ಸೋಮವಾರಪೇಟೆ, ಮಾ. 2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಬೈಕ್ ಜಾಥಾಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ನಂತರ ಪಟ್ಟಣದ 11 ವಾರ್ಡ್‍ಗಳಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ರಂಜನ್ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸುವಂತಾಗ ಬೇಕು ಎಂದರು.ದೇಶದ ರಕ್ಷಣೆ ವಿಷಯದಲ್ಲಿ ಯಾವ ಮುಲಾಜಿಗೂ ಒಳಗಾಗದೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದ ಶಾಸಕರು, ಮುಂದಿನ ಲೋಕಸಭಾ ಚುನಾವಣೆ ಯಲ್ಲೂ ಮೋದಿ ನೇತೃತ್ವದ ಬಿಜೆಪಿ ಸಕಾರ ಸ್ಪಷ್ಟ ಬಹುಮತದ ಮೂಲಕ ಅಧಿಕಾರಿಕ್ಕೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಯುವ ಮೋರ್ಚಾ ಅಧ್ಯಕ್ಷ ಗೌಡಳ್ಳಿ ಸುನಿಲ್, ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಪ್ರಮುಖರಾದ ಎಸ್.ಬಿ. ಭರತ್‍ಕುಮಾರ್, ಪ. ಪಂ. ಸದಸ್ಯ ಮಹೇಶ್, ಪ್ರಮುಖರಾದ ಕೊಮಾರಿ ಸತೀಶ್, ಪಿ. ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.