ಕುಶಾಲನಗರ, ¥s.É 28: ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟಿಬದ್ಧವಾಗಿದೆ. ಕೊಡಗಿನ ಜನರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಈ ದಿಸೆಯಲ್ಲಿ ಸರಕಾರ ಅಧಿಕಾರಿ ವರ್ಗಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಒಂದು ವೇಳೆ ಕೆಲಸ ಕಾರ್ಯಗಳು ಮುಂದಿನ ಮಳೆಗಾಲದ ಒಳಗಾಗಿ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ತಾನು ಹಿಂಜರಿಯುವದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಬಸವನಹಳ್ಳಿಯಲ್ಲಿ ನಡೆದ ಕೊಡಗು ಜಿಲ್ಲೆ ಮಡಿಕೇರಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿ ದಿಡ್ಡಳ್ಳಿ ನಿರಾಶ್ರಿತರಿಗೆ ಹಕ್ಕುಪತ್ರ ವಿತರಣೆ ಮಾಡಿ ನಂತರ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿ ಮಾತನಾಡಿದರು.ಸುಮಾರು 147 ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ (ಮೊದಲ ಪುಟದಿಂದ) ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳ ರಿಪೇರಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆಗೆ 90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 50 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಿಲ್ಲ ಎಂಬದು ತನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಹಣದ ಕೊರತೆ ಉಂಟಾದಲ್ಲಿ ಒದಗಿಸಲು ಸರಕಾರ ಸಿದ್ದವಿದೆ. ಮುಂದಿನ ಮಳೆಗಾಲದ ಒಳಗಾಗಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಕುಮಾರಸ್ವಾಮಿ ಸೂಚಿಸಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಗುಡ್ಡಗಳು ಬಿರುಕುಬಿಟ್ಟಿರುವ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಈ ನಿಟ್ಟಿನಲ್ಲಿ ತಾಂತ್ರಿಕ ತಜ್ಞರನ್ನು ಕೂಡಲೇ ಜಿಲ್ಲೆಗೆ ಕರೆಸಿ ಪರಿಶೀಲನೆ ನಡೆಸಿ ಅನಾಹುತ ಗಳಾಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಬೆಳೆಗಾರರಿಗೆ ನೀಡಲಾಗಿರುವ ಬೆಳೆ ಹಾನಿ ಪರಿಹಾರವನ್ನು ಸಂಬಂಧಿಸಿದ ಇಲಾಖೆ ಹಿಂಪಡೆಯುತ್ತಿರುವ ಬಗ್ಗೆ ತನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ ವೇಳೆ ಎನ್‍ಡಿಆರ್‍ಎಫ್ ನಿಯಮದನ್ವಯ ಯಾವದಾದರು ಒಂದು ಬೆಳೆಗೆ ಮಾತ್ರ ಪರಿಹಾರ ನೀಡಬೇಕಾಗಿರುವದರಿಂದ ಈ ರೀತಿ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಆದರೆ ಕೊಡಗು ಜಿಲ್ಲೆಯ ಮಟ್ಟಿಗೆ ಎನ್‍ಡಿಆರ್‍ಎಫ್ ನಿಯಮ ವನ್ನು ಬದಿಗಿಟ್ಟು ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಎರಡು ದಿನಗಳಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗು ವದು ಎಂದರು.
ಒಕ್ಕಲೆಬ್ಬಿಸುವದಿಲ್ಲ
ಶಾಸಕ ಕೆ.ಜಿ.ಬೋಪಯ್ಯ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಿಎಂ, ಜಿಲ್ಲೆಯಲ್ಲಿ 200 ಕುಟುಂಬಗಳಿಗೆ ಸಿ ಆಂಡ್ ಡಿ ಲ್ಯಾಂಡ್ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಂದಿಸುವ ಭರವಸೆ ನೀಡಿದರು. ಅರಣ್ಯ ಪ್ರದೇಶಗಳಲ್ಲಿ ವಾಸವಿರುವವರನ್ನು ಯಾವದೇ ಹಂತದಲ್ಲಿ ಒಕ್ಕಲೆಬ್ಬಿಸುವದಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಲು ರಾಜ್ಯ ಸರಕಾರ ಮನವಿ ಮಾಡಲಿದೆ ಎಂದರು.
ಮಳೆಹಾನಿಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರ ಪೈಕಿ ಯಾರಾದರೂ ಮನೆಯ ಬದಲಿಗೆ ಹಣ ಒದಗಿಸುವಂತೆ ಕೋರಿದಲ್ಲಿ ಆ ಕುಟುಂಬಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಗಳು ಕ್ರಮಕೈಗೊಳ್ಳ ಬಹುದು. ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗಳು ಮುಕ್ತವಾಗಿ ಸರಕಾರದೊಂದಿಗೆ ವ್ಯವಹರಿಸಿ ಮುಂದಡಿ ಇಡಬಹುದು. ಯಾವದೇ ನೀತಿ ನಿಯಮಗಳು ಅಡ್ಡಿಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಮುಖ್ಯಮಂತ್ರಿ ಯಾಗಿ ತಾನು ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ಕಳೆದ ಬಾರಿ ಘಟಿಸಿದ ಅನಾಹುತ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಅಧಿಕಾರ ನೀಡುವದಾಗಿ ಹೇಳಿದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಹೆಕ್ಟೇರ್‍ಗೆ ರೂ. 25 ಸಾವಿರ ನೀಡಲು ಚಿಂತಿಸಿದ್ದು ಸದ್ಯದಲ್ಲಿಯೇ ಇದು ಕಾರ್ಯಗತಗೊಳ್ಳಲಿದೆ. ಬೀದಿ ಬದಿ ವ್ಯಾಪಾರಿಗಳಿಗೆ 1 ರಿಂದ 10 ಸಾವಿರದವರೆಗೆ ನೆರವು ಕಲ್ಪಿಸುವ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದು ಜಿಲ್ಲಾಡಳಿತ ಕೊಡಗಿನಲ್ಲಿ ಈ ಯೋಜನೆಯನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವಂತೆ ಸೂಚನೆಯಿತ್ತರು.
ಮರ ತೆರವಿಗೆ ಅವಕಾಶ ನೀಡಿ
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಕಾಫಿ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ರೈತರಿಗೆ ಅವಕಾಶ ಕಲ್ಪಿಸುವದು, ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸರಕಾರ ವಹಿಸಿಕೊಳ್ಳುವದು, ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ಪ್ರಾಧಿಕಾರಕ್ಕೆ ತಕ್ಷಣ ಕಾರ್ಯದರ್ಶಿಗಳ ನೇಮಕ ಮಾಡುವ ಮೂಲಕ ಕಾರ್ಯ ಚಟುವಟಿಕೆ ಚುರುಕುಗೊಳಿಸು ವದು, ಕುಶಾಲನಗರ ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆ ಗೇರಿಸುವದು, ಹಾರಂಗಿ ಜಲಾಶಯದಿಂದ ಕುಶಾಲನಗರ ಪಟ್ಟಣಕ್ಕೆ ಕುಡಿವ ನೀರಿನ ಯೋಜನೆ ಮತ್ತಿತರ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇದೇ ಸಂದರ್ಭ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಗ್ರಾಮಗಳಲ್ಲಿ ಜನರಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸುವ ಕೆಲಸವಾಗ ಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ತಂತ್ರಜ್ಞರ ಕೊರತೆಯೊಂದಿಗೆ ಸರಕಾರಿ ಕಛೇರಿಗಳಲ್ಲಿ ಸಿಬ್ಬಂದಿಗಳ ನೇಮಕವಾಗಬೇಕಾಗಿದೆ. ಈ ಮೂಲಕ ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸರಕಾರ ಕ್ರಮಕೈಗೊಳ್ಳ ಬೇಕು ಎಂದರು. ಪ್ರತ್ಯೇಕ ತಾಲೂಕು ಹೋರಾಟಕ್ಕೆ ಸ್ಪಂದಿಸಿ ಅಧಿಕೃತವಾಗಿ ನೂತನ ತಾಲೂಕು ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಹಾರಂಗಿ ಅಣೆಕಟ್ಟೆಯಲ್ಲಿ ಬಹುತೇಕ ಹೂಳು ತುಂಬಿದ್ದು ಹೂಳೆತ್ತುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಬೆಳೆನಷ್ಟ ಪರಿಹಾರ ನೀಡುವ ಸಂದರ್ಭ ಬಿಡುಗಡೆಯಾದ ಹಣದಲ್ಲಿ ವಾಪಾಸ್ ಮಾಡಿದ ಹಣವನ್ನು ತಕ್ಷಣ ಹಿಂತಿರುಗಿಸಬೇಕು ಎಂದರು. ಇದೇ ಸಂದರ್ಭ ನೂತನ ತಾಲೂಕು ಘೋಷಣೆ ಮಾಡಿದ ಮುಖ್ಯಮಂತ್ರಿಗಳನ್ನು ಶಾಸಕರುಗಳು ಮತ್ತು ಸ್ಥಳೀಯ ಬಿಜೆಪಿ ಪ್ರಮುಖರು ಹಾರ ಹಾಕಿ ಸನ್ಮಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪ್ರಕೃತಿ ವಿಕೋಪದಲ್ಲಿ ನೊಂದಿರುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಿರುವದು ಶ್ಲಾಘನೀಯ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಸರಕಾರದ ನಾಯಕತ್ವದ ಮೂಲಕ ಬಡಜನರ ನೋವಿಗೆ ಸರಕಾರ ಎಲ್ಲಾ ರೀತಿಯಲ್ಲಿ ಸ್ಪಂದಿಸಿದೆ. ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಕೋಟಿಗಟ್ಟಲೆ ಅನುದಾನ ನೀಡಿರುವದು ನಿಜಕ್ಕೂ ಸಂತಸದ ವಿಷಯ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಸಣ್ಣ ನೀರಾವರಿ ಸಚಿವ ಪುಟ್ಟರಾಜು, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಜೀವಿಜಯ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು. ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಂತ ಮೈಕಲರ ಶಾಲಾ ವಿದ್ಯಾರ್ಥಿ ಗಳು ನಾಡಗೀತೆ ಹಾಡಿದರು, ಜಿಲ್ಲಾಧಿಕಾರಿ ಸ್ವಾಗತಿಸಿದರು. ಕುಶಾಲನಗರ ಮತ್ತು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಪ್ರಮುಖರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.