ಕುಶಾಲನಗರ, ಮಾ. 2: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿರುವದರಿಂದ ಸರಕಾರದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕುಶಾಲನಗರ ಸಮೀಪ ಕೊಪ್ಪ ಮಿನಿಸ್ಟರ್ ಕೋರ್ಟ್ ಹೊಟೇಲ್‍ಗೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಉದ್ಯಮಿ ಹಾಗೂ ಕೊಡಗು ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಎಂ.ಎ.ರಘು ಅವರು ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಲಾಖೆ ಮೂಲಕ ಹಲವು ಯೋಜನೆಗಳನ್ನು ರೂಪಿಸಿರುವದಾಗಿ ತಿಳಿಸಿದರು.ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಸರಕಾರ ಕಂಕಣಬದ್ದವಾಗಿದೆ ಎಂದ ಅವರು, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಟೇಲ್ ಮಾಲೀಕರು, ಉದ್ಯಮಿಗಳು ಮುಂದಾಗಬೇಕು ಎಂದರು.

ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರವಾಸಿ ಉತ್ಸವ ಯಶಸ್ವಿಯಾಗಿ ನಡೆದಿದ್ದು ನಂತರದ ದಿನಗಳಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಂಡಿದೆ ಎಂದರಲ್ಲದೆ ಈ ಸಂಬಂಧ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭ ಕೊಪ್ಪ ಕ್ಷೇತ್ರದ ಜಿಪಂ ಸದಸ್ಯ ರಾಜೇಂದ್ರ, ಹೊಟೇಲ್ ಮಾಲೀಕರಾದ ಎಂ.ಎಚ್. ಅಣ್ಣೇಗೌಡ, ಜೆಡಿಎಸ್ ಪ್ರಮುಖರು ಇದ್ದರು.