ವೀರಾಜಪೇಟೆ, ಮಾ. 3 ಕುಟ್ಟ ಗ್ರಾಮದ ಬಳಿಯ ಮಂಚಳ್ಳಿ ಕಾಯಿಮಾನಿ ತೋಟದ ಲೈನು ಮನೆಯ ನಿವಾಸಿ ಲೇಟ್ ಪಣಿಎರವರ ಮಾನ ಎಂಬವನ ಪತ್ನಿ ಚುಂಡೆ (45) ಎಂಬಾಕೆ ತನ್ನ ಮಗಳು ಪಾಲಿ (27) ಎಂಬಾಕೆಯನ್ನು ಕೊಲೆ ಮಾಡಿದ ಆರೋಪದ ಮೇರೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ರಮಾ ಅವರು 7ವರ್ಷ ಸಜೆ ಹಾಗೂ ರೂ. 25000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.(ಮೊದಲ ಪುಟದಿಂದ) ಕಳೆದ ತಾ:27-2-2018ರಂದು ಕಾಫಿ ತೋಟಕ್ಕೆ ಕೆಲಸಗಾರರನ್ನು ಕರೆದು ಕೊಂಡು ಬರುವ ವಿಷಯದಲ್ಲಿ ತಾಯಿ ಚುಂಡೆ ಹಾಗೂ ಪಾಲಿ ಇವರ ಮಧ್ಯ ಜಗಳ ಉಂಟಾಗಿ ಮೊದಲು ಪಾಲಿ ತಾಯಿ ಮೇಲೆ ಹಲ್ಲೆ ನಡೆಸಿದ್ದರಿಂದ ಕುಪಿತಗೊಂಡ ಚುಂಡೆ ಮನೆಯಲ್ಲಿದ್ದ ಮೊಬೈಲ್ ಕೇಬಲ್‍ನಿಂದ ಮನೆಯ ಮುಂದಿನ ಕಿಟಕಿ ಬಳಿ ಕುಳಿತಿದ್ದ ಪಾಲಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದಳೆಂದು ಆರೋಪಿಸಿ ಚುಂಡೆಯ ಹಿರಿಯ ಮಗಳು ಶೋಭ ಕುಟ್ಟ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಚುಂಡೆಯನ್ನು ಬಂಧಿಸಿ ಇಲ್ಲಿನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ತಾಯಿ ಮಗಳ ನಡುವೆ ಇದೇ ರೀತಿ ಜಗಳವಾಗುತ್ತಿದ್ದಾಗ ಶೋಭ ಎರಡು ಮೂರು ಬಾರಿ ಸಮಧಾನಪಡಿಸಿಯೂ ಇಬ್ಬರು ಜಗಳ ಮುಂದುವರೆಸಿದ್ದರು ಎಂದು ಶೋಭ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ದಂಡದ ರೂಪದಲ್ಲಿ ಬರುವ ಹಣದಲ್ಲಿ ರೂ. 15000 ನಗದನ್ನು ಮೃತ ಪಾಲಿಯ ಮಕ್ಕಳಿಗೆ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಸರಕಾರದಪರ ಡಿ.ನಾರಾಯಣ ವಾದಿಸಿದರು.