ಮಡಿಕೇರಿ, ಮಾ. 1: ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದ್ದು, ಈ ಜಿಲ್ಲೆಗೆ ಕಂಟಕವೆಂಬಂತೆ ಇತ್ತೀಚೆಗೆ ಜಲಪ್ರಳಯ ಉಂಟಾಗಿ ಕೊಡಗು ಜಿಲ್ಲೆಯು ಅಕ್ಷರಶಃ ನಲುಗಿ ಹೋಗಿತ್ತು. ಆದ್ದರಿಂದ ಜಿಲ್ಲೆಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ವಿಶೇಷ ಗಮನ ಹರಿಸಬೇಕಾಗಿದೆ. ಅಲ್ಲದೆ ಈ ಬಗ್ಗೆ ಈ ಹಿಂದೆಯೂ ಸಹ ಮನವಿ ಸಲ್ಲಿಸಿದ್ದು, ಜಿಲ್ಲೆಯ ಹಿತದೃಷ್ಟಿಯಿಂದ ಪ್ರಮುಖ ಬೇಡಿಕೆಯನ್ನು ಈಡೇರಿಸುವ ಮೂಲಕ ಜಿಲ್ಲೆಯ ಸಂಕಷ್ಟವನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿನ ರಸ್ತೆಗಳು, ಸೇತುವೆಗಳು, ಕೆರೆ ಕಟ್ಟೆಗಳು ಕೊಚ್ಚಿ ಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ ರೂ.172621.50 ಲಕ್ಷಗಳ ವೆಚ್ಚದ ವರದಿಯನ್ನು ಜಿಲ್ಲಾಡಳಿತ ನೀಡಿರುವದರಿಂದ ಕೂಡಲೇ ವಿಶೇಷವಾಗಿ ರಸ್ತೆ, ಸೇತುವೆ, ಕೆರೆ ಕಟ್ಟೆಗಳು ತಡೆಗೋಡೆ ನಿರ್ಮಿಸಲು ವಿಶೇಷ ಅನುದಾನ ರೂ.7454.094 ಲಕ್ಷ ಮಂಜೂರು ಮಾಡುವಂತೆ ಕೋರಿದರು.

ಜಿಲ್ಲೆಯಲ್ಲಿ ಈಗಾಗಲೇ ಭತ್ತ, ಜೋಳ, ಬೆಳೆದ 11448 ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ನಾಶವಾಗಿದ್ದು, ಈ ಬಗ್ಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರಿಗೆ ದೀರ್ಘಾವಧಿಗೆ ಮರು ಸಾಲ ನೀಡುವದು. ಜಿಲ್ಲೆಯಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರೇ ವಾಸಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಅಂದಾಜು 9482.61 ಲಕ್ಷ ವೆಚ್ಚದ ಬೆಳೆ ನಷ್ಟ ಹೊಂದಿರುವದರಿಂದ ತಾವುಗಳು ವಿಶೇಷವಾಗಿ ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ಮೂಲಕ ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಅಂದಾಜು 551.43 ಹೆಕ್ಟೇರ್ ಜಮೀನು ಕೊಚ್ಚಿ ಹೋಗಿದ್ದು, ಇದರಿಂದ ರೈತರು ಆತಂಕ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಈ ರೀತಿ ಜಮೀನು ಕಳೆದುಕೊಂಡ ರೈತರಿಗೆ ಈಗಾಗಲೇ ಸಿ ಮತ್ತು ಡಿ ವರ್ಗದ ಜಮೀನನ್ನು ಸರ್ಕಾರ ವಾಪಸ್ಸು ಪಡೆದಿರುವದರಿಂದ ಇಂತಹ ಜಮೀನನ್ನು ರೈತರಿಗೆ ಹಂಚಿಕೆ ಮಾಡುವಂತಾಗಬೇಕು ಎಂದು ಶಾಸಕರು ಕೋರಿದರು.

ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಲು ಕನಿಷ್ಠ ರೂ.10 ಲಕ್ಷ ಅನುದಾನ ನೀಡುವ ಬಗ್ಗೆ ಇನ್ನು ಕ್ರಮ ವಹಿಸಿರುವದಿಲ್ಲ. ಅಲ್ಲದೆ ಈಗಾಗಲೇ ನಿರ್ಮಿಸುತ್ತಿರುವ ಮನೆಯು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದರಿಂದ ನಿರಾಶ್ರಿತರಿಗೆ ತುಂಬಾ ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ಮನೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡುವದು ಹಾಗೂ ಸ್ವಂತ ಜಾಗದಲ್ಲಿ ಮನೆ ನಿರ್ಮಿಸುವವರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಎಂ.ಪಿ. ಅಪ್ಪಚ್ಚುರಂಜನ್ ಅವರು ಕೋರಿದರು.

ಸಿ ಮತ್ತು ಡಿ ಜಮೀನನ್ನು ಲ್ಯಾಂಡ್ ಬ್ಯಾಂಕಿನಿಂದ ಈಗಾಗಲೇ ರಾಜ್ಯ ಸರ್ಕಾರ ವಾಪಸ್ಸು ಪಡೆದಿರುವದರಿಂದ ಅದನ್ನು ಜಮೀನು ಕಳೆದುಕೊಂಡ ರೈತರಿಗೆ ಹಂಚುವದು ಹಾಗೂ ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಮೀನನ್ನು ಅವರವರ ಹೆಸರಿಗೆ ಮಂಜೂರು ಮಾಡುವದು.

ಜಮೀನು ಕಳೆದುಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ನೀಡಬೇಕು. ಈಗಾಗಲೇ ಕೆಲವು ಕಡೆ ಗುಡ್ಡದ ಮೇಲೆ ಮನೆ ನಿರ್ಮಿಸಿಕೊಂಡಿರುವ ಕಡೆಗಳಲ್ಲಿ ಗುಡ್ಡಗಳು ಬಿರುಕು ಬಿಟ್ಟಿದ್ದು, ಮುಂದೆ ಅಪಾಯವಾಗುವ ಸಂಭವ ಹೆಚ್ಚು. ಈ ಪ್ರದೇಶದಲ್ಲಿ ವಾಸ ಮಾಡಲು ಸೂಕ್ತವಾಗಿರುವದಿಲ್ಲ. ಆದುದರಿಂದ ಇಂತವರಿಗೂ ಸಹ ಹೊಸದಾಗಿ ಮನೆ ನೀಡಬೇಕು.

ಈಗಾಗಲೇ ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿ, ಚಿನ್ನಾಭರಣ, ಆಹಾರ ಧಾನ್ಯವನ್ನೊಳಗೊಂಡಂತೆ ವಸ್ತುಗಳನ್ನು ಕಳೆದುಕೊಂಡವರಿಗೆ ಅವರ ಜೀವನ ನಿರ್ವಹಣೆಗೆ ಪರಿಹಾರ ನೀಡಬೇಕು. ಗುಡ್ಡಗಳು ಕುಸಿದು ಮಣ್ಣುಗಳು ಒಂದೆಡೆ ಸೇರಿದ್ದು, ಕೆಲವು ಕಡೆ ತುಂಬಾ ಇಳಿಜಾರು ಪ್ರದೇಶವಾಗಿರುವದನ್ನು ಸರ್ಕಾರದ ಅನುದಾನದಲ್ಲಿ ಅದನ್ನು ಸಮತಟ್ಟು ಮಾಡಿಸಿ ರೈತರು ಪುನಃ ವ್ಯವಸಾಯ ಮಾಡಲು ಯೋಗ್ಯವಾಗುವಂತೆ ಭೂಮಿಯನ್ನು ಸರ್ಕಾರದ ಅನುದಾನದಲ್ಲಿಯೇ ಹದ ಮಾಡಬೇಕು.

ಕುಸಿತಗೊಂಡು ಭೂ ಸವಕಳಿಗೊಂಡಿರುವ ಭೂಮಿಯನ್ನು ಪರಿಶೀಲನೆ ಮಾಡಿಸಿ ಯಾವ ಯಾವ ಬೆಳೆಯನ್ನು ಈ ಭೂಮಿಯಲ್ಲಿ ಬೆಳೆಯಬಹುದೆಂಬ ಮಾಹಿತಿಯನ್ನು ಒದಗಿಸಿ ಅಂತಹ ಬೆಳೆಗಳನ್ನು ಬೆಳೆಯಲು ಸರ್ಕಾರವು ಪ್ರೋತ್ಸಾಹ ನೀಡಬೇಕು ಹಾಗೂ ಅದಕ್ಕೆ ಅವಶ್ಯವಿರುವ ಗೊಬ್ಬರ, ಕ್ರಿಮಿನಾಶಕಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಭೂ ಕುಸಿತದಿಂದ ಮರಗಳು ಬಿದ್ದಿದ್ದು, ಅಂತಹ ಮರಗಳನ್ನು ಯಾವದೇ ನಿರ್ಭಂದವಿಲ್ಲದೆ ರೈತರೇ ಮಾರಾಟ ಮಾಡಲು, ಇಲ್ಲವೇ ಸ್ವಂತ ಉಪಯೋಗಕ್ಕೆ ಉಪಯೋಗಿಸಿ ಕೊಳ್ಳಲು ಅವಕಾಶ ಕಲ್ಪಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಭೂ ಕುಸಿತದಿಂದ ಮನೆ ದಾಖಲಾತಿಗಳು, ಭೂ ದಾಖಲಾತಿಗಳು, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲಾತಿಗಳು ಮಣ್ಣಿನಲ್ಲಿ ನಾಶವಾಗಿರುವದರಿಂದ, ಸಂಬಂಧಿಸಿದ ಇಲಾಖೆ ಮೂಲಕ ಕೂಡಲೇ ಅಂತಹ ದಾಖಲಾತಿಗಳನ್ನು ಒದಗಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ರೈತರು ಕೃಷಿಗಾಗಿ ಉಪಯೋಗಿಸುವ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಶುಲ್ಕವಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ರೈತರು ಕೇವಲ ಒಂದರಿಂದ ಎರಡು ತಿಂಗಳು ಮಾತ್ರ ಕೃಷಿಗೆ ಪಂಪ್‍ಸೆಟ್ ಉಪಯೋಗಿಸುತ್ತಿದ್ದು, ಇದಕ್ಕೆ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ತಾವುಗಳು ಕೊಡಗು ಜಿಲ್ಲೆಯ ರೈತರು ಉಪಯೋಗಿಸುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಬಿಲ್ ಪಾವತಿಸುವದನ್ನು ರದ್ದುಪಡಿಸಬೇಕು. ಇದರಿಂದ ಕಂಗಾಲಾದ ರೈತರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

ಗ್ರಾಮೀಣ ರಸ್ತೆ ಅಭಿವೃದ್ಧಿಗೆ

ಇತ್ತೀಚಿಗೆ ಉಂಟಾದ ಜಲ ಪ್ರಳಯದ ಸಂದರ್ಭದಲ್ಲಿ ಕೊಡಗಿನ ಗ್ರಾಮೀಣ ರಸ್ತೆಗಳು ತುಂಬಾ ಹಾಳಾಗಿದೆ. ಅಲ್ಲದೆ ರೈತರು ತಮ್ಮ ಕೃಷಿ ಜಮೀನಿಗೆ ಹೋಗಲು ಇನ್ನೂ ಸಹ ಸಂಪರ್ಕ ಕಲ್ಪಿಸಲು ಅವಕಾಶವಾಗಿಲ್ಲ. ಇನ್ನೂ ಎರಡು ಮೂರು ತಿಂಗಳಲ್ಲಿ ಪುನಃ ಮಳೆ ಪ್ರಾರಂಭವಾದಲ್ಲಿ ಮಂಜೂರಾಗಿರುವ ಅನುದಾನಕ್ಕೂ ಸಹ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವದಿಲ್ಲ. ಜಲ ಪ್ರಳಯದಲ್ಲಿ ಬೆಳೆ ನಷ್ಟ ಹೊಂದಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಉಳಿದಿರುವ ಅಲ್ಪಸ್ಪಲ್ಪ ಜಮೀನಿಗೆ ಹೋಗಿ ಕೃಷಿ ಮಾಡಲು ಸಹ ಸಂಪರ್ಕ ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೊಡಗು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದಿಂದ ರೂ.28932 ಲಕ್ಷಗಳ ಅನುದಾನದ ಅವಶ್ಯವಿದ್ದು, ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಶಾಸಕರು ಕೋರಿದ್ದಾರೆ.

ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ರೂ.28932 ಲಕ್ಷಗಳ ವಿಶೇಷ ಅನುದಾನವನ್ನು ಕೊಡಗು ಜಿ.ಪಂ. ಇಂಜಿನಿಯರಿಂಗ್ ವಿಭಾಗಕ್ಕೆ ಮಂಜೂರು ಮಾಡಿಕೊಡಬೇಕಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೋರಿದ್ದಾರೆ.