ನಿಗದಿತ ಅವಧಿಯಲ್ಲಿಯೇ ಚುನಾವಣೆ
ಲಖನೌ, ಮಾ. 1: ಭಾರತ-ಪಾಕಿಸ್ತಾನ ನಡುವಣ ಪ್ರಕ್ಷುಬ್ದ ಪರಿಸ್ಥಿತಿಯ ನಡುವೆ ನಿಗದಿತ ಅವಧಿಯಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಹೇಳಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ಕಳೆದೆರಡು ದಿನಗಳಿಂದ ಚುನಾವಣೆ ಪೂರ್ವ ಸಿದ್ಧತೆ ಪರಿಶೀಲನೆಯಲ್ಲಿ ತೊಡಗಿರುವ ಸುನಿಲ್ ಅರೋರ, ಪಾಕಿಸ್ತಾನ ಹಾಗೂ ಭಾರತ ನಡುವಣ ಪ್ರಕ್ಷುಬ್ಧ ಪರಿಸ್ಥಿತಿ ಬಿಗಡಾಯಿಸಿದ್ದರೂ ನಿಗದಿತ ಅವಧಿಯಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಚುನಾವಣಾ ಆಯೋಗದ ಹೊಸ ಅಧಿಸೂಚನೆ ಪ್ರಕಾರ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ದೇಶದಲ್ಲಿ ಮಾತ್ರವಲ್ಲದೇ, ವಿದೇಶದಲ್ಲಿ ಇರುವ ಆಸ್ತಿಪಾಸ್ತಿಗಳ ಬಗ್ಗೆಯೂ ಮಾಹಿತಿ ನೀಡಬೇಕಾಗಿದೆ. ಆದಾಯ ತೆರಿಗೆ ಇಲಾಖೆ ಇದನ್ನು ನೋಡಿಕೊಳ್ಳುತ್ತದೆ. ಒಂದು ವೇಳೆ ಇದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದರು. ಪ್ರಚಾರದ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ಸೂಚನೆ ನೀಡಲಾಗಿದೆ.