ಮಡಿಕೇರಿ, ಫೆ. 28: ಪಾಕಿಸ್ತಾನ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ತಾ. 1ರಂದು (ಇಂದು) ಬಿಡುಗಡೆಯಾಗುವ ಸಾಧ್ಯತೆ ಇದೆ.
ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದ ಪಾಕಿಸ್ತಾನ ಅಭಿನಂದನ್ ಬಿಡುಗಡೆ ಮಾಡುವದಾಗಿ ಹೇಳಿಕೆ ನೀಡಿದೆ. ಪಾಕಿಸ್ತಾನದ ಸಂಸತ್‍ನಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಶಾಂತಿ ಪ್ರಕ್ರಿಯೆಗೆ ತಾವು ನೀಡುತ್ತಿರುವ ಗೌರವವೆಂದು ಇಮ್ರಾನ್ ಖಾನ್ ಹೇಳಿದ್ದಾರೆ.ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗಡಾಯಿಸಿರುವ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಅಲ್ಲಿನ ಸಚಿವ ಮೊಹಮ್ಮದ್ ಖುರೇಷಿ ಹೇಳಿದ ಕೆಲ ತಾಸುಗಳಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಇಂಗಿತವನ್ನು ಪಾಕಿಸ್ತಾನ ಪ್ರಧಾನಿ ಕೂಡಾ ವ್ಯಕ್ತಪಡಿಸಿದ್ದಾರೆ. ಶಾಂತಿಯನ್ನು ನಾವು ಬಯಸುತ್ತೇವೆ. ಭಾರತದ ವಾಯುಪಡೆ ಪೈಲಟ್ ಬಿಡುಗಡೆ ಮಾಡಿ ಮೊದಲ ಹಂತವಾಗಿ ಮಾತುಕತೆ ನಡೆಸುವದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.ನಿನ್ನೆ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಜೆಟ್ ಪತನಗೊಂಡು ವಿಂಗ್ ಕಮಾಂಡರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದರು. ನಂತರ ಅಲ್ಲಿನ ಜನತೆ ಅವರನ್ನು ಹಿಡಿದು ಥಳಿಸಿ ಪಾಕ್ ಸೇನೆ ವಶಕ್ಕೆ ನೀಡಿದ್ದರು.ಅಭಿನಂದನ್ ಪಾಕಿಸ್ತಾನದ ವಶಕ್ಕೆ ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಭಾರತದಾದ್ಯಂತ ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಭಿನಂದನ್
(ಮೊದಲ ಪುಟದಿಂದ) ಸುರಕ್ಷಿತವಾಗಿ ಬಿಡುಗಡೆಯಾಗಲಿ ಎಂದು ಜನತೆ ಪ್ರಾರ್ಥಿಸುತ್ತಿದ್ದರು.
ಅಭಿನಂದನ್ ವರ್ಥಮಾನ್ ಭಾರತಕ್ಕೆ ಹಿಂತಿರುಗುವವರೆಗೂ ಪಾಕಿಸ್ತಾನದ ಜೊತೆಗೆ ಯಾವದೇ ಮಾತುಕತೆ ಇಲ್ಲ ಎಂದು ಭಾರತ ದೃಢ ನಿಲುವು ತಾಳಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟು ಬಗೆಹರಿದು ಸದ್ಯದಲ್ಲೇ ಎರಡೂ ದೇಶಗಳೂ ಒಂದು ಸಿಹಿ ಸುದ್ದಿ ನೀಡಲಿವೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.
ಸೇನಾ ಮುಖ್ಯಸ್ಥರ ಸುದ್ದಿಗೋಷ್ಠಿ
ಪಾಕಿಸ್ತಾನ ಯಾವದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದರೆ ಎದಿರೇಟು ನೀಡಲು ಭಾರತೀಯ ಸೇನೆ ಸಿದ್ಧವಿರುವದಾಗಿ ಭೂ, ನೌಕಾ ಹಾಗೂ ವಾಯು ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ, ಸೇನಾ ಮೇಜರ್ ಜನರಲ್ ಸುರೇಂದ್ರ ಸಿಂಗ್ ಬಹಾಲ್, ನೌಕಾಪಡೆಯ ರಿಯರ್ ಅಡ್ಮಿರಲ್ ಡಿ.ಎಸ್. ಗುಜ್ರಾಲ್, ವಾಯುಪಡೆಯ ಏರ್‍ವೈಸ್ ಮಾರ್ಷಲ್ ಆರ್.ಜಿ.ಕೆ. ಕಪೂರ್, ದೇಶಕ್ಕೆ ಭದ್ರತೆ ಹಾಗೂ ನಾಗರಿಕರಿಗೆ ರಕ್ಷಣೆ ಒದಗಿಸಲು ದೃಢವಾದ ಕ್ರಮ ಕೈಗೊಳ್ಳಲು ಸಿದ್ಧವಿರುವದಾಗಿ ಘೋಷಿಸಿದರು.
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನಗಳು ಭಾರತದತ್ತ ಬರುತ್ತಿರುವದು ರಡಾರ್‍ನಲ್ಲಿ ಪತ್ತೆಯಾಗಿತ್ತು. ನಮ್ಮ ನೆಲೆಗಳನ್ನು ಗುರಿಯಾಗಿ ದಾಳಿ ನಡೆಸಲು ಎಫ್ -16 ವಿಮಾನಗಳು ಬರುತ್ತಿರುವದು ಪತ್ತೆಯಾಗಿದ್ದರಿಂದ; ಪ್ರತಿ ದಾಳಿ ನಡೆಸಿ ಆ ವಿಮಾನವನ್ನು ಹೊಡೆದುರುಳಿಸ ಲಾಯಿತು ಎಂದು ತಿಳಿಸಿದರು.
ಈ ಕಾರ್ಯಾಚರಣೆ ವೇಳೆಯಲ್ಲಿ ನಮ್ಮ ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ. ದಾಳಿ ಬಗ್ಗೆ ಪಾಕಿಸ್ತಾನ ಹಲವು ಸುಳ್ಳು ಹೇಳಿಕೆಗಳನ್ನು ನೀಡಿತ್ತು. ಮೊದಲಿಗೆ ಮೂರು ಪೈಲಟ್‍ಗಳಿದ್ದಾರೆ ಎಂದಿದ್ದ ಪಾಕಿಸ್ತಾನ ನಂತರ ಒಬ್ಬರು ಪೈಲಟ್ ಇದ್ದರೆಂದು ಹೇಳಿಕೆ ನೀಡಿತ್ತು ಎಂದು ಹೇಳಿದರು.
ಎಫ್-16 ವಿಮಾನಗಳು ಭಾರತದ ಗಡಿ ಪ್ರವೇಶಿಸಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಅದರ ಬಿಡಿ ಭಾಗಗಳನ್ನು ಭಾರತದ ಗಡಿಪ್ರದೇಶದೊಳಗೆ ವಶಪಡಿಸಿ ಕೊಂಡಿರುವದಾಗಿ ಆರ್ ಜಿಕೆ ಕಪೂರ್ ಹೇಳಿದರು. ಅಲ್ಲದೆ ಗೋಷ್ಠಿಯಲ್ಲಿ ಪಾಕ್ ವಿಮಾನದ ಅವಶೇಷಗಳನ್ನು ಪ್ರದರ್ಶಿಸಿದರು.
ಆದರೂ ಪಾಕಿಸ್ತಾನದ ಜೆಟ್‍ಗಳು ಬಾಂಬ್‍ಗಳನ್ನು ಹಾಕಿವೆ. ಆದರೆ, ಯಾವದೇ ಹಾನಿ ಸಂಭವಿಸಿಲ್ಲ ಎಂದ ಕಪೂರ್, ವಿಂಗ್ ಕಮಾಂಡರ್ ಅಭಿನಂದನ್ ತಾ. 1ರಂದು (ಇಂದು) ಸ್ವದೇಶಕ್ಕೆ ಮರಳುತ್ತಿರುವದರಿಂದ ವಾಯುಪಡೆ ಸಂತಸವಾಗಿರುವದಾಗಿ ಹೇಳಿದರು.
ಸೇನಾ ಮುಖ್ಯಸ್ಥ ಬೆಹಾಲ್ ಮಾತನಾಡಿ, ತಾವು ಎಂದೂ ಶಾಂತಿಯನ್ನು ಬಯಸುತ್ತಿದ್ದರೂ, ಪಾಕಿಸ್ತಾನದ ಯಾವದೇ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದೇವೆ ಎಂದರು.