ಕುಶಾಲನಗರ, ಮಾ. 2: ಮರಣಪತ್ರ ಬರೆದು ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಬಸವೇಶ್ವರ ಬಡಾವಣೆಯ 3ನೇ ಬ್ಲಾಕ್ ನಿವಾಸಿ ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಂ.ಯೋಗೇಶ್ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಯೋಗೇಶ್ ಮನೆಯಿಂದ ಹೊರ ಹೋಗಿದ್ದಾಗ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಮುನ್ನ ಯೋಗೇಶ್ ಪತ್ರವೊಂದನ್ನು ಬರೆದಿಟ್ಟಿದ್ದು ಈ ಸಾವಿಗೆ ತಾನೇ ಕಾರಣ. ಮನೆಯಲ್ಲಿ ಯಾರ ತೊಂದರೆಯೂ ಇರಲಿಲ್ಲ. ತನ್ನ ಆರೋಗ್ಯ ಹದಗೆಟ್ಟಿದ ಕಾರಣ ತಾನು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಬರೆದಿದ್ದು ತನಗೆ ಇಲಾಖೆಯಿಂದ ಅಂದಾಜು ರೂ. 30 ಲಕ್ಷ ದೊರಕಲಿದ್ದು, ಅದನ್ನು ಸಮರ್ಪಕವಾಗಿ ಪಾಲು ಮಾಡಿಕೊಡುವಂತೆ ಪತ್ರದಲ್ಲಿ ಬರೆದಿರುವದಾಗಿ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.
ಮೃತರು ಮೂಲತಃ ಕೊಡ್ಲಿಪೇಟೆಯವರಾಗಿದ್ದು ಓರ್ವ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.