ಮಡಿಕೇರಿ, ಮಾ. 1: ಇಂದಿನಿಂದ ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಕೊಡಗಿನ 16 ಪರೀಕ್ಷಾ ಕೇಂದ್ರಗಳಲ್ಲಿ 4372 ವಿದ್ಯಾರ್ಥಿಗಳು ಹಾಜರಾಗುವದರೊಂದಿಗೆ, ಮೊದಲನೆಯ ದಿನದಂದು ಭೌತಶಾಸ್ತ್ರ ಹಾಗೂ ಅರ್ಥಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಒಟ್ಟು 4533 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಈ ಪೈಕಿ 161 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪ.ಪೂ. ಶಿಕ್ಷಣ ಇಲಾಖೆಯಿಂದ ಮಾಹಿತಿ ಲಭಿಸಿದೆ.
ಜಿಲ್ಲೆಯೆಲ್ಲಡೆ ಶಾಂತಿಯುತವಾಗಿ ಯಾವದೇ ಗೊಂದಲಕ್ಕೆ ಎಡೆಯಿಲ್ಲದಂತೆ ಸುಲಲಿತವಾಗಿ ಪರೀಕ್ಷೆ ನಡೆದಿದೆ ಎಂದು ಅಧಿಕಾರಿ ಕೆಂಚಪ್ಪ ಖಚಿತಪಡಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 6,73,606 ವಿದ್ಯಾರ್ಥಿಗಳ ಪೈಕಿ 5,60,395 ವಿದ್ಯಾರ್ಥಿಗಳು ಮೊದಲು ಪರೀಕ್ಷೆ ಬರೆಯುತ್ತಿದ್ದು, 85,542 ಮಂದಿ ಮರು ಪರೀಕ್ಷೆಗೆ ಹಾಜರಾಗಿದ್ದಾಗಿದೆ ಎಂದು ಮಾಹಿತಿ ಬಂದಿದೆ.