ಶನಿವಾರಸಂತೆ, ಮಾ. 1: ಭೂಮಾಪಕ ಹೆಚ್.ಕೆ. ಮಹಾದೇವೇಗೌಡ ತಂಡ ಶನಿವಾರಸಂತೆಯಲ್ಲಿ ನಗರ ಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಮಡಿಕೇರಿ ಭೂದಾಖಲೆಗಳ ಉಪನಿರ್ದೇಶಕರು ಟೋಟಲ್ ಸ್ಟೇಷನ್ ಉಪಕರಣದಿಂದ ಅಳತೆ ಕಾರ್ಯ ನಡೆಸಲು ಚಾಲನೆ ನೀಡಿದ್ದಾರೆ.
ಶನಿವಾರಸಂತೆ ನಗರ ಮಾಪನ ಕಾರ್ಯವನ್ನು 2006 ರ ಡಿಸೆಂಬರ್ 28 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಘೋಷಿಸಿದಂತೆ 420-67 ಎಕರೆ ಪ್ರದೇಶಕ್ಕೆ ಒಳಗೊಂಡಂತೆ ಮೈಸೂರಿನ ದಕ್ಷಿಣ ವಲಯ ನಗರಮಾಪನ ಭೂದಾಖಲೆಗಳ ಜಂಟಿ ನಿರ್ದೇಶಕರ ಆದೇಶದಂತೆ ಭೂಮಾಪನೆ ಮಾಡಲಾಗಿದೆ.
ಶನಿವಾರಸಂತೆ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಹಾಗೂ ಪಟ್ಟಣ ಪಂಚಾಯಿತಿ ಮಾಡುವ ಉದ್ದೇಶದಂತೆ ಗ್ರಾಮಸ್ಥರು ಹಾಗೂ ಸರಕಾರಿ ಅಭಿಯೋಜಕ ಚಂದ್ರಮೌಳಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ನಗರ ಮಾಪನಕ್ಕೆ ಹೆಚ್ಚುವರಿಯಾಗಿ 139 ಎಕರೆ ಹಾಗೂ ಈ ಹಿಂದೆ ಬಿಟ್ಟಿರುವ 64 ಎಕರೆ ನಗರ ಮಾಪನಕ್ಕೆ ಸೇರಿಸಲು ಕೋರಿದ್ದರು. ಅದರಂತೆ ಅಳತೆ ಕಾರ್ಯಕ್ಕೆ ಭೂಮಾಪಕರ ಸರ್ವೆ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಮಹಾದೇವೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.