ಮಡಿಕೇರಿ, ಫೆ. 28: ಅರಣ್ಯ ಹಕ್ಕು ಕಾಯ್ದೆಯಲ್ಲಿ ಜಾಗ ಪಡೆಯುವ ಅವಕಾಶವನ್ನು ಕಳೆದುಕೊಂಡಿರುವ ಲಕ್ಷಾಂತರ ಬುಡಕಟ್ಟು ಜನರನ್ನು ಅರಣ್ಯದಿಂದ ಒಕ್ಕಲೆಬ್ಬಿಸಬೇಕೆಂಬ ತಾ.13ರ ನ್ಯಾಯಾಲಯದ ಆದೇಶಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.ನ್ಯಾಯಾಧೀಶರುಗಳಾದ ಅರುಣ್ ಮಿಶ್ರಾ, ನವೀನ್ ಸಿನ್ಹಾ ಹಾಗೂ ಎಂ.ಆರ್.ಶಾ ಇವರನ್ನೊಳಗೊಂಡ ತ್ರಿಸದಸ್ಯ ಪೀಠ ತಾ. 13ರ ಆದೇಶವನ್ನು ಬದಲಿಸುವಂತೆ ಕೇಂದ್ರ ಸರಕಾರ ಮಾಡಿಕೊಟ್ಟ ಮನವಿಯನ್ನು ಪುರಸ್ಕರಿಸಿತು.ವಿಚಾರ ಮಂಡಿಸಿದ ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು ಹಿಂದಿನ ಆದೇಶದಿಂದ ಹೆಚ್ಚಿನ ಕುಟುಂಬಗಳು ತೊಂದರೆಗೀಡಾಗಲಿವೆ ಎಂದರು. ರಾಜ್ಯಗಳು ಆದೇಶ ಪಾಲಿಸಿ ಒಕ್ಕಲೆಬ್ಬಿಸುವ ಮೊದಲು ಅರಣ್ಯ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತಂದ ರೀತಿಯ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಪ್ರತಿಪಾದಿಸಿದರು.ಅರಣ್ಯದಿಂದ ಕ್ರಮಬದ್ಧವಿಲ್ಲದೆ ಒಕ್ಕಲೆಬ್ಬಿಸಿದರೆ, ತಲೆತಲಾಂತರಗಳಿಂದ ಅಲ್ಲಿ ವಾಸಿಸುವವರ ಜೀವನಕ್ಕೆ ತೊಂದರೆಯಾಗುತ್ತದೆ. ಇದರಿಂದ ಬಡವರು ಮತ್ತು ಅವಿದ್ಯಾವಂತ ಅರಣ್ಯವಾಸಿಗಳ ಬದುಕಿಗೆ ಬವಣೆಯಾಗುತ್ತದೆ ಎಂದು ಅವರು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರು ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ನಿದ್ದೆ ಮಾತುತ್ತಿತ್ತೇ? ಎಂದು ಪ್ರಶ್ನಿಸಿದರಲ್ಲದೆ, ತಾ. 13ರಂದು ನೀಡಿದ ಆದೇಶ ಜನವರಿ 29-2016ರ ಆದೇಶದ ಮುಂದುವರಿದ ಭಾಗವಷ್ಟೆ ಎಂದು ನೆನಪಿಸಿದರು. ತಿರಸ್ಕøತವಾದ ಅರ್ಜಿಗಳನ್ನು ಯಾಕೆ ಪರಿಷ್ಕರಿಸಲಿಲ್ಲ ಎಂದೂ ಪ್ರಶ್ನಿಸಿದರು.
ವೈಲ್ಡ್‍ಲೈಫ್ ಫಸ್ಟ್ ಪರವಾಗಿ ವಾದಿಸಿದ ವಕೀಲ ಶ್ಯಾಮ್ ದಿವಾನ್ ಅವರು, 2018ರ ನವೆಂಬರ್ ತನಕ 42,24,951 ಅರ್ಜಿಗಳನ್ನು ಸ್ವೀಕರಿಸಿದ್ದು, 18,94,225 ಹಕ್ಕು ಪತ್ರ ನೀಡಲಾಗಿದೆ. 19,39,231 ಅರ್ಜಿಗಳು ತಿರಸ್ಕøತ ಗೊಂಡಿವೆ ಎಂದು ಮಾಹಿತಿ ನೀಡಿದರು. ತಿರಸ್ಕøತಗೊಂಡ ಅರ್ಜಿಗಳು ಬುಡಕಟ್ಟು ಜನರದ್ದೇ ಅಥವಾ ಸಾಮಾನ್ಯರದ್ದೇ ಎಂದು ನ್ಯಾಯ ಮೂರ್ತಿಗಳು ಮಾಹಿತಿ ಬಯಸಿದರು.
ವಾದಗಳನ್ನು ಆಲಿಸಿದ ಪೀಠ ಹಿಂದಿನ ಆದೇಶಕ್ಕೆ ತಡೆ ನೀಡಿ ರಾಜ್ಯಗಳಿಗೆ 4 ತಿಂಗಳ ಕಾಲಾವಕಾಶ ನೀಡಿತಲ್ಲದೆ, ಈ ಅವಧಿಯಲ್ಲಿ ಅರ್ಜಿ ಗಳನ್ನು ಸರಿಯಾಗಿ ವಿಲೇವಾರಿ ಮಾಡಿ ವರದಿ ಸಲ್ಲಿಸುವಂತೆ ಆದೇಶಿಸಿತು.
ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಲ್ಡ್‍ಲೈಫ್ ಫಸ್ಟ್‍ನ ಪ್ರವೀಣ್ ಭಾರ್ಗವ, ನ್ಯಾಯಾಲಯದ ಆದೇಶ ಸ್ವಾಗತಾರ್ಹವಾಗಿದ್ದು, ಧ್ವನಿ ಹಾಗೂ ಮತದಾನದ ಹಕ್ಕಿಲ್ಲದ ಅರಣ್ಯ ಮತ್ತು ವನ್ಯಜೀವಿಗಳಿಗೆ ಮುಂದೆ ನ್ಯಾಯ ಒದಗಲಿದೆ ಎಂದು ಆಶಿಸಿದ್ದಾರೆ.