ಮಡಿಕೇರಿ, ಮಾ. 1: ಈಗಿನ ಪರಿಸ್ಥಿತಿಯಂತೆಯೇ ಅಂದೊಮ್ಮೆ ಭಾರತದ ಗಡಿಯಲ್ಲಿ ನುಸುಳುವ ಮೂಲಕ ಯುದ್ಧ ಸಾರಿದ್ದ ಪಾಕಿಸ್ತಾನಕ್ಕೆ ದೇಶದ ಸೇನೆಯ ಮುಂಚೂಣಿಯಲ್ಲಿದ್ದು, ಪಾಠ ಕಲಿಸುವದರೊಂದಿಗೆ ಲಾಹೋರ್ ತನಕ ಲಗ್ಗೆ ಇರಿಸಿದ್ದ ವೀರ ಸೇನಾನಿ ಕೊಡಗಿನ ಕೆ.ಎಸ್. ತಿಮ್ಮಯ್ಯ ಅವರನ್ನು ಇತಿಹಾಸದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವ ಅಪೂರ್ಣ ಅವಕಾಶ ಇಂದು ಕೊಡಗಿನದಾಯಿತು. ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಭೂಸೇನೆಯ ಇಂದಿನ ಮುಖ್ಯಸ್ಥ ಬಿಪಿನ್ ರಾವತ್ ಅವರ ಕಾಳಜಿಯಿಂದ ಐದಾರು ದಶಕಗಳ ಹಿಂದಿನ 24 ತುಪಾಕಿಗಳು ಈ ವೀರ ಭೂಮಿಗೆ ಆಗಮಿಸುವಂತಾಯಿತು.

ಮಧ್ಯಪ್ರದೇಶದ ಜಬಲ್‍ಪುರ್ ನಲ್ಲಿರುವ ಭಾರತೀಯ ಸೇನಾ ಶಿಬಿರದ ಗೋದಾಮಿನಿಂದ ವಿಭಿನ್ನ ರೀತಿಯ ಹಳೆಯ ಕಾಲದ 24 ಶಸ್ತ್ರಾಸ್ತ್ರಗಳು ಇಲ್ಲಿನ ಜಿಲ್ಲಾ ಆಡಳಿತ ಭವನಕ್ಕೆ ತಲಪುವದರೊಂದಿಗೆ ಜನರಲ್ ತಿಮ್ಮಯ್ಯ, ಕಾರ್ಯಪ್ಪ ಫೋರಂ ಸಂಚಾಲಕ ಬಿ.ಎ. ನಂಜಪ್ಪ ಅತ್ಯಂತ ಕಾಳಜಿಯಿಂದ ಬರಮಾಡಿಕೊಂಡರು. ದಶಕಗಳ ಹಿಂದಿನ ಲೈಟ್‍ಮಿಷನ್ ಗನ್, ರಾಕೆಟ್ ಲಾಂಚರ್, ಮೀಡಿಯಂ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್, 32ಎಂಎಂ ರೈಫಲ್ ಇತ್ಯಾದಿ ಶಸ್ತ್ರಗಳು ಇಂದು ಇಲ್ಲಿಗೆ ತರಲಾಗಿವೆ.ಈ ಶಸ್ತ್ರಾಸ್ತ್ರಗಳನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಕಾಳಜಿಯೊಂದಿಗೆ ದೇಶದ ರಾಷ್ಟ್ರಪತಿ ಮಿಲಿಟರಿ ಮುಖ್ಯಸ್ಥರಾಗಿರುವ ಮೇ. ಜ. ಕೋದಂಡ ಪಿ. ಕಾರ್ಯಪ್ಪ ಅವರ ಸಹಕಾರದಿಂದ ಇಲ್ಲಿಗೆ ತರಲು ಸಾಧ್ಯವಾಗಿದೆ ಎಂದು ಬಿ.ಎ. ನಂಜಪ್ಪ ನೆನಪಿಸಿಕೊಂಡರು. ಈ ಹಿಂದೆ ಸೇನಾ ಮುಖ್ಯಸ್ಥರಿಗೆ ಸಲ್ಲಿಸಿದ್ದ ಕೋರಿಕೆಯಂತೆ ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ಲೆ.ಜ. ದಿ. ಬಿ.ಸಿ. ನಂದಾ ಅವರಗಳ ಆಶಯದಂತೆ ಇಂದು ಈ ಶಸ್ತ್ರಾಸ್ತ್ರ ಕೈ ಸೇರುವಂತಾಗಿದೆ ಎಂದ ಅವರು, ಇನ್ನು ಬೋಪೋರ್ಸ್ ಯುದ್ಧ ಅಸ್ತ್ರಗಳು ಬರಬೇಕಿವೆ ಎಂಬದಾಗಿ ವಿವರಿಸಿದರು.

ಕಳೆದ ತಾ. 19 ರಂದು ಜ. ತಿಮ್ಮಯ್ಯ ಸ್ಮಾರಕ ವಸ್ತುಸಂಗ್ರಹಾಲಯ ಮೇಲ್ವಿಚಾರಕ ಬ್ಲಾಕ್‍ಪೆಬಲ್ ಸಂಸ್ಥೆಯ ಮುದ್‍ಸರ್ ಅವರನ್ನ ಜಬಲ್‍ಪುರ್ ಶಿಬಿರಕ್ಕೆ ಕಳುಹಿಸಲಾಗಿತ್ತು. ಅಲ್ಲಿಗೆ ದಿಲ್ಲಿಯಿಂದ ಮೆ. ಜ. ಕೋದಂಡ ಪಿ. ಕಾರ್ಯಪ್ಪ ಅವರು ಹವಾಲ್ದಾರ್ ಸುರ್ಜಿತ್‍ಸಿಂಗ್ ಹಾಗೂ ಇತರ ಐವರು ಸೈನಿಕರನ್ನು ಮಿಲಿಟರಿ ಗೋದಾಮಿಗೆ ಕಳುಹಿಸಿಕೊಟ್ಟು ಈ ಎಲ್ಲವನ್ನು ಇಲ್ಲಿಗೆ ತಲಪಿಸಲು ಸಹಕಾರ ನೀಡಿದ್ದಾಗಿ ಸ್ಮರಿಸಿಕೊಂಡರು.ರೂ. 3.15 ಕೋಟಿ ವೆಚ್ಚ : ಈಗಾಗಲೇ ಜನರಲ್ ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಸೇನಾ ಟ್ಯಾಂಕರ್ ಸಹಿತ ಶಸ್ತ್ರಾಸ್ತ್ರಗಳು ಮತ್ತಿತರ ಅಮೂಲ್ಯ ವಸ್ತುಗಳ ಸಂಗ್ರಹವಾಗಿದ್ದು, ಕಟ್ಟಡ ನವೀಕರಣ ಸಹಿತ 3.15 ಕೋಟಿ ರೂ. ವೆಚ್ಚವಾಗಿದ್ದು, ಒಟ್ಟು 6 ಕೋಟಿ ರೂ. ಗಳ ಕಾಮಗಾರಿ ನಡೆಯುತ್ತಿರುವದಾಗಿ ‘ಶಕ್ತಿ’ಗೆ ತಿಳಿಸಿದರು.

ಮುಖ್ಯಮಂತ್ರಿ ಭರವಸೆ : ನಿನ್ನೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಈ ಬಗ್ಗೆ ಖುದ್ದು ಸಂಪರ್ಕಿಸಿ ಮಾತುಕತೆ ನಡೆಸಿದ್ದಾಗಿ ತಿಳಿಸಿದ ಅವರು, ಮುಖ್ಯಮಂತ್ರಿಗಳು ಆದಷ್ಟು ಶೀಘ್ರ ಹಣ ಒದಗಿಸುವ ಭರವಸೆ ನೀಡಿದ್ದಾರೆ. ಹಣ ಕಲ್ಪಿಸಿದ ಬೆನ್ನಲ್ಲೇ ಕೆಲಸ ಪೂರೈಸಿ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಲಾಗುವದು ಎಂಬ ಆಶಯ ವ್ಯಕ್ತಪಡಿಸಿದರು. ಒಟ್ಟಿನಲ್ಲಿ 1948 ಹಾಗೂ 1965ರ ಕಾಲಘಟ್ಟದಲ್ಲಿ ಭಾರತದ ಗಡಿಯಲ್ಲಿ ಇಂದಿನ ಉದ್ವಿಗ್ನ ಸ್ಥಿತಿಯಿದ್ದಾಗ ಸಮರಾಂಗಣದ ಮುಂಚೂಣಿ ಯಲ್ಲಿದ್ದು, ಪಾಕ್ ಹೆಡೆಮುರಿ ಕಟ್ಟಿದ್ದ ಈ ವೀರಸೇನಾನಿಯ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಇಂದು ಆ ಶಸ್ತ್ರಾಸ್ತ್ರಗಳು ಸೇರುವಂತಾಗಿದ್ದು ರೋಚಕ ನೆನಪು.