ಮಡಿಕೇರಿ, ಫೆ. 28: ನಂಬಿಕಸ್ತ ಕೆಲಸಗಾರರಾಗಿದ್ದವರು ಹಣದ ಆಸೆಗಾಗಿ ಒಂಟಿಯಾಗಿ ಜೀವಿಸುತ್ತಿದ್ದ ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾರೆ. ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ ಮಾನವೀಯತೆ, ಪ್ರೀತಿಯಿಂದ ಕಾಫಿ ಮಾಡಿ ಕೊಟ್ಟ ಮಾತಾಯಿಯನ್ನು ಉಸಿರು ಕಟ್ಟಿಸಿ ಸಾಯಿಸಿದ ಪಾತಕಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಇತ್ತೀಚೆಗೆ ನಾಪೋಕ್ಲು ಠಾಣಾ ವ್ಯಾಪ್ತಿಯ ಕುಂಬಳ ದಾಳು ಗ್ರಾಮದಲ್ಲಿ ವಾಸವಿದ್ದ ದಿ. ಕರ್ಣಯ್ಯನ ಉತ್ತಪ್ಪ ಅವರ ಪತ್ನಿ ರಾಧಾ (74) ಅವರ ಶವ ಅವರ ಮನೆಯೊಳಗೆ ಹಾಸಿಗೆಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರ ತನಿಖಾ ತಂಡ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ಅವರ ಮಾರ್ಗದರ್ಶನದಲ್ಲಿ ಮಹಿಳೆ ಸೇರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕುತೂಹಲವೆಂದರೆ ಕೆಲಸ ನೀಡಿ, ಆಶ್ರಯ ಕಲ್ಪಿಸಿದ್ದ ಮನೆಯಾಕೆಯನ್ನೇ ಹತ್ಯೆ ಮಾಡಲು ಸಂಚು ಹೂಡಿದ್ದ (ಮೊದಲ ಪುಟದಿಂದ) ಆರೋಪಿಗಳು ಅದು ಸಾಧ್ಯವಾಗದ್ದರಿಂದ ಮತ್ತೊಂದು ಕಡೆಯಲ್ಲಿ ಕೆಲಸ ನೀಡಿದ ಸಾಧುಜೀವಿಯನ್ನು ಕೊಂದಿರುವ ವಿಚಾರ ಕೊಲೆಗಡುಕರಿಂದಲೇ ತಿಳಿದು ಬಂದಿದೆ.ಯಾರಿವರು..? ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲೀಗ ಕಾರ್ಮಿಕರ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಲ್ಲಿರುವ ಕಾರ್ಮಿಕರ ಸಂಬಳ ನಿಭಾಯಿಸಲು ಸಾಧ್ಯವಾಗದ ಬಹುತೇಕ ಬೆಳೆಗಾರರು, ಸಣ್ಣ ಬೆಳೆಗಾರರು ನೆರೆಯ ತಾಲೂಕು, ಜಿಲ್ಲೆ, ರಾಜ್ಯಗಳ ಕಾರ್ಮಿಕರ ಮೊರೆ ಹೋಗುವ ಪರಿಸ್ಥಿತಿ. ಅಂತೆಯೇ ಕಗ್ಗೋಡ್ಲುವಿನ ಸಣ್ಣ ಬೆಳೆಗಾರರಾದ ಪುಳಂಜನ ಶೋಭ ಅವರಲ್ಲಿಗೆ ಕುಶಾಲನಗರ ಅಸುಪಾಸಿನ ಕೆಲವು ಕಾರ್ಮಿಕರು ಬಂದು ಸೇರಿಕೊಂಡಿದ್ದರು.ಅವರಿಗೆ ಶೋಭಾ ಅವರು ತಮ್ಮ ಲೈನ್‍ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದರು. ಇವರುಗಳ ಪೈಕಿ ಕುಶಾಲನಗರದವರೆನ್ನಲಾದ ಸುಬ್ಬು (ಮಣಿ), ಆತನ ಸಹೋದರಿ ಹಾಗೂ ಇನ್ನೊಬ್ಬ ಯುವಕ, ಶೋಭಾ ಅವರಿಗೆ ನಂಬಿಕಸ್ತ ಹಾಗೂ ಒಳ್ಳೆಯ ಕೆಲಸಗಾರಾಗಿದ್ದರು. ತಮ್ಮ ತೋಟದ ಕೆಲಸ ಮುಗಿದಾದ ಮೇಲೆ ಶೋಭಾ ಅವರು ಈ ಮೂವರನ್ನು ಅವರ ಸಂಬಂಧಿ ಕರ್ಣಯ್ಯನ ರಾಧ ಅವರ ಮನೆಗೆ ಕಾಫಿ ಕುಯ್ಲು ಕೆಲಸಕ್ಕೆ ಕಳುಹಿಸಿಕೊಟ್ಟಿದ್ದರು.

ಅಲ್ಲಿಂದ ಸ್ಕೆಚ್

ರಾಧ ಅವರ ತೋಟದಲ್ಲಿ ಸ್ವಲ್ಪ ಮಾತ್ರ ಕಾಫಿ ಕೆಲಸ ಇದ್ದುದರಿಂದ ಕೆಲಸ ಬೇಗನೇ ಮುಗಿಸಿದ್ದಾರೆ. ರಾಧ ಅವರೂ ಕೂಡ ಈ ಕಾರ್ಮಿಕರೊಳಗಿನ ರಾಕ್ಷಸಿ ಗುಣವನ್ನು ಗಮನಿಸದೆ ಒಳ್ಳೆಯ ಕೆಲಸಗಾರರೆಂದು ನಂಬಿದ್ದರು. ಅವರಿಗಿಂತ ಅವರ ಮಕ್ಕಳು ಸೊಸೆಯಂದಿರು ಕೂಡ ಹೆಚ್ಚಾಗಿ ನಂಬಿದ್ದರು. ಆದರೆ, ನಂಬಿದ್ದವರೇ ನಂಬಿಕಸ್ತನ ಕುತ್ತಿಗೆ ಕುಯ್ಯಲು ತಯಾರಾಗಿದ್ದಾರೆಂಬದು ಮಾತ್ರ ಈ ಮುಗ್ಧ ಜೀವಿಗಳಿಗೆ ತಿಳಿಯಲೇ ಇಲ್ಲ.!?

ಶೋಭಾ ಅವರಿಗೆ ಒಂದಿಷ್ಟು ತೋಟವಿದ್ದು, ಆದಾಯವಿದೆ. ಹಾಗಾಗಿ ಈ ಮೂವರು ಶೋಭಾ ಅವರ ಹಣ, ಚಿನ್ನಾಭರಣ ದೋಚಿ ಅವರನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು. ಆದರೆ, ಕಗ್ಗೋಡ್ಲುವಿನಲ್ಲಿ ಅಸುಪಾಸಿನಲ್ಲಿ ಮನೆ, ಲೈನ್‍ಮನೆಗಳಿದ್ದದರಿಂದ ಅವರ ಪ್ಲ್ಯಾನ್ ಸಕ್ಸಲ್ ಆಗಲಿಲ್ಲ..!

ತಿರುಗಿದ್ದು ಇಲ್ಲಿಗೆ

ಶೋಭಾ ಅವರನ್ನು ಏನೂ ಮಾಡಲಾಗದೆಂದು ತಿಳಿದ ಪಾತಕಿಗಳ ದೃಷ್ಟಿ ನೆಟ್ಟಿದ್ದು, ಬಡಪಾಯಿ ರಾಧ ಅವರ ಕಡೆಗೆ! ಅಂದು ಗುರುವಾರ, ಆ ದಿನ ಸಂಜೆ ರಾಧ ಅವರು ಸೊಸೈಟಿಗೆ ಹೋಗಿ ಸೀಮೆ ಎಣ್ಣೆ ತಗೊಂಡು ಮನೆಗೆ ಬಂದಿದ್ದಾರೆ. ಮನೆಯಲ್ಲಿ ನೋಡುವಾಗ ಈ ಮೂವರು ಕಾರ್ಮಿಕರು ಇದ್ದಾರೆ. ‘ನೀವೇನು ಬಂದಿದ್ದು..?’ ಎಂದು ಸಹಜವಾಗಿಯೇ ರಾಧಮ್ಮ ಕೇಳಿದ್ದಾರೆ. ‘ಕೆಲಸ ಎಲ್ಲಾ ಮುಗೀತು, ನಾವು ಊರಿಗೆ ಹೋಗುತ್ತಿದ್ದೇವೆ. ನಿಮ್ಮನ್ನ ನೋಡಿ ಮಾತನಾಡಿಸಿಕೊಂಡು ಹೋಗಲೆಂದು ಬಂದಿದ್ದು,’ ಅಂತ ಇವರು ಹೇಳಿದ್ದಾರೆ. ರಾಧರಿಗೆ ಇವರ ಮಾತಿನಿಂದ ಸಂತೋಷವಾಗಿದೆ, ಅವರು ‘ಕುಡಿಯಲು ನೀರು ಕೊಡಿ’ ಅಂತ ಕೇಳಿದ್ದಾರೆ. ‘ಅಯ್ಯೋ ನೀರು ಯಾಕೆ, ಇಷ್ಟು ದೂರ ಬಂದಿದ್ದೀರಾ, ಇರಿ ಕಾಫಿ ಮಾಡಿಕೊಡುತ್ತೇನೆ’ ಎಂದು ಆ ಅಮ್ಮ ಮನೆಯೊಳಗೆ ಹೋಗಿದ್ದಾರೆ. ಕಾಫಿ ಮಾಡಿಕೊಟ್ಟ ತಪ್ಪಿಗೆ ಈ ಪಾಪಿಗಳು ಅಮ್ಮನ ಉಸಿರು ಕಸಿದಿದ್ದಾರೆ..!

ಪ್ರಿ ಫ್ಲ್ಯಾನ್

ಇದೆಲ್ಲವೂ ಪ್ರಿ ಪ್ಲ್ಯಾನ್ ಸ್ಕೆಚ್, ಅತ್ತ ಶೋಭಾ ಅವರಲ್ಲಿ ದೋಚಲಾಗದೇ ಇದ್ದಾಗ ಈ ಪಾಪಿಗಳ ಚಿತ್ತ ಹರಿದಿದ್ದು ರಾಧ ಅವರು ಕಾಫಿ ಮಾರಿದ ಹಣದ ಮೇಲೆ ಇವರುಗಳೇ ಕುಯ್ದ ಕಾಫಿಯನ್ನು ರಾಧ ಅವರು ರೂ. 2 ಲಕ್ಷಕ್ಕೆ ಮಾರಾಟ ಮಾಡಿದ್ದರು. ಆದರೆ, ಹಣವನ್ನು ಮನೆಯಲ್ಲಿಡದೆ ಅವರ ದ್ವಿತೀಯ ಪುತ್ರ ಅದನ್ನು ಬ್ಯಾಂಕ್‍ನಲ್ಲಿ ಠೇವಣಿ ಮಾಡಿಸಿದ್ದರು. ಇದು ಈ ಕೊಲೆಗಡುಕರಿಗೆ ಗೊತ್ತಿರಲಿಲ್ಲ. ಎರಡು ಲಕ್ಷ ಹಣ ಹಾಗೂ ರಾಧ ಅವರ ಬಳಿಯಿರುವ ಚಿನ್ನಾಭರಣ ದೋಚುವ ನಿಟ್ಟಿನಲ್ಲಿ ಇವರುಗಳು ಸ್ಕೆಚ್ ಹಾಕಿದ್ದರು.

ಕೊಲ್ಲದಿರಿ ಎಂದರಂತೆ

ಮನೆ ಒಳನುಗ್ಗಿದಾಗಲೇ ರಾಧ ಅವರ ಬಾಯಿಯನ್ನು ಮುಚ್ಚಿ ಹಣ ಹಾಗೂ ಚಿನ್ನಕ್ಕೆ ಬೇಡಿಕೆಯಿಟ್ಟ ಕಲ್ಲು ಹೃದಯದವರಿಗೆ ರಾಧ ಅವರೇ ತಮ್ಮ ಬಳಿಯಿದ್ದ ಒಡವೆಗಳನ್ನು ಬಿಚ್ಚಿ ಕೊಟ್ಟಿದ್ದಾರೆ, ಬೀರೂವಿನಲ್ಲಿದ್ದ ಒಡವೆಗಳನ್ನು ಕೊಟ್ಟಿದ್ದಾರೆ. ‘ನನ್ನನ್ನೇನು ಮಾಡಬೇಡಿ, ಎಲ್ಲವನ್ನೂ ತಕೊಂಡೋಗಿ ನನ್ನನ್ನೇನು ಮಾಡಬೇಡಿ, ಯಾರಿಗೂ ಹೇಳಲ್ಲ’ ಅಂತ ಆ ಅಮ್ಮ ಅಂಗಲಾಚಿದರಂತೆ, ಆದರೆ ಕಲ್ಲು ಹೃದಯಗಳಿಗೆ ಕೇಳಬೇಕಲ್ಲ, ಒಬ್ಬ ಅಮ್ಮನ ಕೈ ಹಿಡಿದುಕೊಂಡರೆ ಮತ್ತೊಬ್ಬ ಕುತ್ತಿಗೆ ಹಿಚುಕಿ ಸಾಯಿಸಿದನಂತೆ, ಸಾಯಿಸಿದ್ದೇಕೆ ಅಂತ ಪೊಲೀಸರು, ಗ್ರಾಮಸ್ಥರು ಕೇಳಿದಾಗ ‘ನಾವೇ ಮಾಡಿದೂಂತಾ ಅಮ್ಮ ಹೇಳಿಬಿಟ್ಟರೆ ಎಂಬ ಹೆದರಿಕೆಯಿಂದ’ ಅಂತ ಪೊಲೀಸರಿಗೆ ಹೇಳಿಕೆ ನೀಡಿದ್ದಾರಂತೆ ಪಾಪಿಗಳು.

ಸಿಕ್ಕಿದ್ಹೇಗೆ..?

ಫೆ. 21 ರಂದೇ ಕೊಲೆಯಾಗಿದ್ದರೂ ಗೊತ್ತಾಗಿದ್ದು, 24 ರಂದು. ಸಾಮಾನ್ಯ ಸಾವು ಅಲ್ಲ ಇದೊಂದು ಕೊಲೆ ಎಂಬ ಸಂಶಯ ಎಲ್ಲರಲ್ಲೂ ಮೂಡಿತ್ತು. ಅದರಲ್ಲೂ ಬಲವಾದ ಸಂಶಯ ಮೂಡಿದ್ದು, ಶೋಭಾ ಅವರ ಮಗನಿಗೆ ತಾ. 21 ರಂದು ಈ ಮೂವರು ತಡರಾತ್ರಿ ಮನೆಗೆ ಬಂದಿದ್ದು, ನಂತರ ಮರುದಿನವೇ ಲೈನ್‍ಮನೆ ಖಾಲಿ ಮಾಡಿ ಹೋಗಿದ್ದನ್ನು ಗಮನಿಸಿದ ಅವರು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ಇದರ ಜಾಡನ್ನು ಹಿಡಿದ ಪೊಲೀಸರ ತನಿಖಾ ತಂಡ ಇಂದು ಮೂವರನ್ನು ಮೈಸೂರಿನಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕದ್ದ ಮಾಲನ್ನು ಮೈಸೂರಿನಲ್ಲಿ ಮಾರಾಟ ಮಾಡಿರುವದಾಗಿ ತಿಳಿದು ಬಂದಿದೆ.

ಎಚ್ಚರ ಅಗತ್ಯ

ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಾರ್ಮಿಕರ ಸೋಗಿನಲ್ಲಿ ಕೊಡಗಿನಲ್ಲಿ ನೆಲೆಸಿರುವವರಿಂದ ಅಗಿಂದ್ದಾಗೆ ಅನಾಹುತಗಳು ಸಂಭವಿಸುತ್ತಲೇ ಇವೆ ಈ ಬಗ್ಗೆ ಜಿಲ್ಲೆಯ ಬೆಳೆಗಾರರು ಮಾತ್ರವಲ್ಲದೆ ಕಾರ್ಮಿಕರು ಕೂಡ ಎಚ್ಚರ ವಹಿಸುವದು ಅತ್ಯಗತ್ಯವಾಗಿದೆ. ಅಪರಿಚಿತರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವದಲ್ಲದೆ, ಸಾಮಾಜಿಕವಾಗಿಯೂ ಜಾಗ್ರತೆ ಮೂಡಿಸುವದೊಳಿತು. ಇಲ್ಲವಾದಲ್ಲಿ ಕೊಡಗಿಗೆ ಗಂಡಂತರ ತಪ್ಪಿದಲ್ಲ..!

- ಕುಡೆಕಲ್ ಸಂತೋಷ್