ವೀರಾಜಪೇಟೆ, ಮಾ.1: ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಊಳಿಸಿಕೊಂಡಿರುವದು ಜಾನಪದ ಸಂಸ್ಕøತಿ ಎಂದು ಶಾಸ್ರ್ತೀಯ ಸಂಗೀತ ಗುರು ದಿಲಿಕುಮಾರ್ ಅಭಿಪ್ರಾಯಪಟ್ಟರು.
ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಜಾನಪದ ಗೀತೆಗಳ ಗಾಯನ ಸ್ಪರ್ಧಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ದಿಲಿಕುಮಾರ್ ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ಡಾ. ಶ್ರೀನಿವಾಸ ಮೂರ್ತಿ ಮಾತನಾಡಿ, ನೂರಾರು ವರ್ಷಗಳಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು ಎಂದರೆ ಅದು ಜನಪದ ಎಂದರು.
ಪರಿಷತ್ತಿನ ಉಪಾಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಜನಪದ ಜ್ಞಾನ ಪರಂಪರಾನುಗತವಾಗಿ ಸಾಗಿ ಬಂದದ್ದು, ತಲೆಮಾರಿನಿಂದ ತಲೆಮಾರಿಗೆ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ 'ಜಾನಪದ' ಎನ್ನಿಸಿಕೊಂಡಿದೆ ಎಂದರು. ಪರಿಷತ್ತಿನ ಕಾನೂನು ಸಲಹೆಗಾರ ಡಿ.ಸಿ.ಧ್ರುವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಾನಪದ ಸಾಮಾನ್ಯವಾಗಿ ಅನಕ್ಷರ ಜ್ಞಾನವಾಗಿದೆ. ಇದು ಆಡುಮಾತಿನಲ್ಲಿ ಇರುವಂತಹದು. ಹೀಗಾಗಿ ಜಾನಪದ ಸರಳತೆ ಹಾಗೂ ಸ್ಪಷ್ಟತೆಯಿಂದ ಕೂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸಂಸ್ಕೃತಿಯು ಎಲ್ಲಾ ಮಾನವಶಾಸ್ತ್ರಗಳಿಗೆ ಮೂಲ ಆಧಾರ. ಜಾನಪದ ಜನ ಸಂಸ್ಕೃತಿಯ ಒಂದು ಅಧ್ಯಯನವಾಗಿದೆ ಎಂದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ಸಂಚಾಲಕ ಚಂಬಂಡ ಮುದ್ದಪ್ಪ, ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ತಾತಂಡ ಪ್ರತಾಪ್, ಸೋಮೆಯಂಡ ಕೌಶಲ್ಯ ಸತೀಶ್ ಉಪಸ್ಥಿತರಿದ್ದರು. ನಿರ್ದೇಶಕರುಗಳಾದ ಸುನಿತಾ, ರಶ್ಮಿ, ನಳಿನಿ ಬಿಂದು, ಪ್ರಮೀಳಾ ನಾಚಯ್ಯ ಅಮ್ಮುಣಿಚಂಡ ಗಂಗಮ್ಮ, ಸಾಂಸ್ಕøತಿಕ ಸಮಿತಿಯ ಚೇತನ್ ಪಾಲ್ಗೊಂಡಿದ್ದರು. ಪುಲ್ವಾಮದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಟಿ.ಡಿ.ಮೋಹನ್ ಹಾಗೂ ಬಿ.ಆರ್. ಸತೀಶ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಮನೆಯಪಂಡ ದೇಚಮ್ಮ ಕಾಳಪ್ಪ ಸ್ವಾಗತಿಸಿದರು. ಪುಷ್ಪಲತಾ ಶಿವಪ್ಪ, ವಿಮಲ ಹಾಗೂ ಟಾಮಿ ಥೋಮಸ್ ನಿರೂಪಿಸಿದರೆ, ಪಿ.ಎ. ವಿನೋದ್ ವಂದಿಸಿದರು.