ಸೋಮವಾರಪೇಟೆ, ಮಾ. 1: ಇಲ್ಲಿನ ಜೇಸಿ ಸಂಸ್ಥೆ “ಸೆಲ್ಯೂಟ್ ದ ಸೈಲೆಂಟ್ ವರ್ಕರ್” ಎಂಬ ಕಾರ್ಯಕ್ರಮದಡಿಯಲ್ಲಿ ಸೆಸ್ಕಾಂನ ತಲ್ತರೆಶೆಟ್ಟಳ್ಳಿ ವಿಭಾಗದ ಮಾರ್ಗದಾಳು ಎಂ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ತಲ್ತರೆಶೆಟ್ಟಳ್ಳಿಯ ಭೈರವೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಕಳೆದ ವರ್ಷದ ಭೀಕರ ಮಳೆಗೆ ವಿದ್ಯುತ್ ಸಂಪರ್ಕ ದಿನಗಟ್ಟಲೆ ಕಡಿತಗೊಂಡಿದ್ದ ಸಮಯದಲ್ಲಿ ಲೋಕೇಶ್ ಅವರು ಉತ್ತಮ ಸೇವೆ ಸಲ್ಲಿಸಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದ ಹಿನ್ನೆಲೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್, ಎಲೆ ಮರೆಯ ಕಾಯಿಯಂತಿದ್ದು ಉತ್ತಮ ಸಮಾಜ ಸೇವೆ ಮಾಡುವ ಇಂತಹ ಸರಳ ವ್ಯಕ್ತಿಗಳನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಿಂದಾಗಿ ಇಂತಹವರನ್ನು ಸನ್ಮಾನಿಸಿದಾಗ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಅವಕಾಶ ನೀಡಿದಂತಾಗುತ್ತದೆ ಎಂದರು. ತಲ್ತರೆಶೆಟ್ಟಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ಬಿ.ಎಂ. ವಸಂತ್, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಎಸ್.ಆರ್. ವಸಂತ, ಜೇಸಿರೇಟ್ ಅಧ್ಯಕ್ಷ ಸುಮಲತ ಪುರುಷೋತ್ತಮ್, ಕಾರ್ಯದರ್ಶಿ ಜೇಸಿ ಉಷಾರಾಣಿ, ಗುರುಪ್ರಸಾದ್ ಇದ್ದರು.