ಮಡಿಕೇರಿ, ಮಾ. 1: ಮಾನವನ ಜೀವನದಲ್ಲಿ ಉತ್ತಮ ಆರೋಗ್ಯಕ್ಕೆ ರಕ್ತ ಅತ್ಯಂತ ಅವಶ್ಯಕ. ಮಾನವನ ಪ್ರತಿಯೊಂದು ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸ ಬೇಕಾದರೆ ರಕ್ತ ಸಂಚಲನ ಆಗಲೇಬೇಕು ಎಂದು ಡಾ. ರವಿ ಕರುಂಬಯ್ಯ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕಾವೇರಿ ಕಾಲೇಜು ಎನ್.ಎಸ್.ಎಸ್. ಘಟಕ, ರೆಡ್ ರಿಬ್ಬನ್ ಕ್ಲಬ್ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ಹೆಚ್.ಐ.ವಿ. ಏಡ್ಸ್ ಜಾಗೃತಿ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಡಾ. ರವಿ ಕರಂಬಯ್ಯ ಮಾತನಾಡಿ, ಉತ್ತಮ ಆರೋಗ್ಯವಿರಬೇಕಾದರೆ ರಕ್ತ ಅವಶ್ಯಕವಾಗಿದ್ದು ಅದರಲ್ಲೂ ಕೆಂಪು ರಕ್ತ ಕಣಗಳು ಹೆಚ್ಚಾಗಿ ಇದ್ದು ಉತ್ತಮ ಆರೋಗ್ಯವನ್ನು ಕಾಪಾಡುತ್ತವೆ. ಮಾನವನಿಗೆ ಸಾಕಷ್ಟು ರಕ್ತದ ಅವಶ್ಯಕತೆ ಇರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ರಕ್ತದ ಕೊರತೆ ಕಂಡುಬರುತ್ತದೆ. ಆದ್ದರಿಂದ ಉತ್ತಮ ಆಹಾರ ಸೇವನೆ ಅತ್ಯಂತ ಅವಶ್ಯಕ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಕೂಪದಿರ ಸುನೀತಾ ಮುತ್ತಣ್ಣ ಮಾತನಾಡಿ, ರಕ್ತ ಶುದ್ದಿ ಇದ್ದರೆ ಏಡ್ಸ್ ರೋಗ ತಡೆಯಲು ಸಾಧ್ಯ.ರಕ್ತ ಶುದ್ಧಿ ಇರಬೇಕಾದರೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿದ್ದು, ಸೂಜಿ ಸಿರೇಂಜ್ ಬಳಸುವಾಗ ಎಚ್ಚರಿಕೆ ವಹಿಸಿದರೆ ಏಡ್ಸ್ ಬರದಂತೆ ತಡೆಯಬಹುದು ಎಂದರು.

ಪ್ರಾಂಶುಪಾಲೆ ಪ್ರೊ. ಎಸ್.ಅರ್. ಉಷಾಲತ ಮಾತನಾಡಿ, ದಾನಗಳಲ್ಲಿ ಶೇಷ್ಟ ದಾನ ರಕ್ತದಾನ ಎಂದರು. ಎನ್.ಎಸ್.ಎಸ್. ಅಧಿಕಾರಿಗಳಾದ ವನಿತ್ ಕುಮಾರ್, ರೀತಾ ಉಪಸ್ಥಿತರಿದ್ದರು.