲ್ಲೇ ಪರೀಕ್ಷೆ ನಡೆದಿದೆ. ಅಭಿನಂದನ್ ಅವರಿಗೆ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ ಎಂದು ವರದಿಗಳು ಹೇಳಿದೆ. ಶುಕ್ರವಾರ ಪಾಕಿಸ್ತಾನದಿಂದ ಹಿಂತಿರುಗಿದ ವಿಂಗ್ ಕಮಾಂಡರ್ ಅವರ ಸೇನಾ ತನಿಖೆ ಇನ್ನೂ ಮುಂದುವರಿದಿದ್ದು ಇದುವರೆಗೆ ಯಾವುದೇ ಸಂಶಯಾತ್ಮಕ ವಿಚಾರಗಳಿಲ್ಲ ಎಂದು ಹೇಳಲಾಗಿದೆ. ಎಂಆರ್ ಐ ಸ್ಕ್ಯಾನ್ ವರದಿಯಲ್ಲಿ ಅಭಿನಂದನ್ ಅವರ ಪಕ್ಕೆಲುಬು, ಕೆಳ ಬೆನ್ನುಮೂಳೆಯ ಭಾಗದಲ್ಲಿ ಗಾಯವಾಗಿರುವುದು ಸಹ ಪತ್ತೆಯಾಗಿದೆ. ಪಾಕಿಸ್ತಾನ ಸ್ಥಳೀಯರು ನಡೆಸಿದ್ದ ಹಲ್ಲೆಯಿಂದ ಅವರು ಗಾಯಗೊಂಡಿದ್ದಾರೆ. ಮುಂದಿನ ಹತ್ತು ದಿನಗಳ ಕಾಲ ದೆಹಲಿ ಕಂಟೋನ್ಮೆಂಟ್ ಪ್ರದೇಶದ ರಿಸರ್ಚ್ ಆಂಡ್ ರೆಫರಲ್ ಹಾಸ್ಪಿಟಲ್ ನಲ್ಲಿ ಅಭಿನಂದನ್ ಅವರಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಗಳು ಹೇಳಿದೆ.
ತಾ.6 ರಂದು ಮೋದಿ ರ್ಯಾಲಿ
ಕಲಬುರಗಿ, ಮಾ.3 : ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೇ 6ರಂದು ಕಲಬುರಗಿಯಲ್ಲಿ ಚಾಲನೆ ನೀಡಲಿದ್ದಾರೆ. ಇಲ್ಲಿನ ಎನ್ ವಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಬಿಜೆಪಿ ರ್ಯಾಲಿ ಆಯೋಜಿಸಲಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ್ದಾರೆ. ಈ ಹಿಂದೆ ಮಾರ್ಚ್ 1 ನಂತರ ಮಾರ್ಚ್ 7ರಂದು ಮೋದಿ ರ್ಯಾಲಿ ಎಂದು ನಿಗದಿಯಾಗಿತ್ತು. ಆದರೆ, ಈಗ ಕೊನೇ ಕ್ಷಣದಲ್ಲಿ ಮೇ 6ರಂದು ಕಲಬುರಗಿಯಲ್ಲಿ ಮೋದಿ ರಾರಯಲಿ ನಡೆಸಲು ನಿರ್ಧರಿಸಲಾಗಿದೆ. ಅಂದು ಮಧ್ಯಾಹ್ನ ನಡೆಯಲಿರುವ ಸಮಾವೇಶದಲ್ಲಿ ಮೋದಿ ಅವರು ಕಲಬುರಗಿ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ಆಗಮಿಸುವ ಲಕ್ಷಾಂತರ ಮಂದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 10.40ರ ಸುಮಾರಿಗೆ ವಿಶೇಷ ವಿಮಾನದಲ್ಲಿ ಮೋದಿಯವರು ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ರಸ್ತೆ ಮೂಲಕ ಪ್ರಯಾಣಿಸಿ ಕಲಬುರಗಿಗೆ ಆಗಮಿಸಲಿದ್ದಾರೆ, ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸುವ ಮುನ್ನ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳೊಂದಿಗೆ ಮತ್ತು ಭಾರತ್ ಪೆಟ್ರೋಲಿಯಂ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ ಕುಂಬ್ಳೆ ಆಯ್ಕೆ
ದುಬೈ, ಮಾ.3 : ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೊಮ್ಮೆ ಆಯ್ಕೆ ಆಗಿದ್ದಾರೆ. ದುಬೈನಲ್ಲಿ ನಡೆದ 6 ದಿನಗಳ ಐಸಿಸಿಯ ಸಭೆಯಲ್ಲಿ ಈ ನಿರ್ಣಯವನ್ನು ಮಾಡಲಾಗಿದೆ. ಈಗಾಗಲೇ 2 ಅವಧಿಗಳಲ್ಲಿ ಐಸಿಸಿ ಸಮಿತಿಯ ಅಧ್ಯಕ್ಷರಾಗಿರುವ ಅನುಭವವನ್ನು ಕುಂಬ್ಳೆ ಪಡೆದಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ಕುಂಬ್ಳೆ ಅವರು ಐಸಿಸಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅದಕ್ಕೂ ಮುನ್ನ ಆ ಸ್ಥಾನವನ್ನು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ಲೇವ್ ಲಾಯ್ಡ್ ನಿರ್ವಹಿಸಿದ್ದರು. ಸದ್ಯ ಸತತವಾಗಿ 3ನೇ ಬಾರಿಗೆ ಕುಂಬ್ಳೆ ಅವರು ಆಯ್ಕೆ ಆಗಿದ್ದಾರೆ. ಕುಂಬ್ಳೆ ಅವರು ಅಧ್ಯಕ್ಷರಾಗಿರುವ ಐಸಿಸಿ ಸಮಿತಿ ಪ್ರಮುಖವಾಗಿ ನಿಯಮ ಉಲ್ಲಂಘಿಸಿದ ಆಟಗಾರರ ಮೇಲೆ ಯಾವ ಪ್ರಮಾಣದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಕೆಲವು ಪ್ರಕರಣಗಳ ವಿಚಾರಣೆ ಸಹ ನಡೆಸುತ್ತದೆ. ಇತ್ತೀಚಿಗೆ ಶ್ರೀಲಂಕಾದ ಆಟಗಾರ ಸನತ್ ಜಯಸೂರ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷ್ಯವನ್ನು ನೀಡದ್ದಕ್ಕೆ ಈ ಸಮಿತಿ 2 ವರ್ಷಗಳ ಕಾಲ ನಿಷೇಧ ಹೇರಿತ್ತು. 18 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆ, 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್, 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದ ಹೆಮ್ಮೆ ಹೊಂದಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚುನ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದ ಟೆಸ್ಟ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಎಲ್ಲಾ 10 ವಿಕೆಟ್ ಪಡೆದು ಮಿಂಚಿದ್ದರು.