ಮಡಿಕೇರಿ, ಮಾ.1 : ವಿಶ್ವ ಶ್ರವಣ ದೋಷ ನಿವಾರಣಾ ದಿನಾಚರಣೆ ಪ್ರಯುಕ್ತ ತಾ. 3ರಂದು ನಗರದ ಅಮೃತ ಇಎನ್‍ಟಿ ಸೆಂಟರ್‍ನಲ್ಲಿ ಉಚಿತವಾಗಿ ಶ್ರವಣ ದೋಷ ತಪಾಸಣಾ ಶಿಬಿರ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರದ ಕಿವಿ ಮೂಗು, ಗಂಟಲು ತಜ್ಞ ಡಾ. ಮೋಹನ್ ಅಪ್ಪಾಜಿ ಅವರು, ನಗರದ ರಾಜಾಸೀಟ್ ರಸ್ತೆಯಲ್ಲಿರುವ ಕಾಫಿಕೃಪಾ ಕಟ್ಟಡದಲ್ಲಿರುವ ಅಮೃತ ಇಎನ್‍ಟಿ ಸೆಂಟರ್‍ನಲ್ಲಿ ಅಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಶ್ರವಣ ದೋಷ ಪತ್ತೆ ಶಿಬಿರವನ್ನು ಉಚಿತವಾಗಿ ನಡೆಸಲಾಗುವದು ಎಂದು ತಿಳಿಸಿದರು.
ಶ್ರವಣ ದೋಷ ನಿವಾರಣೆ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಒತ್ತು ನೀಡುತ್ತಿದ್ದು, ಸದ್ಯದಲ್ಲೇ ಇದು ರಾಷ್ಟ್ರೀಯ ಕಾರ್ಯಕ್ರಮವಾಗಿ ಜಾರಿಗೆ ಬರಲಿದೆ. ಶ್ರವಣ ದೋಷ ನಿವಾರಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಸಕ್ತ ವಿಶ್ವದಲ್ಲಿ 315ಮಿಲಿಯನ್ ಹಾಗೂ ಭಾರತದಲ್ಲಿ 63 ಮಿಲಿಯನ್ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ವಿದೇಶಗಳಲ್ಲಿ ಪ್ರತಿ ಮಗು ಹುಟ್ಟಿದಾಕ್ಷಣ ಒಇಒ ಪರೀಕ್ಷೆ ಕಡ್ಡಾಯವಾಗಿದ್ದು, ಇದೀಗ ಭಾರತದಲ್ಲೂ ಮೆಟ್ರೋಪಾಲಿಟನ್ ನಗರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಇತರ ಪ್ರದೇಶಗಳಲ್ಲಿ ಇದು ಇನ್ನೂ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಈ ಉದ್ದೇಶದಿಂದ ಉಚಿತ ಶಿಬಿರ ಆಯೋಜಿಸಲಾಗುತ್ತಿದೆ ಎಂದು ನುಡಿದರು.
ತಾಯಿಯ ಗರ್ಭದಲ್ಲಿರುವಾಗ ಉಂಟಾಗುವ ಸೋಂಕಿನಿಂದ ಮಕ್ಕಳಲ್ಲಿ ಹುಟ್ಟಿನಲ್ಲೇ ಕಿವುಡುತನ ಉಂಟಾಗುವ ಸಾಧ್ಯತೆಗಳಿದ್ದು, ಹುಟ್ಟಿದ ಬಳಿಕ ಕಿವಿಯ ಭಾಗಕ್ಕೆ ಬೀಳುವ ಏಟು, ಮತ್ತಿತರ ಕಾರಣದಿಂದಲೂ ಶ್ರವಣ ದೋಷ ಉಂಟಾಗುತ್ತದೆ. ಇದನ್ನು ಆರಂಭದಲ್ಲಿಯೇ ಆದಷ್ಟು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವದರಿಂದ ಮುಂದೆ ಸಮಸ್ಯೆ ಉಲ್ಬಣವಾಗುವದನ್ನು ತಡೆಯಬಹುದು ಎಂದು ಮೋಹನ್ ಅಪ್ಪಾಜಿ ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ದೂರವಾಣಿ ಸಂಖ್ಯೆ 08272-221460 ಅಥವಾ ಮೊಬೈಲ್ 8792874030ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಎಂದರು.
ಶ್ರವಣ ದೋಷ ತಜ್ಞ (ಆಡಿಯಾಲಜಿಸ್ಟ್) ಎಂ.ಎ.ಅಪ್ಪಯ್ಯ ಅವರು ಮಾತನಾಡಿ, ಮಕ್ಕಳ ಕಿವುಡತನದ ಬಗ್ಗೆ ಮಗು ಹುಟ್ಟಿದ 24 ಗಂಟೆಗಳೊಳಗೆ ಪರೀಕ್ಷೆ ಮಾಡಲಾಗುತ್ತದೆ. ಅದಾದ ಬಳಿಕ ಒಂದು ತಿಂಗಳು ಮತ್ತು 3ನೇ ತಿಂಗಳಲ್ಲಿ ಪರೀಕ್ಷೆ ಮಾಡಿ ಆ ಮಗುವಿಗೆ ಶ್ರವಣ ದೋಷ ಇದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸ ಲಾಗುತ್ತದೆ. ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ‘ಇಯರ್‍ಫೋನ್’ ನ್ನು ಅತಿಯಾಗಿ ಬಳಸುವದರಿಂದ ಮುಂದಿನ 5-10 ವರ್ಷಗಳಲ್ಲಿ ಅವರಿಗೆ ಶ್ರವಣ ದೋಷ ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ. ಉಳಿದಂತೆ ಅತಿಯಾದ ಶಬ್ಧದಿಂದ ಕಿವಿಯಲ್ಲಿ ದೋಷ ಉಂಟಾಗುವ ಸಾಧ್ಯತೆಗಳೂ ಇದ್ದು, ವಯಸ್ಕರಲ್ಲಿ ಅನುವಂಶೀಯತೆ ಯಿಂದ ವಯೋ ಸಹಜವಾದ ಶ್ರವಣ ದೋಷವೂ ಉಂಟಾಗುತ್ತದೆ ಎಂದು ವಿವರಿಸಿದರು. ಹೆಚ್ಚಿನ ವಿವರಗಳಿಗೆ 9845471569(ಡಾ. ಮೋಹನ್ ಅಪ್ಪಾಜಿ) ಅಥವಾ 8867625286 (ಎಂ.ಎ.ಅಚ್ಚಯ್ಯ) ಅವರನ್ನು ಸಂಪರ್ಕಿಸಬಹುದಾಗಿದೆ.