ರಾಜಕೀಯ ಭಾರತದ ಸಮಗ್ರ ಜನತೆಯ ಬೇಕು-ಬೇಡಿಕೆಗಳನ್ನು ಅರ್ಥೈಸಿಕೊಂಡು ದುಡಿಯಬೇಕಾದ ಸಾಮಾಜಿಕ ಕ್ಷೇತ್ರ. ಇಂದು ರಾಜಕೀಯ ಮನುಷ್ಯನ ಜೀವನದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಬಂಧ, ಸಮಾಜ, ಸಹಕಾರ, ಉಪಕಾರಗಳು. ಈ ವ್ಯವಸ್ಥೆಯಲ್ಲಿ ಅನಿವಾರ್ಯ. ವ್ಯಕ್ತಿ ಮತ್ತು ವ್ಯವಸ್ಥೆಗಳ ಅನೇಕಾನೇಕ ಸಮಸ್ಯೆಗಳು ಉದ್ಭವಿಸುತ್ತದೆ.

ಶತಶತಮಾನಗಳ ಕಾಲಗರ್ಭದಲ್ಲಿ ಭೂಮಂಡಲದ ಯಾವುದೇ ಪ್ರಾಂತ್ಯದಲ್ಲಿ ಅನುಭವಿಸಿದ ಬರ್ಬರ ಸ್ಥಿತಿಗತಿಗಳು ಸಮಾಜದ ಸಮಸ್ಯೆಗಳಿಗೆ ಪ್ರಕೃತಿ ಕೂಡ ಸವಾಲುಗಳಿಗೆ ಉತ್ತರಗಳನ್ನು ನೀಡುತ್ತಾ ಬಂದಂತೆ ತನ್ನದೇ ಆದ ಜೀವನ ವಿಧಾನ ಕೃತಿ ಅರ್ಥಾತ್ ಸುಸ್ಥಿತಿಯನ್ನು ರೂಪಿಸಿ ತನ್ನ ಜೀವನಕ್ಕೆ ಒಂದು ನಿರ್ದಿಷ್ಟ ರೂಪ ನೀಡುತ್ತ ಮನುಷ್ಯನು ಸಮಾಜ ಜೀವನದಲ್ಲಿ ಒಂದು ಘಟ್ಟವನ್ನು ತಲಪಿದ ಮೇಲೆ ಬದುಕಿನ ಉದ್ದೇಶ ಅರಿಯುತ್ತ ಬಂದು ಆದರ್ಶಗಳನ್ನು ನೀತಿ ನಿಯಮಗಳನ್ನು ಅರೋಗ್ಯಕರವಾದ ಕಟ್ಟುಪಾಡುಗಳನ್ನು ರೂಪಿಸಿಕೊಂಡು ಅದರ ಜಾಡಿನಲ್ಲಿ ಮುಂದುವರಿಯುತ್ತ ಬಂದರೂ ತನ್ನ ಸ್ವಾರ್ಥದ ಮನೋಭಾವ ಹೆಚ್ಚಾದಂತೆ ಸಮಾನತೆಯ ಭಾವನೆ ಕೇವಲ ಬಾಯಿ ಮಾತಲ್ಲಿ ಉಳಿಯುವದು ಮನುಕುಲದ ದುರಂತ.

ರಾಜ ಮಹಾರಾಜರ ಆಡಳಿತವಿರಲಿ, ನಿರಂಕುಶ ಆಡಳಿತವಿರಲಿ, ಮಿಲಿಟರಿ ಆಡಳಿತವಿರಲಿ, ಪರಕೀಯದವರಾಗಿರಲಿ, ರಾಜಕೀಯ ವ್ಯವಸ್ಥೆ ಪರಿಸ್ಥಿತಿಗನುಗುಣವಾಗಿ ಸಮಾಜ ಸುಸ್ಥಿರಗೊಳ್ಳಲು ಅದಕ್ಕೆ ಪೂರಕವಾಗಿ ಅದನ್ನು ನಡೆಸಿಕೊಂಡು ಹೋಗಬಲ್ಲ ಸಮರ್ಥ ನಾಯಕನ ಅಗತ್ಯವಿತ್ತು. ಅಂತಹ ಪರಿಸ್ಥಿತಿ ಉದ್ಭವಿಸಿದಾಗ ಅಥವಾ ಕಂಡುಬಂದಾಗ ಬಲವಿದ್ದವನು ಬಲಾಢ್ಯನಾಗಿ ತೋಳ್ಬಲದಿಂದ, ಹಣಬಲ, ಪ್ರತಿಷ್ಠೆಯ ಬಲದಿಂದ ಗುಂಪುಗಳಿಗೆ ಒಡೆಯನಾಗಿ ನಂತರ ಹಂತಹಂತವಾಗಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಒಂದು ಸರಹದ್ದಿನ ಪ್ರಾಂತ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆದು ಬಂದಾಗ ಅವನಲ್ಲಿ ಅಧಿಕಾರದ ವ್ಯಾಮೋಹದ ರುಚಿಯಿಂದಾಗಿ ತನ್ನ ಸ್ವಾರ್ಥಕ್ಕೋಸ್ಕರ ತನ್ನ ಪಾಲಿನ ಅಧಿಕಾರಕ್ಕಾಗಿಯಾದರೂ ಸಮಾಜದಲ್ಲಿ ತನ್ನ ಮುಂದುವರಿಕೆಯಾಗಿ ತನ್ನ ಪಾಲಿನ ಅಧಿಕಾರ ಭದ್ರತೆಗಾಗಿ ತನ್ನ ತೋಳ್ಬಲ ಶಕ್ತಿ (ಗೂಂಡಾಗಿರಿ, ಹಣ, ಜಾತಿ) ಧರ್ಮವನ್ನಾಶ್ರಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಪರಣಾಮವೇ ‘ರಾಜವಂಶಗಳ’ ಉದಯವಾಗಲು ಸಹಾಯವಾಯಿತು. ‘ರಾಜಾಃ ಪ್ರತ್ಯಕ್ಷ ದೇವತಾಃ’ ಎಂಬ ಬಲದಿಂದ ರಾಜ ವ್ಯವಸ್ಥೆ ತನ್ನದೇ ಆದ ರೂಪವನ್ನು ತಳೆಯಿತು.

ಮಹಾರಾಜರಾದವರು ರಾಜಾಧಿರಾಜರಾದರು. ಪ್ರಬಲರಾಗಿದ್ದವರು ಚಕ್ರವರ್ತಿಗಳಾದರು. ಅವರೇ ತಮಗೆ ತಾವೇ ಹೊಗಳುಭಟರಿಂದ ಬಿರುದುಗಳನ್ನು ಧರಿಸಿಕೊಂಡರು. ಇವರ ಅಧಿಕಾರದ ಅಮಲಿನ ಕಣ್ಣಿನಿಂದ ಬಹಳಷ್ಟು ಮಂದಿ ನಿರಂಕುಶ ಆಡಳಿತ ನಡೆಸಿದರು. ಇತಿಹಾಸದಲ್ಲಿ ‘ತುಘಲಕ್ ದೊರೆಯ ಆಡಳಿತ’ ಎಂದು ಇಂದಿಗೂ ಆಡು ಭಾಷೆಯಿದೆ. ಅದೇ ರೀತಿ ಅನೇಕ ರಾಜರ ಆಡಳಿತಗಳು ಇಂದಿನ ರಾಜಕೀಯ ವ್ಯವಸ್ಥೆಗೆ ಮಾದರಿ ಯಾಗಿದೆ. ಹಿಂದಿನ ರಾಜರ ನಿರಂಕುಶ ಆಡಳಿತದಲ್ಲಿ ಬುದ್ಧಿವಂತರ, ಶ್ರೀಮಂತರ, ಪುರೋಹಿತ ವರ್ಗದವರ ಬೆಂಬಲವಿರುತ್ತಿತ್ತು. ಸಾಮಾನ್ಯ ಪ್ರಜೆ ಸಾಮಾನ್ಯನಾಗಿ ಉಳಿದ. ಅವನು ಸಾಮಾನ್ಯನಾಗಿ ಉಳಿಯಲು ಮುಖ್ಯವಾಗಿ ಅನಕ್ಷರತೆ, ಅಜ್ಞಾನ, ಭಯಭಕ್ತಿ, ಮೂಢನಂಬಿಕೆ ಕಾರಣವಾಗಿತ್ತು. ಅವನ ಅನಕ್ಷರತೆಯಿಂದಾಗಿ ಆಡಳಿತ ವಿಷಯ ತಿಳಿಯುತ್ತಿರಲಿಲ್ಲ. ತಿಳಿದುಕೊಳ್ಳುವಷ್ಟರ ಮಟ್ಟಿಗೆ ಪ್ರಬುದ್ಧತೆ, ಕುತೂಹಲ ಬೆಳೆಸಿಕೊಂಡಿರಲಿಲ್ಲ. ಅಜ್ಞಾನದ ಕಾರಣ ಅವನು ಮುಂದುವರೆಯುತ್ತಿರಲಿಲ್ಲ. ರಾಜನ ಮೇಲಿನ ಭಯದಿಂದಲೂ, ಮೂಢನಂಬಿಕೆಯಿಂದಲೂ ಅಥವಾ ತನ್ನ ಜೀವನದ ಮೇಲಿನ ಆಸೆಯಿಂದ ಆಡಳಿತದ ವಿರುದ್ಧ ಧ್ವನಿಯೆತ್ತುತ್ತಿರಲಿಲ್ಲ.

ಗುಲಾಮಗಿರಿ : ಪರಕೀಯರ ಆಕ್ರಮಣಗಳಿಂದ ನಮ್ಮ ರಾಜರುಗಳ ಕಚ್ಚಾಟದಿಂದ ಪರಕೀಯರ ಒಡೆದು ಆಳುವ ನೀತಿಗೆ ದೇಶ ಬಲಿಯಾಯಿತು. ನಂತರ ಅವರ ದಬ್ಬಾಳಿಕೆ ನೀತಿಗೆ, ಆಡಳಿತಕ್ಕೆ ಭಾರತ ದೇಶ ಬಲಿಯಾಯಿತು. ಶೋಷಿತ ವ್ಯವಸ್ಥೆಯ ಕಪಿ ಮುಷ್ಟಿಗೆ ಸಿಲುಕಿ ಓಡಾಡಬೇಕಾಯಿತು. ನಮ್ಮವರಿಗೆ ಪರಕೀಯರ ಆಡಳಿತದಲ್ಲಿ ಯಾವುದೇ ಪಾತ್ರವಿರದಂತಾಯಿತು. ರಾಜಕೀಯವಾಗಿ ನಾವು ಗುಲಾಮರಾಗಬೇಕಾಯಿತು. ಪರಕೀಯರ ಆಡಳಿತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಗುಮಾಸ್ತಗಿರಿ ಅಥವಾ ಗುಲಾಮಗಿರಿ ಸಿಗುತ್ತಿತ್ತು. ಈ ರೀತಿಯ ಬದುಕಿಗೆ ತೆರೆ ಬೀಳಲು ಅನೇಕ ವರ್ಷಗಳೇ ಬೇಕಾಯಿತು. ಪರಕೀಯರ ಆಡಳಿತದಲ್ಲಿ ಬುದ್ಧಿವಂತ ಅವಕಾಶವಾದಿಗಳು ಮಾತ್ರ ತಮ್ಮ ಅಭಿವೃದ್ಧಿ ಕಂಡುಕೊಂಡರು. ಸಾವಿರಾರು ನಾಯಕರ ಹೋರಾಟ, ಲಕ್ಷಾಂತರ ಜನರ ಪ್ರಾಣತ್ಯಾಗ ದೀರ್ಘವಾದ ಜೈಲುವಾಸ, ಉಪವಾಸ ಸತ್ಯಾಗ್ರಹ, ಯಾತ್ರೆಗಳು, ಕ್ರಾಂತಿಗಳು ಮುಂತಾದ ಧೀರ್ಘವಾದ ಹೋರಾಟದ ಫಲವಾಗಿ ಪರಕೀಯರು ತಮ್ಮ ಹೆಜ್ಜೆಯನ್ನು ಹಿಂತೆಗೆಯಲು ತೀರ್ಮಾನಿಸಿದ ನಂತರವೇ ದೇಶ ಸ್ವತಂತ್ರವಾಯಿತು. ಸ್ವಾತಂತ್ರ್ಯಾನಂತರ ಭಾರತ ರಾಜಕೀಯ ವ್ಯವಸ್ಥೆಯಲ್ಲಿ ನವ ಯುಗವೊಂದು ಆರಂಭವಾಯಿತು. ಅದೇ ರಾಜ್ಯ ವ್ಯವಸ್ಥೆ, ನಿರಂಕುಶ ಆಡಳಿತ, ಪರಕೀಯರ ದಬ್ಬಾಳಿಕೆಯ ಆಡಳಿತಕ್ಕೆ ಅಂತ್ಯ ಹಾಡಿ ಪ್ರಜಾಪ್ರಭುತ್ವ ಆಡಳಿತದ ಆರಂಭವಾಯಿತು. ನಮ್ಮದಾಯಿತು. ಬ್ರಿಟಿಷರ ಆಡಳಿತದಿಂದಾಗಿ ಭಾರತದಲ್ಲಿ ಅಲ್ಲಲ್ಲಿ ಹರಿದು ಆಳುತ್ತಿದ್ದ ರಾಜವಂಶ ನಿರ್ಮೂಲನೆಯಾಗಿ ಒಗ್ಗಟ್ಟಿನ ಭಾರತದ ಸಂವಿಧಾನದ ರಚನೆಗೆ ಪೂರಕವಾಯಿತು. ಬ್ರಿಟಿಷರು ಬರದಿದ್ದರೆ ಇಂದಿಗೂ ಭಾರತ ಹರಿದು ಹಂಚಿದ ಸಂಸ್ಥಾನಗಳಾಗಿ ಉಳಿದು ರಾಜರ ಆಡಳಿತದಲ್ಲಿ ಇರುತ್ತಿತ್ತೇನೋ?

ಪ್ರಜಾಪ್ರಭುತ್ವದ ಆರಂಭದಿಂದ ನಮ್ಮ ರಾಜಕೀಯ ವ್ಯವಸ್ಥೆ ಹೊಸ ತಿರುವು ಪಡೆಯಿತು. ರಾಜಕೀಯದಲ್ಲಿ ಸಮರ್ಥ ನಾಯಕನ ಅವಶ್ಯಕತೆಗಳು ಕಂಡುಬಂದವು. ನಾಯಕರ ಆಯ್ಕೆ ಪ್ರಕ್ರಿಯೆ ಬಿರುಸಾದಂತೆ ರಾಜಕೀಯದಲ್ಲಿ ಗುಂಪುಗಳಾದವು. ಅದೇ ಗುಂಪುಗಳು ಪಕ್ಷಗಳಾಗಿ ಮಾರ್ಪಾಡಾದವು. ಪಕ್ಷಗಳಲ್ಲಿ ಅಧಿಕಾರದ ಆಸೆ ಹೆಚ್ಚಾದಂತೆ ಒಡೆದು ಹೊಸ ಹೊಸ ಪಕ್ಷಗಳಾದವು. ಸಿದ್ಧಾಂತದಲ್ಲಿ ಪಕ್ಷವು ಹುಟ್ಟಲಿಲ್ಲ. ನಾಯಕರಿಗಾಗಿ ಪಕ್ಷಗಳು ಹುಟ್ಟತೊಡಗಿತು. ಅದರ ಪರಿಣಾಮವೇ ಚುನಾವಣೆ ಎಂಬ ಕಾರ್ಯ ಆರಂಭವಾಯಿತು.

ಇಂದಿನ ಸ್ವಾರ್ಥತೆ : ಇಂದಿನ ಭಾರತದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಕ್ಕೊಬ್ಬ ಮುಖಂಡನಿಲ್ಲ, ಮುಖಂಡನಿಗೊಂದು ಪಕ್ಷವಿದೆ. ಇದರ ಪರಿಣಾಮವೇ ಅನ್ಯಾಯದ ಸ್ವಾರ್ಥದ ಆಡಳಿತ ಹೆಚ್ಚಾಗತೊಡಗಿತು. ಪ್ರಜಾಪ್ರಭುತ್ವದಲ್ಲಿನ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಶ್ರೀಸಾಮಾನ್ಯನಿಗೆ ರಾಜಕೀಯದಲ್ಲಿ ಪ್ರವೇಶಿಸಲಾಯಿತು. ದಿನನಿತ್ಯದ ರಾಜಕೀಯ ಆಗು-ಹೋಗುಗಳನ್ನು ಅರಿತುಕೊಳ್ಳಲು ಸಹಾಯವಾಯಿತು. ಚುನಾವಣೆಯಲ್ಲಿ ಶ್ರೀಸಾಮಾನ್ಯನಿಗೆ ಚುನಾವಣಾ ಪ್ರಣಾಳಿಕೆ ಹೊರ ಬಂದವು. ಭರವಸೆಗಳ ಮಹಾಪೂರ ಹರಿದುಬಂತು. ಆದರೆ, ಶ್ರೀಸಾಮಾನ್ಯ ರಾಜಕೀಯ ಪ್ರವೇಶಿಸಿದ್ದರೂ, ಜಾತಿ ಬಲವಿದ್ದವನು, ಹಣ ಬಲವಿದ್ದವನು ಅನ್ಯಾಯದ ಹಾದಿಯನ್ನು ತುಳಿದವನು ತನ್ನ ನಾಯಕನ ಬಾಲ ಹಿಡಿದವನು ತನ್ನ ಸುತ್ತಮುತ್ತಲಿನ ಜನರನ್ನು ತನ್ನೆಡೆಗೆ ಸೆಳೆದುಕೊಂಡು ಅಧಿಕಾರ ಚಲಾಯಿಸಿದವನು ನಾಯಕನಾದನು. ರಾಜರುಗಳ ಕಾಲದಲ್ಲಿ ಕೂಡ ಇದೇ ರೀತಿ ಪರಿಸ್ಥಿತಿ ಇತ್ತು. ಆದರೆ, ಇಲ್ಲಿ ಚುನಾವಣೆಗಳು ಇವರ ಅಧಿಕಾರ ಗದ್ದುಗೆ ಏರಲು ಮೆಟ್ಟಿಲುಗಳಾದವು. ತಮಗೆ ಬೇಕಾದಂತಹ ತಮ್ಮ ಪರಿಸ್ಥಿತಿಗೆ ತಕ್ಕಂತೆ ಸರಿಯಾದಂತೆ ನಿರ್ವಹಿಸಿಕೊಳ್ಳಲು ಮೆಟ್ಟಿಲುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿಕೊಳ್ಳುತ್ತಿದ್ದರು. ಇದಕ್ಕೆ ಅನಕ್ಷರಸ್ಥರು, ಮೂಢನಂಬಿಕೆಯ ಜನರು ಬಲಿಯಾಗತೊಡಗಿದರು.

ಇದಕ್ಕಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿಕೊಳ್ಳಬಹುದಾದಂತೆ, ಕಾನೂನುಗಳು, ವ್ಯವಸ್ಥೆಗಳನ್ನು ತಮ್ಮ ಸ್ವಾರ್ಥ ಸಾಧನೆಗೋಸ್ಕರ ಜಾರಿಗೆ ತಂದರು. ಇದಕ್ಕೆ ಅನುಕೂಲವಾದಂತಹ ಸ್ವಜನ ಪ್ರೇಮ, ಜಾತಿ, ಹೆಂಡ, ಹಣ ಇತ್ಯಾದಿಗಳು ಸಹಾಯಕವಾದವು. ಗುಂಪುಗಾರಿಕೆ ಉಂಟು ಮಾಡಿ ತಮ್ಮ ಸ್ವಾರ್ಥಕ್ಕೋಸ್ಕರ ಅಧಿಕಾರವೆಂಬ ಗದ್ದುಗೆಯ ಮೋಹಕ್ಕೆ ಬಲಿಯಾಗಿ ಇನ್ನೊಬ್ಬರಲ್ಲಿ ಜಾತಿಯತೆಯ ವಿಷದ ಬೀಜ ಬಿತ್ತಿ, ಅವರುಗಳ ಕಚ್ಚಾಟದಲ್ಲಿ ತಾವು ಸಹಮತ ಪಡೆದು ನಾಯಕರಾಗುತ್ತಾರೆ. ಇಂದಿನ ರಾಜಕೀಯದಲ್ಲಿ ಯಾವ ಕೋಮಿನವರು ಪ್ರಾಬಲ್ಯ ಪಡೆಯುತ್ತಾರೋ, ಅವರೇ ಅಧಿಕಾರ ಚಲಾಯಿಸುತ್ತಾರೆ. ಜಾತಿ ಬಲ, ಹಣ ಬಲ, ತೋಳ್ಬಲ ಇಂದಿನ ರಾಜಕೀಯದ ಅಧಿಕಾರಕ್ಕೆ ಮೂಲ ಸೂತ್ರವಾಗಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಹಿಂದಿನ ಅಗ್ರಗಣ್ಯ ನಾಯಕರಾದ ಅಬ್ರಹಾಂ ಲಿಂಕನ್ ಹೇಳಿದ ಈ ಕೆಳಗಿನ ಮಾತುಗಳ ಉಲ್ಲೇಖವಿದೆ.

‘ಃಥಿ ಣhe ಠಿeoಠಿಟe ಎಂಬುದು ಃuಥಿ ಣhe ಠಿeoಠಿಟe ಆಯಿತು. oಜಿ ಣhe ಠಿeoಠಿಟe ಎಂಬುದು ಔಜಿಜಿ ಣhe ಠಿeoಠಿಟe ಆಯಿತು. ಈoಡಿ ಣhe ಠಿeoಠಿಟe ಎಂಬುದು ಈಚಿಡಿ ಣhe ಠಿeoಠಿಟe ಆಯಿತು.

ಕೆಲವರಿಗಾಗಿ ಕೆಲವರು ಪ್ರಭುಗಳಾದರು, ಕೆಲವರಿಂದ ಕೆಲವರು ಪ್ರಭುಗಳಾದರು, ಕೆಲವರಿಗೋಸ್ಕರ ಕೆಲವರು ಪ್ರಭುಗಳಾದರು.

ಹೀಗೇಕಾಯಿತು ಎಂದರೆ ಇಂದಿನ ರಾಜಕೀಯದಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವವರು, ಹಣದಾಸೆಗೆ ಬಲಿಯಾಗಿ ಪಕ್ಷನಿಷ್ಠೆ ಬದಲಿಸುವುದು, ಅಧಿಕಾರಕ್ಕಾಗಿ ಸಿದ್ಧಾಂತ ಬಿಟ್ಟು ಮುಖಂಡರುಗಳ ಗುಲಾಮರಾಗುವುದು, ತಮ್ಮ ಮತದ ಮೌಲ್ಯವನ್ನು ಅರಿಯದೆ ಮೂರ್ಖರಾಗುತ್ತಿರುವದರಿಂದ ನಮ್ಮಲ್ಲಿ ರಾಜಕೀಯ ಪರಿಸ್ಥಿತಿ ಮೇಲಿನ ವಾಕ್ಯದಂತೆ ಬಿಗಡಾಯಿಸಿದೆ. ಶ್ರೀಸಾಮಾನ್ಯ ಇಂತಹ ಪರಿಸ್ಥಿತಿಯನ್ನು ಅರಿತು ಸಿಡಿದೆದ್ದೇಳುವ ಕಾಲ ಬಂದಿತು. ಆದರೆ, ರಾಜಕೀಯ ಮುಖಂಡರುಗಳು ಪೂರ್ತಿ ಎಚ್ಚರಗೊಳ್ಳಲು ಶ್ರೀಸಾಮಾನ್ಯನಿಗೆ ಅವಕಾಶ ನೀಡಲೇ ಇಲ್ಲ. ಎಚ್ಚರಗೊಂಡ ಜನರನ್ನು ಮಲಗಿಸುವ ತಂತ್ರ ಅ ಜನರಿಗೆ ತಿಳಿದಿತ್ತು. ಅದನ್ನು ಶ್ರೀಸಾಮಾನ್ಯರ ಮೇಲೆ ಪ್ರಯೋಗಿಸಿ ಅವರನ್ನು ಪುನಃ ಪೂರ್ತಿ ಮಲಗಿಸಿಬಿಡುತ್ತಿದ್ದರು.

ನಾವೇ ಕಾರಣರು : ಕೆಲವರು ಎಚ್ಚರವಾಗಿ ಹೋರಾಟ ಮಾಡಿದರು. ಆದರೆ, ಪ್ರಯೋಜನವೇನೂ ಆಗಲಿಲ್ಲ. ಬರಡು ಭೂಮಿಗೆ ಮಳೆ ಹನಿ ಬಿದ್ದಂತೆ ಅವರ ಪ್ರಯತ್ನ ವ್ಯರ್ಥವಾಯಿತು. ರಾಜಕೀಯ ಮುಖಂಡರುಗಳಿಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯೇ ಪ್ರಮುಖ ಅಸ್ತ್ರವಾಯಿತು. ಪ್ರಣಾಳಿಕೆಯನ್ನು ಸೃಷ್ಟಿ ಮಾಡುತ್ತ, ಆಶ್ವಾಸನೆಗಳನ್ನು ನೀಡುತ್ತ ಪೊಳ್ಳು ಭರವಸೆಗಳನ್ನು ನೀಡುತ್ತ ಇನ್ನಿತರ ಅಸ್ತ್ರಗಳನ್ನು ಪ್ರಯೋಗಿಸಿ, ಆಸೆ ಆಮಿಷಗಳನ್ನು ಒಡ್ಡಿ, ಮಾಡದೆ ಇರುವ ಸಾಧನೆಯನ್ನು ಮಾಡಿದವರಂತೆ ವರ್ತಿಸುತ್ತ ಶ್ರೀಸಾಮಾನ್ಯನ ‘ಮತ’ವನ್ನು ಕಿತ್ತು ಅಧಿಕಾರಕ್ಕೆ ಬಂದರು. ಮುಂದಿನ ಚುನಾವಣೆವರೆಗೆ ಕೇಳುವವರೇ ಇಲ್ಲದಿರುವಂತೆ ನಾವಿರಬೇಕು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಆಡಳಿತದಲ್ಲೂ ಅಧಿಕಾರಿಗಳಿಗಾಗಿ ನಾವು ಬಾಗಿಲ ಹೊರಗೆ ಕಾಯಬೇಕು. ಚುನಾಯಿತ ಪ್ರತಿನಿಧಿಗಳನ್ನು ಕಾಣಬೇಕಾದರೂ ಕಾಯಬೇಕು. ಇಂತಹ ಪರಿಸ್ಥಿತಿಗೆ ಕಾರಣರ್ಯಾರು ? ಈ ವಿದ್ಯಮಾನ ಬೆಳೆಯಲು ಪ್ರೋತ್ಸಾಹಿಸಿದವ ರ್ಯಾರು ? ಇದನ್ನು ಸರಿಪಡಿಸದ ಮಟ್ಟಿಗೆ ಬೆಳೆಯಲು ಕಾರಣರ್ಯಾರು? ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ ‘ನಾವೇ’ ನಾವೇ ಅಂದರೆ ಶ್ರೀಸಾಮಾನ್ಯ’. ಅಂದರೆ, ಮೂರ್ಖ ಪ್ರಜೆಗಳಾದ ನಮ್ಮ ಸ್ವಾರ್ಥಕ್ಕೋಸ್ಕರ ನಾವು ಇನ್ನೊಬ್ಬರನ್ನು ಆ ಬಲೆಯೊಳಗೆ ಎಳೆದು ಹಾಕುತ್ತೇವೆ, ನೂಕುತ್ತೇವೆ, ಹೊರಗಡೆ ಅವರನ್ನು ನೋಡಿ ನಗುತ್ತ ಸುಖಪಡುತ್ತೇವೆ. ಕೇರಿಗೆ ನುಗ್ಗಿದ ನೀರು ಹಟ್ಟಿಗೆ ನುಗ್ಗದೇ ಬಿಡುತ್ತದೆಯೇ. ಅದೇ ಈ ವ್ಯವಸ್ಥೆ ಎಲ್ಲರನ್ನೂ ನುಂಗಿ ನಮ್ಮನ್ನು ನುಂಗಿ ಬಿಡುತ್ತದೆ ಎಂಬುದನ್ನು ಶ್ರೀಸಾಮಾನ್ಯರಾದ ನಾವು ಮತ್ತು ನಮ್ಮಂತೆ ಇದ್ದು ಮುಖಂಡರಾದ ರಾಜಕಾರಣಿಗಳು ಅರಿಯಬೇಕು. ಇಂತಹ ಪರಿಸ್ಥಿತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬ ನಾಗರಿಕರು ಪ್ರಯತ್ನಿಸಬೇಕು. ಇದಕ್ಕೆ ಜಾಗೃತ ಪ್ರಜ್ಞೆ ಮೂಡಬೇಕು. ಪಕ್ಷ, ವ್ಯಕ್ತಿಗಳ ರಾಜಕೀಯ ಆಂತರ್ಯಗಳನ್ನು ಕೆದಕಿ ನೋಡಬೇಕು. ಸಾಮಾನ್ಯನು ತನ್ನ ಸಂಸಾರ ಎಂಬ ಸ್ವಾರ್ಥದ ಚಿಪ್ಪಿನೊಳಗಿನಿಂದ ಹೊರ ಬಂದು ದಿನನಿತ್ಯದ ರಾಜಕೀಯ ಸ್ಥಿತಿ-ಗತಿಗಳನ್ನು ಅರಿತುಕೊಳ್ಳಬೇಕು. ಸಾಮಾನ್ಯರಲ್ಲಿ ಕಾನೂನು ಜ್ಞಾನ ಅಧಿಕವಾಗಿ (ತೀವ್ರಗತಿಯಲ್ಲಿ) ನಾಗರಿಕ ಪ್ರಜ್ಞೆ ಮೂಡಬೇಕು. ಆ ರೀತಿ ಮಾಡಿದರೆ ನಮ್ಮೊಳಗೆ ಜಾಗೃತಿ ಮೂಡುತ್ತದೆ. ಇದರಿಂದ ಪ್ರತಿಭಟನೆಯ ಮನೋಭಾವ ರೂಢಿಸಿಕೊಂಡರೆ ಅಧಿಕಾರ ಹೊಂದಿದಾತ ಸ್ವಲ್ಪ ಯೋಚನೆ ಮಾಡಿ ಮುಂದಡಿಯಿಡುತ್ತಾನೆ.

ಮೃತ್ಯು ಕೂಪದ ಸಂಕೇತ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಮತದಾನ’ದ ಬಗ್ಗೆ ಒಬ್ಬ ವ್ಯಕ್ತಿಗೆ ಮುಂದಾಲೋಚನೆ ಅತ್ಯವಶ್ಯಕ. ಇದು ಪ್ರಜಾಪ್ರಭುತ್ವದಲ್ಲಿ ಮಹತ್ತರ ಪಾತ್ರ ವಹಿಸುವ ಒಂದು ಅಂಗ. ಇದರ ಬಲದಿಂದ ರಾಜಕೀಯದಲ್ಲಿ ತಿರುವುಗಳನ್ನು ಕಾಣಬಹುದು. ರಾಜಕೀಯ ವ್ಯವಸ್ಥೆಗಳನ್ನು ಬುಡಮೇಲು ಮಾಡಬಹುದು. ಈ ’ಮತದಾನ’ದಲ್ಲಿ ತನ್ನ ಭವಿಷ್ಯದ ಉತ್ತಮ ಸ್ಥಿತಿ ಮುಂದಿನ ಘಳಿಗೆಯ ಸ್ಥಿತಿಗತಿಯ ಆಧಾರವಾಗುವ ಸಂಕೇತಿಸುವಂತಹ ಒಂದು ಸಾಧನೆ. ಆದರೆ, ಇಂದು ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ಬಹುತೇಕ ದೂರ ಉಳಿಯುತ್ತಿದ್ದಾರೆ. ಶ್ರೀಸಾಮಾನ್ಯ ತನ್ನ ನಿತ್ಯದ ಜೀವನ ಜಂಜಾಟದಿಂದ ಸಿಕ್ಕಿದವರಿಗೆ ಮತ ನೀಡುತ್ತಾನೆ. ಅವಿದ್ಯಾವಂತರು, ಬಡವರು, ಪೊಳ್ಳು ಭರವಸೆ, ಆಮಿಷಗಳಿಗೆ, ಹಣ-ಹೆಂಡಗಳಿಗೆ ಬಲಿಯಾಗಿ ‘ಮತದಾನ’ವು ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ನಮ್ಮ ಪಾಲಿಗೆ ಮೃತ್ಯು ಕೂಪದ ಸಂಕೇತ.

ಅದಕ್ಕಾಗಿ ನಾವು ಒಗ್ಗಟ್ಟಿನಿಂದ ಇದ್ದು ಸರಕಾರವನ್ನು ಪ್ರಶ್ನಿಸುವಂತಹ ಎದೆ ಗುಂಡಿಗೆಯನ್ನು ಬೆಳೆಸಿಕೊಳ್ಳಬೇಕು. ಇಂದಿನ ನಾಗರಿಕರಲ್ಲಿ ಶೇಕಡಾ 10ರಷ್ಟು ಮಂದಿಯಲ್ಲಿ ಕೂಡ ಇಂತಹ ಎದೆಗಾರಿಕೆ ಕಂಡು ಬರುವುದಿಲ್ಲ. ಇಂದು ರಾಜಕೀಯ ಚಿಂತನೆಗಳು ವಿದ್ಯಾವಂತರಲ್ಲಿ ಕಂಡುಬರುವುದಿಲ್ಲ. ಆ ಪರಿಸ್ಥಿತಿ ನಿರ್ಮಾಣವಾಗಲು ನಮ್ಮ ವ್ಯವಸ್ಥೆಯೂ ಮುಖ್ಯ ಕಾರಣ. ನಾವು ಸಿದ್ಧಾಂತಗಳ ಬಗ್ಗೆ ಚಿಂತನೆಗಳನ್ನು ನಡೆಸಿ ರಾಜಕೀಯ ಮಾಡದೇ ಇದ್ದರೆ ನಮ್ಮ ಗೋರಿಯನ್ನು ನಾವೇ ತೋಡಿಕೊಂಡಂತೆ. ಬನ್ನಿ, ನಾವೇ ಉತ್ತಮ ರಾಜಕೀಯ ಚಿಂತನೆ ಬೆಳೆಸಿಕೊಳ್ಳೋಣ. ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪಾರದರ್ಶಕವಾಗಿ ಬೆಳೆಸಲು ಪ್ರಯತ್ನಿಸೋಣ.

?ಬಾಳೆಯಡ ಕಿಶನ್ ಪೂವಯ್ಯ,

ವಕೀಲರು, ಮಡಿಕೇರಿ.