ಮಡಿಕೇರಿ, ಮಾ.2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ, ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷವಾಕ್ಯ ದೊಂದಿಗೆ, ಇಂದು ಮಡಿಕೇರಿ ತಾಲೂಕಿನ ಪ್ರಮುಖ ಪಟ್ಟಣದಲ್ಲಿ ಜನಜಾಗೃತಿ ಜಾಥಾ ನಡೆಯಿತು. ನಗರದ ಬನ್ನಿ ಮಂಟಪದಿಂದ ನಿಗಧಿಯಾಗಿದ್ದ ಜಾಥಾಕ್ಕೆ ಪೊಲೀಸರ ಆಕ್ಷೇಪಣೆ ನಡುವೆ ಒಂದು ತಾಸು ಬಳಿಕ ಪ್ರಮುಖರ ಮಧ್ಯ ಪ್ರವೇಶದೊಂದಿಗೆ ಇಂದಿರಾ ಗಾಂಧಿ ವೃತ್ತದಿಂದ ಚಾಲನೆಗೊಂಡಿತು.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಜಾಥಾಕ್ಕೆ ಚಾಲನೆ ನೀಡಿದರು. ಸೂಕ್ಷ್ಮ ಪರಿಸ್ಥಿತಿ ನಡುವೆ ಬನ್ನೀ ಮಂಟಪ ದಿಂದ ಜಾಥಾವನ್ನು ಮೊಟಕುಗೊಳಿಸಿ ಇಂದಿರಾಗಾಂದಿ ವೃತ್ತದಿಂದ ಮುಂದುವರೆಸಲು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನೀಡಿದ ಸಲಹೆ ಮೇರೆಗೆ ಕಾರ್ಯಕರ್ತರು ಸ್ಪಂದಿಸಿ ನಾಯಕರ ಅಣತಿಯಂತೆ ಮುಂದುವರೆದರು. ಮುಂದುವರೆದ ಜಾಥಾ ಖಾಸಗಿ ಬಸ್ ನಿಲ್ದಾಣ, ಮೂರ್ನಾಡು, ನಾಪೋಕ್ಲು, ಚೇರಂಬಾಣೆ, ಬೆಟ್ಟಗೇರಿ ಮುಂತಾದೆಡೆಗಳಲ್ಲಿ ಸಂಚರಿಸಿ ನಗರಕ್ಕೆ ಹಿಂತಿರುಗುವದರೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ಸಮಾರೋಪ ಗೊಂಡಿತು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಪ್ರಮುಖರಾದ ಬಿ.ಕೆ. ಅರುಣ್‍ಕುಮಾರ್, ಜಗದೀಶ್, ಎ.ಪಿ. ಧನಂಜಯ್, ಬಿ.ಎಂ.ರಾಜೇಶ್ ಅನಿತಾಪೂವಯ್ಯ, ಡೀನ್ ಬೋಪಣ್ಣ ಸೇರಿದಂತೆ ಯುವ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.