ಮಡಿಕೇರಿ, ಮಾ. 2: ನಾಲ್ಕು ದಶಕಗಳ ಹಿಂದೆ ಆ ಗ್ರಾಮದಲ್ಲಿ ದೇವಾಲಯವೇ ಇರಲಿಲ್ಲ. ಒಂದಿಷ್ಟು ನಿವಾಸಿಗಳು ಸೇರಿ ಕಾಡು-ಗಿಡಗಂಟಿಗಳಿಂದ ಕೂಡಿದ ಸರಕಾರಿ ಜಾಗದಲ್ಲಿ ಸುಮಾರು 30 ಸೆಂಟ್ ಪ್ರದೇಶವನ್ನು ಸ್ವಚ್ಛಗೊಳಿಸಿ ಶಿವನ ಫೋಟೋ ಇರಿಸಿಕೊಂಡು ಸಾಂಕೇತಿಕವಾಗಿ ಮಹಾಶಿವರಾತ್ರಿ ಆಚರಿಸಿದ್ದರು.
ಫಲವೆಂಬಂತೆ ಪ್ರತಿವರ್ಷವೂ ಸರಿಸುಮಾರು ಒಂದು ದಶಕ (1980 ರಿಂದ 1990) ಹೀಗೆಯೇ ಆಚರಣೆ ಮುಂದುವರಿಯಿತು. ಆ ಮಾತ್ರದಿಂದ 1990ರಲ್ಲಿ ಪುಟ್ಟ ಗಣಪತಿ ಗುಡಿ ನಿರ್ಮಾಣಕ್ಕೆ ಪ್ರಯತ್ನಿಸಿದಾಗ, ದೈವಜ್ಞರ ಅಣತಿಯಂತೆ ಶ್ರೀ ಗೌರಿಶಂಕರ ಗುಡಿ ಸ್ಥಾಪನೆಗೊಳ್ಳುವಂತಾಯಿತು.
ಹಾಗೆಯೇ ನಿರಂತರವಾಗಿ ಮಹಾಶಿವರಾತ್ರಿಯ ಸಾಮೂಹಿಕ ಆಚರಣೆಯೊಂದಿಗೆ, ವರ್ಷದಿಂದ ವರ್ಷಕ್ಕೆ ಮೇಕೇರಿ ಸುತ್ತಮುತ್ತಲಿನ ಎಂಟು ಬಡಾವಣೆ (ಉಪ ಗ್ರಾಮ) ಮಂದಿ ಶ್ರೇಯೋಭಿವೃದ್ಧಿ ಹೊಂದುವಂತಾಗಿ ಸ್ವತಂತ್ರ ಗ್ರಾಮ ಪಂಚಾಯಿತಿ ಆಡಳಿತ ರೂಪುಗೊಳ್ಳುವದು ಸಾಧ್ಯವಾಯಿತು.
ಬಹುತೇಕ ದುಡಿಯುವ ವರ್ಗದ ಮಂದಿಯೊಂದಿಗೆ ಕೈ ಬೆರಳೆಣಿಕೆಯಷ್ಟು ತೋಟ ಮಾಲೀಕರು ಕೂಡ ಶ್ರೀ ಗೌರಿಶಂಕರ ದೇವಾಲಯ ಹೆಸರಿನಲ್ಲಿ ಜರುಗುವ ಎಲ್ಲ ಕೈಂಕರ್ಯಗಳಿಗೆ ಸಹಕಾರ ನೀಡುತ್ತಾ ಪ್ರೋತ್ಸಾಹಿಸತೊಡಗಿದರು. ಇಂದು ಇಲ್ಲಿ ಎಲ್ಲರ ಪರಿಶ್ರಮದಿಂದ ಹಬ್ಬ ಹರಿದಿನಗಳನ್ನು ಮಹಾಶಿವರಾತ್ರಿಯನ್ನು 10 ದಿನಗಳ ಜಾತ್ರೋತ್ಸವದಂತೆ ಆಚರಿಸಲಾಗುತ್ತಿದೆ. ಇಲ್ಲಿ ಸ್ಥಳೀಯರೇ ಆಗಿರುವ ಕೆ.ಕೆ. ಪೂರ್ಣಯ್ಯ ಅಧ್ಯಕ್ಷತೆಯಲ್ಲಿ ನಿವೃತ್ತ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ವೇಲಾಯುಧನ್ ಕಾರ್ಯದರ್ಶಿಯಾಗಿರುವ ದೇವಾಲಯ ಆಡಳಿತ ಮಂಡಳಿಯೊಂದಿಗೆ ಒಟ್ಟಾರೆ ಗ್ರಾಮಸ್ಥರು, ಹಿರಿಯರು, ಕಿರಿಯರ ಸಹಿತ ಸಹಕರಿಸುತ್ತಿದ್ದಾರೆ.
ಅರ್ಚಕಸ್ಯ ಪ್ರಕಾಶೇನ ಶಿಲಾ ಭವತಿ ಶಂಕರ ಎಂಬಂತೆ ಪುರಹಿತ ಬಯಸುವ ಸನ್ನಿಧಿಯ ಅರ್ಚಕರಾಗಿ ಕೃಷ್ಣ ಭಟ್ ಕುಟುಂಬ ಎಲ್ಲ ಸಂದರ್ಭಗಳಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ಸಮಚಿತ್ತರಾಗಿ ಅನ್ನಸಂತರ್ಪಣೆ ಸಹಯೋಗ ನೀಡುತ್ತಾ ಬಂದಿದ್ದಾರೆ. ಗ್ರಾಮವಾಸಿಗಳೇ ಇಡೀ 10 ದಿನಗಳ ಅನ್ನದಾನ ಪೂಜಾ ಖರ್ಚು ಭರಿಸುತ್ತಾ ಶ್ರೀ ಗೌರಿಶಂಕರ ಸನ್ನಿಧಿಗೆ ಭಕ್ತಿಬಾವ ತೋರುತ್ತಿದ್ದಾರೆ.
ದಶಕಗಳ ಹಿಂದೆ ಬಯಲಿನ ನಡುವೆ ಆರಂಭಗೊಂಡಿದ್ದ ಮಹಾಶಿವರಾತ್ರಿ ಉತ್ಸವ ಇಂದು ಮಡಿಕೇರಿ, ಹಾಕತ್ತೂರು ನಡುವಿನ ಹೆದ್ದಾರಿ ಬದಿ ಕ್ಷೇತ್ರವಾಗಿ ರೂಪುಗೊಂಡಿರುವ ಶ್ರೀ ಗೌರಿಶಂಕರ ದೇವಾಲಯದಲ್ಲಿ ತಳಿರು ತೋರಣ, ಕೇಸರಿ ಅಲಂಕಾರ, ಝಗಮಗಿಸುವ ವಿದ್ಯುತ್ ದೀಪಾಲಂಕಾರ ನಡುವೆ ಭಜನೆ, ಧಾರ್ಮಿಕ ಉಪನ್ಯಾಸ, ಸಾಂಸ್ಕøತಿಕ ಚಟುವಟಿಕೆಗಳ ನಡುವೆ ಅರ್ಥಪೂರ್ಣವಾಗಿ ದಶ ದಿನಗಳ ತನಕ ಜರುಗುವಂತಾಗಿದೆ. ಭವಿಷ್ಯದಲ್ಲಿ ಶಿಲಾಗುಡಿಯೊಂದಿಗೆ ಕ್ಷೇತ್ರದ ಅಭಿವೃದ್ಧಿಗೂ ಯೋಜನೆ ರೂಪುಗೊಂಡಿದೆ. ದೇವಾಲಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಇದೆಲ್ಲವೂ ಶ್ರೀ ಗೌರಿಶಂಕರ-ಪರಿವಾರ ದೇವತೆಗಳ ಅನುಗ್ರಹದಿಂದ ಸಾಧ್ಯವಾಗಿದೆ ಎಂದು ವಿನಿತಭಾವದಿಂದ ನುಡಿಯುತ್ತಾರೆ. -ಶ್ರೀಸುತ