ಮಡಿಕೇರಿ, ಮಾ. 1: ನಗರದ ಪೊಲೀಸ್ ವಸತಿ ಗೃಹಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಉದ್ಘಾಟನೆಯನ್ನು ಇಂದು ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಸಹಿತ ಕಾಂಗ್ರೆಸ್ಸಿಗರ ಆಕ್ಷೇಪಣೆ ನಡುವೆ, ಶಾಸಕ ಎಂ.ಪಿ. ಅಪ್ಪಚ್ಚರಂಜನ್ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಸ್ಥಗಿತಗೊಳಿಸಿದ ಬೆಳವಣಿಗೆ ಎದುರಾಯಿತು.

ಜಿಲ್ಲಾ ಶಸಸ್ತ್ರ ಪೊಲೀಸ್ ವಸತಿಗೃಹ ಬಳಿ ರೂ. 10 ಲಕ್ಷ ವೆಚ್ಚದಲ್ಲಿ 14ನೇ ಹಣಕಾಸು ಯೋಜನೆಯಡಿ ಕೆಲಸವನ್ನು ಮಾಡಲಾಗಿದೆ. ಹೀಗಾಗಿ ಇಂದು ಬೆಳಿಗ್ಗೆ ಉದ್ಘಾಟನೆ ನೆರವೇರಿಸುವ ಕುರಿತು ಜನಪ್ರತಿನಿಧಿಗಳಿಗೆ ಮೊಬೈಲ್ ಸಂದೇಶ ರವಾನಿಸಲಾಗಿತ್ತು. ಅಂತೆಯೇ ಈ ಬೆಳಿಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ಲಭಿಸಿತ್ತು.

ನಿಗದಿತ ಸಮಯಕ್ಕೆ ಅಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ನಾಮಕರಣ ಸದಸ್ಯರಾದ ಟಿ.ಹೆಚ್. ಉದಯಕುಮಾರ್, ಯತೀಶ್, ವೆಂಕಟೇಶ್ ಹಾಗೂ ಪಕ್ಷದ ಪ್ರಮುಖರು ಜಯಾಯಿಸಿ ಉದ್ಘಾಟನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ದೂರವಾಣಿ ಕರೆ ಮಾಡಿದ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ಎಲ್ಲರಿಗೂ ಸರಿಯಾಗಿ ವಿಷಯ ತಿಳಿಸದ ಕಾರಣ ಇಂದಿನ ಕಾರ್ಯಕ್ರಮ ರದ್ದುಗೊಂಡಿರುವದಾಗಿ ಬಿಜೆಪಿ ಪ್ರಮುಖರು ಸಂದೇಶ ರವಾನಿಸಿರುವ ದಾಗಿ ವಿಷಯ ಮುಟ್ಟಿಸಿದರು.

ಅಸಮಾಧಾನ : ಈ ವೇಳೆ ಸ್ಥಳದಲ್ಲಿ ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ನಂದಕುಮಾರ್, ಶಾಸಕರು ಮಡಿಕೇರಿಗೆ ಅಭಿವೃದ್ಧಿ ಸಂಬಂಧ ಬಿಡಿಕಾಸು ಕಲ್ಪಿಸದೆ, ಚುನಾವಣೆ ಸಮೀಪಿಸುವಾಗ ನಗರಸಭೆ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ಏಕಪಕ್ಷೀಯವಾಗಿ ಉದ್ಘಾಟಿಸಲು ಮುಂದಾಗಿರುವ ಕಾರಣ ಪ್ರತಿಭಟನೆಗೆ ಹೊರಟಿದ್ದಾಗಿ ತಿಳಿಸಿದರು. ಅಲ್ಲದೆ ಇಂತಹ ಚುನಾವಣಾ ರಾಜಕಾರಣಕ್ಕೆ ಕಾಂಗ್ರೆಸ್ ಅವಕಾಶ ನೀಡುವದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಾ, ನಗರಸಭೆ ಅಧ್ಯಕ್ಷರೊಂದಿಗೆ ಆಯುಕ್ತರು ಚರ್ಚಿಸಿ ಉದ್ಘಾಟನಾ ದಿನಾಂಕ ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.

ಶಾಸಕರಿಂದ ಸ್ಪಷ್ಟನೆ : ನಗರಸಭೆ ಆಯುಕ್ತರು ಇಂದು ರಸ್ತೆ ಉದ್ಘಾಟನೆ ಬಗ್ಗೆ ಚರ್ಚಿಸಿದ್ದರಾದರೂ ಕೋರ್ಟ್ ಕೆಲಸ ನಿಮಿತ್ತ ತೆರಳಿರುವ ಮಾಹಿತಿಯಿದೆ. ಹೀಗಾಗಿ ಯಾರಿಗೂ ಸರಿಯಾಗಿ ತಿಳಿಸಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ ಉದ್ಘಾಟನೆ ಕಾರ್ಯಕ್ರಮ ಮುಂದೂಡುವದರೊಂದಿಗೆ, ಮುಂದಿನ ದಿನ ನಿಗದಿಪಡಿಸಿ ಎಲ್ಲರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ. ಇಂದಿನ ಕಾರ್ಯಕ್ರಮ ಸ್ಥಗಿತಗೊಳಿಸಲು ತಿಳಿಸಿರುವೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿದರು. ಅಲ್ಲದೆ ಎಲ್ಲರ ಗಮನಕ್ಕೆ ತಾರದಿರುವದು ಸರಿಯಲ್ಲವೆಂದು ಸ್ಪಷ್ಟನೆ ನೀಡಿದರು.

ವರ್ಗಾವಣೆಗೆ ಆಗ್ರಹ : ನಗರಸಭೆ ಆಯುಕ್ತರು ಬಿಜೆಪಿ ಪರ ವಹಿಸುತ್ತಿದ್ದು, ಅವರನ್ನು ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಪ್ರಮುಖ ಕೆ.ಯು. ಅಬ್ದುಲ್‍ರಜಾಕ್ ಒತ್ತಾಯಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ತೆನ್ನಿರ ಮೈನಾ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.

ಆಯುಕ್ತರ ಪ್ರತಿಕ್ರಿಯೆ: ಇಂದು ಶಾಸಕರ ಸಲಹೆಯಂತೆ ರಸ್ತೆ ಉದ್ಘಾಟನೆಗೆ ತಾವೇ ಖುದ್ದು ನಗರಸಭಾ ಅಧ್ಯಕ್ಷರ ಸಹಿತ ಎಲ್ಲಾ ಸದಸ್ಯರಿಗೆ ದೂರವಾಣಿಯಲ್ಲಿ ತಿಳಿಸಿದ್ದು, ಯಾವದೇ ರಾಜಕೀಯ ಒತ್ತಡಕ್ಕೆ ಒಳಗಾಗಿಲ್ಲವೆಂದು ಆಯುಕ್ತ ರಮೇಶ್ ಪ್ರತಿಕ್ರಿಯೆ ನೀಡಿದರು. ಅಲ್ಲದೆ ನಿನ್ನೆ ಸಂಜೆ ಕೂಡ ಅಧ್ಯಕ್ಷರು ಈ ಸಂಬಂಧ ಮುಕ್ತ ಮಾತನಾಡಿದ್ದು, ಆಕ್ಷೇಪ ವ್ಯಕ್ತಪಡಿಸಿರಲಿಲ್ಲವೆಂದು ಅಭಿಪ್ರಾಯ ನೀಡಿದರು.